ಕಲಬುರಗಿ: ‘ಡೆಂಗಿ ಹಾಗೂ ಸಾಂಕ್ರಾಮಿಕ ರೋಗ ಹರಡುವಿಕೆಗೆ ಕಾರಣವಾಗುವ ಈಡಿಸ್ ಸೊಳ್ಳೆಗಳ ಉತ್ಪತ್ತಿ ತಾಣಗಳ ನಿರ್ಮೂಲನೆ ಮಾಡಬೇಕು. ಲಾರ್ವಾ ಸಮೀಕ್ಷೆ ತೀವ್ರಗೊಳಿಸಬೇಕು’ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಡಳಿತ ಕಚೇರಿಯ ಸಭಾಂಗಣದಲ್ಲಿ ಗುರುವಾರ ಡೆಂಗಿ ನಿಯಂತ್ರಣ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ಜರುಗಿದ ಜಿಲ್ಲಾ ಸಮನ್ವಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಡೆಂಗಿ ಜ್ವರವು ಈಡಿಸ್ ಜಾತಿಯ ಸೊಳ್ಳೆ ಕಚ್ಚುವಿಕೆಯಿಂದ ಹರಡುವ ರೋಗ. ಈ ಸೊಳ್ಳೆಗಳನ್ನು ತಿನ್ನುವ ಗಪ್ಪೆ ಮೀನುಗಳನ್ನು ವಿಶೇಷವಾಗಿ ಚಿತ್ತಾಪುರ, ಶಹಾಬಾದ, ಸೇಡಂ ತಾಲ್ಲೂಕಿನ ಕಲ್ಲು ಗಣಿಗಳ ನಿಂತ ನೀರಿನಲ್ಲಿ ಬಿಡಬೇಕು. ಇದಲ್ಲದೆ ಬಾವಿ, ನೀರು ನಿಲ್ಲುವ ತಗ್ಗು ಪ್ರದೇಶ, ವಾಟರ್ ಟ್ಯಾಂಕ್‌ನಲ್ಲಿ ಬಿಡಬಹುದಾಗಿದೆ. ಇದನ್ನು ಅಭಿಯಾನದ ರೂಪದಲ್ಲಿ ಮಾಡಬೇಕು’ ಎಂದು ನಿರ್ದೇಶನ ನೀಡಿದರು.
‘ಈಡಿಸ್ ಸೊಳ್ಳೆಗಳು ನೀರು ಶೇಖರಣೆಯ ತೊಟ್ಟಿಗಳು, ಬ್ಯಾರಲ್‌ಗಳು, ಡ್ರಮ್‌ಗಳು, ಹೂವಿನ ಕುಂಡ ಮಾತ್ರವಲ್ಲದೇ ಮನೆಗಳ ಸುತ್ತ ಬಯಲಲ್ಲಿ ಬಿಸಾಡಿದ ಪಿಂಗಾಣಿ ವಸ್ತುಗಳು, ಪ್ಲಾಸ್ಟಿಕ್ ವಸ್ತುಗಳು, ಟೈರ್‌ಗಳು, ತೆಂಗಿನ ಚಿಪ್ಪು ಮತ್ತು ಇತರೆ ವಸ್ತುಗಳಲ್ಲಿ ನೀರು ಸಂಗ್ರಹವಾದಾಗ ಉತ್ಪತ್ತಿಯಾಗುತ್ತವೆ. ಹೀಗಾಗಿ ನೀರು ನಿಲ್ಲದಂತೆ ಸಾರ್ವಜನಿಕರಿಗೆ ಮನೆ-ಮನೆ ಹೋಗಿ ಅರಿವು ಮೂಡಿಸಬೇಕು. ಸಾರಿಗೆ ಸಂಸ್ಥೆಯ ಕಾರ್ಯಾಗಾರ, ಡಿಪೊಗಳಲ್ಲಿನ ಸಿಬ್ಬಂದಿಗೂ ಜಾಗೃತಿ ಮೂಡಿಸಬೇಕು. ಪೋಸ್ಟರ್ ಅಂಟಿಸುವ ಮೂಲಕ ವ್ಯಾಪಕ ಪ್ರಚಾರ ನಡೆಸಬೇಕು’ ಎಂದರು.
ಜಿಲ್ಲಾ ಕೀಟಶಾಸ್ತ್ರಜ್ಞ ಚಾಮರಾಜ ದೊಡ್ಡಮನಿ ಮಾತನಾಡಿ, ‘ಡೆಂಗಿ ಜ್ವರ ಬಾಧಿತರ ಚಿಕಿತ್ಸೆಗೆ ಜಿಮ್ಸ್ ಆಸ್ಪತ್ರೆಯಲ್ಲಿ 20, ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ತಲಾ 10 ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಲಾ 5 ಹಾಸಿಗೆಗಳನ್ನು ಮೀಸಲಿರಿಸಲಾಗಿದೆ’ ಎಂದರು.
ವಿಶ್ವ ಆರೋಗ್ಯ ಸಂಸ್ಥೆಯ ಪೋಲಿಯೊ ವಿಚಕ್ಷಣಾ ಅಧಿಕಾರಿ ಡಾ.ಅನೀಲ ತಾಳಿಕೋಟಿ ಮಾತನಾಡಿದರು. ಇದೇ ವೇಳೆ, ಡೆಂಗಿ ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಿದ್ಧಪಡಿಸಲಾದ ಪೋಸ್ಟರ್‌ಗಳನ್ನು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಬಿಡುಗಡೆ ಮಾಡಿದರು.
ಸಭೆಯಲ್ಲಿ ಜಿಲ್ಲಾ ಸರ್ಜನ್ ಡಾ. ರುಕಿಯಾ ಅಸ್ನಾ ರಬ್ಹಾ, ಆರ್‌ಸಿಎಚ್ಒ ಡಾ.ಸಿದ್ರಾಮ ಪಾಟೀಲ, ಜಿಲ್ಲಾ ಪಂಚಾಯಿತಿ ಸಿಪಿಒ ಎಸ್.ಎಸ್.ಮಠಪತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಠೋಡ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರಭು ದೊರೆ ಸೇರಿದಂತೆ ಆರೋಗ್ಯ ಇಲಾಖೆಯ ಕಾರ್ಯಕ್ರಮ ಅಧಿಕಾರಿಗಳು, ತಾಲ್ಲೂಕು ಆರೋಗ್ಯಾಧಿಕಾರಿಗಳು ಭಾಗವಹಿಸಿದ್ದರು. ಡಿಎಚ್ಒ ಡಾ.ಶರಣಬಸಪ್ಪ ಕ್ಯಾತನಾಳ ಸ್ವಾಗತಿಸಿದರು. ಚಂದ್ರಕಾಂತ ಏರಿ ವಂದಿಸಿದರು.
‘ಕಸ ಬಿಸಾಡುವವರಿಗೆ ದಂಡ ಹಾಕಿ’
‘ಕಲಬುರಗಿ ಮಹಾನಗರದಲ್ಲಿ ಕಳೆದ ಕೆಲವು ವರ್ಷಗಳಿಂದ ಡೆಂಗಿ ಪಾಸಿಟಿವ್ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದೆ. ಇದಕ್ಕೆ ಮೂಲ ಕಾರಣ ಅನೈರ್ಮಲ್ಯ. ಹೀಗಾಗಿ ಮಹಾನಗರ ಪಾಲಿಕೆಯಿಂದ ಸ್ವಚ್ಛತಾ ಅಭಿಯಾನದ ಜೊತೆಗೆ ಕಸ ಬಿಸಾಡುವವರಿಗೆ ದಂಡ ಹಾಕಬೇಕು. ರಸ್ತೆ ನಿವೇಶನದ ಮೇಲಿರುವ ಅನುಪಯುಕ್ತ ಕಟ್ಟಡದ ಅವಶೇಷಗಳನ್ನು ತೆರವುಗೊಳಿಗೊಳಿಸಲು ಕ್ರಮವಹಿಸಬೇಕು’ ಎಂದು ಪಾಲಿಕೆ ಆಯುಕ್ತ ಅವಿನಾಶ ಶಿಂದೆ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ‘ವಸತಿನಿಲಯ ಶಾಲೆ-ಕಾಲೇಜು ಮತ್ತು ಗ್ರಾಮ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಪೌರ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಬೇಕು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.