ADVERTISEMENT

ಚಿಂಚೋಳಿ | ನೀರಿನ ಸಮಸ್ಯೆ ಪರಿಹಾರಕ್ಕೆ ಗಡುವು 

ಶಾಸಕರ ಜನಸ್ಪಂದನ ಸಭೆ: ಸ್ಲಂ ಬೋರ್ಡ್‌ ಕಾರ್ಯನಿರ್ವಹಣೆಗೆ ಸಮಾಧಾನ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 5:26 IST
Last Updated 15 ಜುಲೈ 2024, 5:26 IST
ಚಿಂಚೋಳಿಯ ಪುರಸಭೆ ಕಚೇರಿಯಲ್ಲಿ ಗುರುವಾರ ನಡೆದ ಜನಸ್ಪಂದನ ಸಭೆಯಲ್ಲಿ ಶಾಸಕ ಡಾ. ಅವಿನಾಶ ಜಾಧವ ಮಾತನಾಡಿದರು
ಚಿಂಚೋಳಿಯ ಪುರಸಭೆ ಕಚೇರಿಯಲ್ಲಿ ಗುರುವಾರ ನಡೆದ ಜನಸ್ಪಂದನ ಸಭೆಯಲ್ಲಿ ಶಾಸಕ ಡಾ. ಅವಿನಾಶ ಜಾಧವ ಮಾತನಾಡಿದರು   

ಚಿಂಚೋಳಿ: ಪುರಸಭೆ ವ್ಯಾಪ್ತಿಯ ಅವಳಿ ಪಟ್ಟಣಗಳಾದ ಚಿಂಚೋಳಿ– ಚಂದಾಪುರದಲ್ಲಿ ನಾಗರಿಕರಿಗೆ  ಕುಡಿಯುವ ನೀರಿನ ಪೂರೈಕೆ ಸಮಸ್ಯೆ ನಿವಾರಿಸಬೇಕು. ಎಲ್ಲಾ ಬಡಾವಣೆಗಳಿಗೆ ಸಕಾಲಕ್ಕೆ ನೀರು ಪೂರೈಸಲು 15 ದಿನಗಳಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಾ. ಅವಿನಾಶ ಜಾಧವ ಅವರು ಗಡುವು ನೀಡಿದರು.

ಇಲ್ಲಿನ ಪುರಸಭೆ ಕಾರ್ಯಾಲಯದಲ್ಲಿ ಶಾಸಕ ಡಾ. ಅವಿನಾಶ ಜಾಧವ ಅವರು ಹಮ್ಮಿಕೊಂಡ ಜನಸ್ಪಂದನ ಸಭೆಯಲ್ಲಿ ಗುರುವಾರ ಮಾತನಾಡಿದರು.

ಕೊಳಚೆ ಪ್ರದೇಶ ನಿರ್ಮೂಲನಾ ಮಂಡಳಿಯ ಕಾರ್ಯನಿರ್ವಹಣೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ನೀಮಾ ಹೊಸಳ್ಳಿ ರಸ್ತೆಯಲ್ಲಿ ನಿರ್ಮಿಸಿದ ಮಂಡಳಿಯ ಮನೆಗಳು ದುರಸ್ತಿಗೊಳಿಸಿ ಬಡವರಿಗೆ ಹಂಚಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ADVERTISEMENT

ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಮನೆ ಮಂಜೂರಿಯಲ್ಲಿ ಅವ್ಯವಹಾರ, ವಿದ್ಯುತ್, ವಿದ್ಯುತ್ ಕಂಬ ವಿಸ್ತರಣೆ, ಕಸ ಎತ್ತುವುದು, ಚರಂಡಿ ಸ್ವಚ್ಛತೆ, ಮನೆಗಳಿಂದ ಕಸ ಸಂಗ್ರಹ, ಬೀದಿ ದೀಪ ಅಳವಡಿಕೆ ಹಾಗೂ ರಂಗಮಂದಿರ ಕಾಮಗಾರಿ ಅಪೂರ್ಣ, ಶಾಪಿಂಗ್ ಕಾಂಪ್ಲೆಕ್ಸ್ ಕಾಮಗಾರಿ ನನೆಗುದಿಗೆ ಬಿದ್ದ ಬಗ್ಗೆ ಜನರು ಶಾಸಕರ ಎದುರು ಅಲವತ್ತುಕೊಂಡರು.

ಪುರಸಭೆ ಸದಸ್ಯ ಆನಂದ ಟೈಗರ್, ನಾಗೇಂದ್ರಪ್ಪ ಗುರಂಪಳ್ಳಿ, ಗೋಪಾಲರಾವ್ ಕಟ್ಟಿಮನಿ ಮೊದಲಾದವರು ಮಾತನಾಡಿದರು.

ಪುರಸಭೆ ಸದಸ್ಯರಾದ ಶಿವಕುಮಾರ ಪೋಚಾಲಿ, ರೂಪಕಲಾ ಕಟ್ಟಿಮನಿ, ಬಸವರಾಜ ಸಿರ್ಸಿ, ಅಬ್ದುಲ್ ಬಾಷಿತ್, ಜಗನ್ನಾಥ ಗುತ್ತೇದಾರ, ರಾಧಾಬಾಯಿ ಓಲಗಿರಿ, ಮಹಮದ್ ಹಾದಿ ಮೊದಲಾದವರು ಇದ್ದರು.

ಚಿಂಚೋಳಿ ಚಂದಾಪುರ ಪಟ್ಟಣದ ವಿವಿಧ ನಾಗರಿಕರು ತಮ್ಮ ಸಮಸ್ಯೆಗಳನ್ನು ಶಾಸಕರ ಎದುರು ತೋಡಿಕೊಂಡರು. ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ಸ್ವಾಗತಿಸಿದರು. ಸಭೆಯಲ್ಲಿ ತಹಶೀಲ್ದಾರ್‌ ವೆಂಕಟೇಶ ದುಗ್ಗನ್, ಅನಸೂಯಾ ಚವ್ಹಾಣ, ಡಾ. ಮಹಮದ್ ಗಫಾರ್, ಡಾ. ಸಂತೋಷ ಪಾಟೀಲ, ಬಸವರಾಜ ಬೈನೂರು, ಗಿರಿರಾಜ ಸಜ್ಜನ್, ಚೇತನ, ಮೀನಾಕ್ಷಿ ಮೊದಲಾದವರು ಹಾಜರಿದ್ದರು.

ಚಿಂಚೋಳಿ ಪುರಸಭೆಯ ಕಚೇರಿಯಲ್ಲಿ ಜನಸ್ಪಂದನ ಸಭೆಗೂ ಮೊದಲು ಶಾಸಕ ಡಾ. ಅವಿನಾಶ ಜಾಧವ ಗುರುವಾರ ಸಸಿನೆಟ್ಟರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.