ಕಲಬುರಗಿ: ‘ಜಿಲ್ಲೆಯ ಅಂಗನವಾಡಿ ಕೇಂದ್ರಗಳ ಮಕ್ಕಳು, ಬಾಣಂತಿಯರು ಹಾಗೂ ಗರ್ಭಿಣಿಯರಿಗೆ ಉತ್ತಮ ಗುಣಮಟ್ಟದ ಮೊಟ್ಟೆಗಳನ್ನು ವಿತರಣೆ ಮಾಡಬೇಕು’ ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಎಸ್.ಸಾರವಾಡ ಆಗ್ರಹಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರು ತಿಂಗಳಿನಿಂದ 6 ವರ್ಷದ ಮಕ್ಕಳಿಗೆ ಮತ್ತು ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಮೊಟ್ಟೆ ನೀಡುವ ಸೃಷ್ಟಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಿಡಿಒಪಿ ಅವರ ಹಂತದಲ್ಲಿ ಬಾಲ ವಿಕಾಸ ಸಮಿತಿ ರಚನೆ ಮಾಡಬೇಕು ಎಂದು 2024ರ ಡಿಸೆಂಬರ್ 17ರಂದು ಸರ್ಕಾರ ಆದೇಶ ಮಾಡಿದೆ’ ಎಂದರು.
‘ಅದರಂತೆ ಬಾಲ ಜಂಟಿ ಸಮಿತಿಗೆ ಮೂರು ತಿಂಗಳ ಮುಂಗಡವಾಗಿ ಹಣ ಜಮೆ ಮಾಡಲು ಸರ್ಕಾರ ಆದೇಶ ಮಾಡಿದೆ. ಆದೇಶ ಮಾಡಿ ಮೂರು ತಿಂಗಳು ಕಳೆದರೂ ಸರ್ಕಾರ ಆದೇಶಗಳನ್ನು ಉಲ್ಲಂಘಿಸಿ ಕಂಪನಿಯೊಂದಕ್ಕೆ ಉಪ ಗುತ್ತಿಗೆ ನೀಡಿ ಸರ್ಕಾರದ ಹಣವನ್ನು ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಇದರಲ್ಲಿ ಶಾಮಿಲಾಗಿರುವುದು ಕಂಡು ಬರುತ್ತದೆ. ಕೂಡಲೇ ಇದನ್ನು ತನಿಖೆ ಮಾಡಬೇಕು. ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಸೋಮು, ಪಿಡ್ಡು, ಆರ್ಯ, ಶರಣು ಪಾಟೀಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.