ADVERTISEMENT

ಸ್ಮಶಾನ ಭೂಮಿ ಮಂಜೂರಾತಿಗೆ ಮಾಹಿತಿ ಸಲ್ಲಿಸಿ

ದೌರ್ಜನ್ಯ ಪ್ರಕರಣಗಳ ಜಾಗೃತಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 3:34 IST
Last Updated 20 ಡಿಸೆಂಬರ್ 2020, 3:34 IST

ಕಲಬುರ್ಗಿ: ‘ಪರಿಶಿಷ್ಟ ಸಮುದಾಯದವರು ಮೃತಪಟ್ಟಾಗ ಅಂತ್ಯಸಂಸ್ಕಾರಕ್ಕಾಗಿ ಭೂಮಿ ಇಲ್ಲದ ಕಡೆ ಮಂಜೂರು ಮಾಡಲು ಲಭ್ಯವಿರುವ ಸರ್ಕಾರಿ ಜಮೀನು ಅಥವಾ ಖಾಸಗಿಯಾಗಿ ಭೂಮಿ ಖರೀದಿಸುವ ಕುರಿತು ಕೂಡಲೇ ಮಾಹಿತಿ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಸೂಚಿಸಿದರು.

ನಗರದಲ್ಲಿ ಶನಿವಾರ ನಡೆದ ಅನುಸೂಚಿತ ಜಾತಿ/ ಅನುಸೂಚಿತ ಪಂಗಡಗಳ ದೌರ್ಜನ್ಯ ಪ್ರಕರಣಗಳ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಸ್ಮಶಾನ ಭೂಮಿ ಮಂಜೂರಾತಿ ಸಂಬಂಧ ಜೇವರ್ಗಿ ಮತ್ತು ಆಳಂದ ತಾಲ್ಲೂಕಿನಿಂದ ಮಾಹಿತಿ ಬಂದಿದ್ದು, ಉಳಿದ ತಹಶೀಲ್ದಾರರು ಕೂಡಲೇ ವರದಿ ನೀಡಬೇಕು’ ಎಂದರು.

‘ದೌರ್ಜನ್ಯ ಪ್ರಕರಣದಲ್ಲಿ ಎಫ್‌ಐಆರ್‌ ಸಲ್ಲಿಸಿದ ನಂತರ ಸಂತ್ರಸ್ತ ಎಸ್‌.ಸಿ., ಎಸ್.ಟಿ ಸಮುದಾಯದವರಿಗೆ ಮೊದಲನೇ ಹಂತದ ಪರಿಹಾರ ಮೊತ್ತ ತಕ್ಷಣವೇ ನೀಡಬೇಕು ಮತ್ತು ಪೊಲೀಸ್ ಇಲಾಖೆಯಿಂದ ಚಾರ್ಜ್‌ಶೀಟ್ ಸಲ್ಲಿಕೆ ವಿಳಂಬವಾಗಬಾರದು’ ಎಂದು ಅಧಿಕಾರಿಗಳಿಗೆ ತಿಳಿಸಿದರು.

ADVERTISEMENT

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಮಾತನಾಡಿ, ‘ನಗರದಲ್ಲಿ 15 ಮತ್ತು ಗ್ರಾಮೀಣ ಭಾಗದಲ್ಲಿ 21 ಪರಿಶಿಷ್ಟ ದೌರ್ಜನ್ಯ (ಜಾತಿ ನಿಂದನೆ) ಪ್ರಕರಣಗಳು ದಾಖಲಾಗಿವೆ. ಇದಲ್ಲದೆ 3 ಕೊಲೆ, ಅತ್ಯಾಚಾರ ಸಹ ಪ್ರಕರಣಗಳು ಸೇರಿವೆ. 2018ನೇ ಸಾಲಿನಿಂದ ನವೆಂಬರ್ 2020ರವರೆಗೆ ಒಟ್ಟು 15 ಪ್ರಕರಣಗಳಲ್ಲಿ ‘ಬಿ’ ರಿಪೋರ್ಟ್‌ ಸಲ್ಲಿಸಲಾಗಿದೆ’ ಎಂದು ವಿವರಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಅಲ್ಲಾಭಕ್ಷ ಮಾತನಾಡಿ, ‘ಪ್ರಸಕ್ತ 2020-21ನೇ ಸಾಲಿನಲ್ಲಿ 48 ಮತ್ತು ಹಿಂದಿನ ಸಾಲಿನ 5 ಪ್ರಕರಣಗಳು ಸೇರಿದಂತೆ ಒಟ್ಟು 53 ಪ್ರಕರಣಗಳಲ್ಲಿ 25 ಪ್ರಕರಣಗಳನ್ನು ವಿಲೇವಾರಿ ಮಾಡಿ ಸಂತ್ರಸ್ತರಿಗೆ ₹ 48.12 ಲಕ್ಷ ಪರಿಹಾರ ಧನ ನೀಡಲಾಗಿದೆ. ಇನ್ನೂ 33 ಪ್ರಕರಣಗಳು ವಿಲೇವಾರಿಗೆ ಬಾಕಿ ಇವೆ’ ಎಂದರು.

ದೌರ್ಜನ್ಯದಲ್ಲಿ ಮರಣ ಹೊಂದಿದ ಎಸ್.ಸಿ/ಎಸ್.ಟಿ. ಕುಟುಂಬದ ವಾರಸುದಾರರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡುವ ಪ್ರಸ್ತಾವನೆಗಳ ಕುರಿತು ಸಹ ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಎಸ್ಸಿ/ಎಸ್ಟಿ ದೌರ್ಜನ್ಯ ನಿಯಂತ್ರಣ ಜಿಲ್ಲಾ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿಯ ಸದಸ್ಯರಾದ ಚನ್ನಪ್ಪ ಆರ್. ಸುರಪುರಕರ್, ಜಿ. ಗೋಪಾಲರಾವ, ಸಿದ್ಧಾರೂಢ ಸಮತಾ ಜೀವನ, ಅನಿಲಕುಮಾರ ಜಾಧವ, ಸರ್ಕಾರಿ ಅಭಿಯೋಜಕ ನರಸಿಂಹಲು ಸೇರಿದಂತೆ ಸಮಾಜ ಕಲ್ಯಾಣ, ಪೊಲೀಸ್, ಅರಣ್ಯ ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.