ಕಲಬುರ್ಗಿ: ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ವತಿಯಿಂದ ತರಬೇತಿ ಪಡೆದ ಪ್ರವಾಸಿ ಮಾರ್ಗದರ್ಶಿಗಳಿಗೆ ಪ್ರವಾಸಿ ಮಿತ್ರರಂತೆ ಐತಿಹಾಸಿಕ, ಪಾರಂಪರಿಕ ತಾಣಗಳಲ್ಲಿ ಪ್ರವಾಸಿ ಮಾರ್ಗದರ್ಶಿಗಳನ್ನು ನೇಮಕ ಮಾಡಿ ಪ್ರತಿ ತಿಂಗಳು ವೇತನ ನೀಡಬೇಕು ಎಂದು ಆಗ್ರಹಿಸಿ ಸುವರ್ಣ ಕರ್ನಾಟಕ ಪ್ರವಾಸಿ ಮಾರ್ಗದರ್ಶಿಗಳ ಸೇವಾ ಸಂಘದ ಸದಸ್ಯರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಹಲವು ಜನ ಇಲಾಖೆ ವತಿಯಿಂದ ತರಬೇತಿ ಪಡೆದು ಪ್ರವಾಸಿ ಮಾರ್ಗದರ್ಶಿಗಳಾಗಿದ್ದೇವೆ. ಪ್ರವಾಸಿ ಮಾರ್ಗದರ್ಶಿಗಳ ಗುರುತಿನ ಚೀಟಿ ಪಡೆದಿದ್ದೇವೆ. ಆದರೆ, ಕೊರೊನಾ ಪರಿಣಾಮ ಯಾವುದೇ ಆದಾಯವಿಲ್ಲದೇ ಉಪಜೀವನ ನಡೆಸುವುದು ಕಷ್ಟವಾಗಿದೆ. ತಕ್ಷಣ ಕೋವಿಡ್ ಸಹಾಯಧನ ಮಂಜೂರು ಮಾಡಬೇಕು’ ಎಂದರು.
ಈಗಾಗಲೇ ಪ್ರವಾಸೋದ್ಯಮ ಇಲಾಖೆಯಿಂದ ಗೃಹರಕ್ಷಕ ದಳ ಸಿಬ್ಬಂದಿಯನ್ನು ಪ್ರವಾಸಿ ಮಿತ್ರರೆಂದು ನೇಮಕ ಮಾಡಿ ಪ್ರತಿ ತಿಂಗಳು ಇಲಾಖೆಯಿಂದಲೇ ಅವರಿಗೆ ವೇತನ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ನಮಗೂ ನೇಮಕ ಮಾಡಿಕೊಂಡು ವೇತನ ನೀಡಬೇಕು ಎಂದರು.
ಸಂಘದ ಅಧ್ಯಕ್ಷ ಅಯ್ಯಣ್ಣ ಜೆ. ಹಾಲಬಾವಿ, ಮುಖಂಡರಾದ ಸತೀಶ ರಾಠೋಡ, ಶ್ರೀಮಂತ ಎಸ್., ಸಂತೋಷ ಬಿ, ಉಮೇಶ ಜಾಧವ, ಕಾಶಿನಾಥ, ಸುನಂದಾ, ರಾಹುಲ ಒಂಟಿ ಇದ್ದರು.
ಔರಾದಕರ್ ವರದಿ ದೋಷ ಸರಿಪಡಿಸಿ: ಪೊಲೀಸರ ಕರ್ತವ್ಯಕ್ಕೆ ಹಾಗೂ ಅವರ ದುಡಿತಕ್ಕೆ ತಕ್ಕ ಹಾಗೆ ವೇತನವನ್ನು ನಿಗದಿಪಡಿಸಲು ರಾಘವೇಂದ್ರ ಔರಾದ್ಕರ್ ಸಮಿತಿಯನ್ನು ಸರ್ಕಾರ ರಚಿಸಿದೆ. ಆದರೆ ಇಲಾಖೆಯಲ್ಲಿ 10 ರಿಂದ 15 ವರ್ಷ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದವರಿಗೆ ಹಿರಿತನದ ಆಧಾರದ ಮೇಲೆ ವೇತನ ಸರಿಯಾಗಿ ನಿಗದಿ ಪಡಿಸಿರುವುದಿಲ್ಲ. ಹೀಗಾಗಿ, ಈ ಲೋಪವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪೊಲೀಸ್ ಮಹಾಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವಿ ದೇಗಾಂವ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ ಅವರು, ಪೊಲೀಸರು ದಿನದ 24 ಗಂಟೆ ಕರ್ತವ್ಯವನ್ನು ಮಾಡಿರುತ್ತಾರೆ. ಚಳಿ, ಮಳೆ, ಬಿಸಿಲು, ಗಾಳಿ, ಬೆಂಕಿ ಅನ್ನದೆ ಜೀವವನ್ನು ತೆತ್ತು ಹಗಲು–ರಾತ್ರಿ ಸೇವೆ ಸಲ್ಲಿಸುತ್ತಿರುತ್ತಾರೆ. ಸುಮಾರು 95 ರಿಂದ 98 ಸಾವಿರ ಪೊಲೀಸರ ಪರಿಸ್ಥಿತಿ ಹೀಗಾಗಿದೆ. ಎರಡು ವರ್ಷ ಸೇವೆ ಸಲ್ಲಿಸಿದವರಿಗೂ, 10 ವರ್ಷ ಸೇವೆ ಸಲ್ಲಿಸಿದವರೂ ಸಮಾನ ವೇತನ ಸಿಗುತ್ತಿದೆ. ಇದು ಯಾವ ನ್ಯಾಯ ಎಂದರು.
ರಾಜ್ಯದ ಪೊಲೀಸ್ ಸಮುದಾಯದ ಸಮಸ್ಯೆಗಳ ಈಡೇರಿಕೆಗಾಗಿ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಪೋಲಿಸ್ ಅಭಿವೃದ್ಧಿ ಮಂಡಳಿ ಅಥವಾ ಪೊಲೀಸ್ ಕಲ್ಯಾಣ ಮಂಡಳಿ ಸ್ಥಾಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಂಘದ ದಯಾನಂದ ಯಂಕಂಚಿ, ಸಂದೀಪ್ ಭರಣಿ, ಋಷಿ ಬೆನಕನ್ನಳ್ಳಿ, ಶ್ರೀಕಾಂತ್ ರೆಡ್ಡಿ, ಮಹೇಶ್ ಫರತಾಬಾದ, ಮಹಾಂತೇಶ ಹರವಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.