ADVERTISEMENT

‘ಬಿಟ್ಟಿ ಚಾಕರಿ’ ನಿರ್ಮೂಲನೆಗೆ ಕ್ರಮ ಕೈಗೊಳ್ಳಿ

ಜೀವಿಕ ಜೀತ ವಿಮುಕ್ತಿ ಸಂಘಟನೆಯ ನಾರಾಯಣಸ್ವಾಮಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 4:02 IST
Last Updated 1 ಜುಲೈ 2021, 4:02 IST
ನಾರಾಯಣಸ್ವಾಮಿ
ನಾರಾಯಣಸ್ವಾಮಿ   

ಕಲಬುರ್ಗಿ: ‘ಜಿಲ್ಲೆಯಲ್ಲಿ ಬಿಟ್ಟಿ ಚಾಕರಿ ಪದ್ಧತಿ ಹೋಗಲಾಡಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಹಾಗೂ ಸಂತ್ರಸ್ತರಿಗೆ ಸೌಲಭ್ಯ ಕಲ್ಪಿಸಬೇಕು’ ಎಂದು ಎಂದು ಜೀವಿಕ ಜೀತ ವಿಮುಕ್ತಿ ಕರ್ನಾಟಕ ಸಂಘಟನೆಯ ‘ಜಿಲ್ಲಾ ಉಸ್ತುವಾರಿ ಸಂಚಾಲಕ’ ನಾರಾಯಣಸ್ವಾಮಿ ಆಗ್ರಹಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೀತಪದ್ಧತಿಯ ಭಾಗವಾಗಿರುವ ಬಿಟ್ಟಿ ಚಾಕರಿಯನ್ನು ರಾಜ್ಯ ಸರ್ಕಾರ ಈಚೆಗೆ ನಿಷೇಧಿಸಿದೆ. ಆದ್ದರಿಂದ ಪಂಚಾಯಿತಿ ಅಭಿವೃಧ್ಧಿ ಅಧಿಕಾರಿಗಳು ಬಿಟ್ಟಿ ಚಾಕರಿ ಪ್ರಕರಣಗಳು ಕಂಡು ಬಂದಲ್ಲಿ ಜೀತದಾಳುಗಳ ವಿವರವನ್ನು ತಹಶೀಲ್ದಾರ್ ಇಲ್ಲವೆ ಉಪವಿಭಾಗಾಧಿಕಾರಿಗೆ ಸಲ್ಲಿಸಬೇಕು. ಅಲ್ಲದೆ ಎಲ್ಲಾ ಗ್ರಾಮಗಳಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ಸಹಯೋಗದಲ್ಲಿ ಜಾಗೃತಿ ಸಭೆ ಆಯೋಜಿಸಬೇಕು ಎಂದು ಅವರು ತಿಳಿಸಿದರು.

ಜೀತ ವಿಮುಕ್ತಿ ಕರ್ನಾಟಕ ಸಂಸ್ಥೆ ಮಾಡಿದ ಸಮೀಕ್ಷೆ ಪ್ರಕಾರ ಕಲಬುರ್ಗಿ ಜಿಲ್ಲೆಯಲ್ಲಿ 155 ಬಿಟ್ಟಿ ಚಾಕರಿ ಪ್ರಕರಣಗಳು ಕಂಡು ಬಂದಿವೆ. ಬಹುತೇಕ ಪರಿಶಿಷ್ಟ ಜಾತಿ ಕುಟುಂಬಗಳು ಈ ಪದ್ಧತಿಯಲ್ಲಿ ತೊಡಗಿಸಿಕೊಂಡಿವೆ. ಬಿಟ್ಟಿ ಚಾಕರಿ ಮಾಡಲು ನಿರಾಕರಿಸುವ ಕುಟುಂಬಗಳಿಗೆ ಊರಿನಿಂದ ಬಹಿಷ್ಕಾರ ಹಾಕಿದ ಉದಾಹರಣೆಗಳೂ ಇವೆ. ಈ ಪದ್ಧತಿ ಆಚರಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಶೋಷಣೆಗೆ ಒಳಗಾಗಿರುವ ಕುಟುಂಬಗಳೀಗೆ ಪುನರ್ವಸತಿ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.

ADVERTISEMENT

ಬಿಟ್ಟಿ ಚಾಕರಿ ಪದ್ಧತಿಯ ಸಂತ್ರಸ್ತರಿಗೆ ಸೂಕ್ತ ರಕ್ಷಣೆ, ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಜುಲೈ 1ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಡಿಎಂಎಸ್‌ಎಸ್ ಅಧ್ಯಕ್ಷ ನಿಂಗರಾಜ ತಾರಫೈಲ, ಜೀವಿಕ ಜೀತ ವಿಮುಕ್ತಿ ಸಂಘಟನೆ ಸಂಚಾಲಕಿ ಅಮರಾವತಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಜವಳಿ, ಪ್ರಮುಖರಾದ ನರಸಿಂಹಮೂರ್ತಿ, ಚಂದ್ರಕಾಂತ, ನಿಂಗಪ್ಪ ಪಾಟೋಳ್ಳಿ, ದತ್ತು, ಗುಂಡಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.