ADVERTISEMENT

ಡಿಸಿಸಿ ಬ್ಯಾಂಕ್ ಸೂಪರ್ ಸೀಡ್: ತನಿಖಾ ವರದಿಗೆ ಡಿಸಿಎಂ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 10:50 IST
Last Updated 12 ಡಿಸೆಂಬರ್ 2019, 10:50 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ಕಲಬುರ್ಗಿ: ಅವ್ಯವಹಾರ, ಅಧಿಕಾರ ದುರುಪಯೋಗ, ನಿಯಮಗಳ ಉಲ್ಲಂಘನೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕಲಬುರ್ಗಿ-ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ಸೂಪರ್ ಸೀಡ್ ಮಾಡುವ ನಿಟ್ಟಿನಲ್ಲಿ ತನಿಖಾ ವರದಿ ಹಾಗೂ ವಾಸ್ತವ ವರದಿ ಸಲ್ಲಿಸುವಂತೆ ಉಪಮುಖ್ಯಮಂತ್ರಿಯಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸಹಕಾರಿ ಇಲಾಖೆ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷ ತೆ ವಹಿಸಿ, ಜಿಲ್ಲೆ 2.20 ಲಕ್ಷ ರೈತರ ಪೈಕಿ ಕೇವಲ 50 ಸಾವಿರ ರೈತರಿಗೆ ಮಾತ್ರ ಸಾಲ ವಿತರಣೆ ಅದರಲ್ಲೂ ಬೇಕಾದವರಿಗೆ ಮಾತ್ರ ಬೆಳೆಸಾಲ ವಿತರಣೆ ಮಾಡಿರುವುದು ಆಡಳಿತ ದುರುಪಯೋಗಕ್ಕೆ ಹಿಡಿದ ಕನ್ನಡಿಯಾಗಿದ್ದರಿಂದ ಬ್ಯಾಂಕ್ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಆದಷ್ಟು ಬೇಗನೇ ವರದಿ ನೀಡಬೇಕೆಂದು ಸಹಕಾರಿ ಇಲಾಖಾ ಉಪನಿಬಂಧಕರಿಗೆ ನಿರ್ದೇಶನ ನೀಡಿದರಲ್ಲದೇ ಈ ಸಂಬಂಧ ಸಭೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಿದರು.

ಶಾಸಕರಾದ ರಾಜಕುಮಾರ ಪಾಟೀಲ್, ಪ್ರಿಯಾಂಕ್ ಖರ್ಗೆ, ಸುಭಾಷ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಬ್ಯಾಂಕ್ ನ್ನು ಕೆಲವರು ಸ್ವಂತ ಎನ್ನುವಂತೆ ಮಾಡಿಕೊಂಡಿದ್ದಾರೆ. ಬ್ಯಾಂಕ್‌ನ ನಿರ್ದೇಶಕರು, ಹಿಂದಿನ ಅಧ್ಯಕ್ಷರು ತಮ್ಮ ಮನೆಯ ಸದಸ್ಯರ ಹಾಗೂ ಕೆಲವರ ಹೆಸರಿನಲ್ಲಿ ಸಾಲ ಪಡೆದು ಬ್ಯಾಂಕ್ ದಿವಾಳಿಗೆ ಕಾರಣರಾಗಿದ್ದಾರೆ. ಅದೇ ರೀತಿ ಬ್ಯಾಂಕ್‌ನ ಅಧಿಕಾರಿಗಳು, ಸಿಬ್ಬಂದಿಯವರೂ ಇದಕ್ಕೆ ಕೈ ಜೋಡಿಸಿದ್ದಾರೆ. ಇದಕ್ಕೆ ಪರಿಹಾರ ಕ್ರಮ ಕೈಗೊಳ್ಳಿ ಎಂದರು.

ADVERTISEMENT

ಶಾಸಕ ತೇಲ್ಕೂರ ಅವರು ಐದು ವರ್ಷ ಸೂಪರ್ ಸೀಡ್ ಮಾಡಿದಲ್ಲಿ ಮಾತ್ರ ಬ್ಯಾಂಕ್ ಉಳಿಯಲು ಸಾಧ್ಯ ಎಂದು ಆಗ್ರಹಿಸಿದರು.ತನಿಖಾ ವರದಿ ಬಂದ ನಂತರ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಸಭೆಗೆ ಡಿಸಿಎಂ ಸ್ಪಷ್ಟ ಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.