ADVERTISEMENT

ಕೃಷಿ ಭೂಮಿಯಲ್ಲಿ ಮನೆ: ಫಾರಂ ನಂ.3 ವಿತರಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 10:36 IST
Last Updated 18 ಫೆಬ್ರುವರಿ 2020, 10:36 IST

ಚಿಂಚೋಳಿ: ಕೃಷಿ ಭೂಮಿಯಲ್ಲಿ ಎರಡು–ಮೂರು ದಶಕಗಳ ಹಿಂದೆ ಮನೆ ನಿರ್ಮಿಸಿಕೊಂಡ ಬಡವರಿಗೆ ತಮ್ಮ ಮನೆಯ ಆಸ್ತಿಯ ಫಾರಂ ನಂ.3 ವಿತರಿಸಬೇಕು ಎಂದು ಪಟ್ಟಣದ ಹಿರಿಯರಾದ ಮಾಣಿಕಪ್ಪ ಭಗವಂತಿ ಒತ್ತಾಯಿಸಿದ್ದಾರೆ.

ಇ- ಸ್ವತ್ತು ಅಡಿಯಲ್ಲಿ ಫಾರಂ ನಂ.3 ಬಾರದ ಕಾರಣ ಅನೇಕ ಬಡವರು, ಕೃಷಿಕರು ಬ್ಯಾಂಕುಗಳ ಸಾಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸುಮಾರು 20ರಿಂದ 25 ವರ್ಷಗಳ ಹಿಂದೆ ಹೊಲದ ಮಾಲೀಕನಿಂದ ಲಿಖಿತ ಒಡಂಬಡಿಕೆಯೊಂದಿಗೆ ಜಾಗ ಖರೀದಿಸಿ ಅಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಇದೇ ಮನೆಗೆ ಪಟ್ಟಣ ಪಂಚಾಯಿತಿ ಇರುವಾಗ ಮನೆ ಮಾಲೀಕರ ಹೆಸರಿಗೆ ಖಾತಾ ಮಾಡಿ ಕೊಡಲಾಗಿದೆ. ಜತೆಗೆ ಹಲವು ವರ್ಷಗಳಿಂದ ತೆರಿಗೆಯನ್ನು ಪಾವತಿಸಿದ್ದಾರೆ. ಆದರೆ ಇಂತಹವರಿಗೆ ಈಗ ಫಾರಂ ನಂ.3 ಇ-ಸ್ವತ್ತು ಅಡಿಯಲ್ಲಿ ಫಾರಂ ನಂ.3 ಬರುತ್ತಿಲ್ಲ. ಇದರಿಂದ ಮನೆ ಮಾರಾಟ, ಸಾಲ ಪಡೆಯುವಿಕೆ ಸೇರಿದಂತೆ ಅನೇಕ ತೊಂದರೆಗಳು ಎದುರಾಗುತ್ತಿವೆ ಎಂದು ಅವರು ತಿಳಿಸಿದ್ದಾರೆ.

ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಅಕ್ರಮ– ಸಕ್ರಮದ ಅಡಿಯಲ್ಲಿ ಅಧಿಕಾರಿಗಳ ತಂಡ ರಚಿಸಿ ಅವರ ಮನೆಯನ್ನು ವೀಕ್ಷಿಸಿ ಅಳತೆ ಮಾಡಿ ಅದರಂತೆ ಆನ್‌ಲೈನ್‌ನಲ್ಲಿ ಸೇರಿಸಿ ಸ್ವತ್ತು ಅಡಿಯಲ್ಲಿ ಫಾರಂ ನಂ.3 ಬರುವಂತೆ ಕ್ರಮ ಕೈಗೊಳ್ಳಬೇಕು.

ADVERTISEMENT

ಈ ಕುರಿತು ಮುಖ್ಯಮಂತ್ರಿಗಳು ತಮ್ಮ ಪತ್ರಕ್ಕೆ ಸ್ಪಂದಿಸಿ ಉತ್ತರ ಬರೆದಿದ್ದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿ ಸಮಸ್ಯೆ ಪರಿಹರಿಸಲು ಸೂಚಿಸಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ಮತ್ತೆ ನಗರ ಗ್ರಾಮಾಂತರ
ಯೋಜನಾ ಇಲಾಖೆಗೆ ತಮ್ಮ ಅರ್ಜಿ ಕಳುಹಿಸಿ ಕೈ ತೊಳೆದುಕೊಂಡಿದ್ದಾರೆ ಎಂದು ಅವರು ಅಸಮಾಧಾನ ತೋಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.