ADVERTISEMENT

ಚಿತ್ತಾಪುರ| ಗೋರಿಗಳ ನೆಲಸಮ: ಮುಖಂಡರು, ಜಮೀನು ಮಾಲೀಕರಿಂದ ದೂರು–ಪ್ರತಿದೂರು

ಮುಖಂಡರು, ಜಮೀನು ಮಾಲೀಕರಿಂದ ದೂರು–ಪ್ರತಿದೂರು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 1:29 IST
Last Updated 29 ನವೆಂಬರ್ 2020, 1:29 IST

ಚಿತ್ತಾಪುರ: ತಾಲ್ಲೂಕಿನ ಬೆಣ್ಣೂರ (ಬಿ) ಗ್ರಾಮದ ಖಾಸಗಿ ಪಟ್ಟಾ ಜಮೀನಿನಲ್ಲಿ ಶವಸಂಸ್ಕಾರ ಮಾಡಿದ ಗೋರಿಗಳನ್ನು ನೆಲಸಮ ಮಾಡಲಾಗಿದೆ. ಈ ಕುರಿತು ಜಮೀನಿನ ಮಾಲೀಕ ಮತ್ತು ಗ್ರಾಮದ ಮುಸ್ಲಿಂ ಸಮಾಜದ ಮುಖಂಡರು ಮಾಡಬೂಳ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ನೀಡಿದ್ದಾರೆ.

‘ಗ್ರಾಮದ ಅಲ್ಲಾವುದ್ದಿನ್ ಅವರು 10 ವರ್ಷದ ಹಿಂದೆ ಅವರ ಸಹೋದರ ಸಂಬಂಧಿಯಿಂದ 6 ಎಕರೆ ಜಮೀನು ಖರೀದಿಸಿದ್ದರು. ಅದೇ ಜಮೀನಿನ 20 ಗುಂಟೆ ಜಾಗದಲ್ಲಿ ಮುಸ್ಲಿಂ ಸಮಾಜದವರು ಶವಸಂಸ್ಕಾರ ಮಾಡಿ ಗೋರಿಗಳನ್ನು ನಿರ್ಮಿಸುತ್ತಿದ್ದರು. ಖರೀದಿ ಬಳಿಕ ಅಲಾವುದ್ದೀನ್ ಶವಸಂಸ್ಕಾರಕ್ಕೆ ಅವಕಾಶ ನೀಡುತ್ತಿರಲಿಲ್ಲ’ ಎಂದು ಗ್ರಾಮದ ಮುಖಂಡರೊಬ್ಬರು ತಿಳಿಸಿದರು.

ಈ ಸಂಬಂಧ ಸಂಧಾನ ಸಭೆ ನಡೆಸಿದ ಮುಸ್ಲಿಂ ಸಮಾಜದ ಮುಖಂಡರು, ‘ಹಿಂದಿನಿಂತೆಯೇ ಶವಸಂಸ್ಕಾರ ಮುಂದುವರೆಸಲು ಖಬರಸ್ಥಾನಕ್ಕೆ ಜಮೀನು ಕೊಡುವಂತೆ ಅಲ್ಲಾವುದ್ದಿನ್‌ಗೆ ಕೋರಿದ್ದರು. ಅದಕ್ಕೆ ಉತ್ತರವಾಗಿ, ‘ಹಣ ಕೊಟ್ಟು ಖರೀದಿ ಮಾಡಿಕೊಳ್ಳಿ’ ಎಂದು ಹೇಳಿದ್ದರು.

ADVERTISEMENT

ಗೋರಿ ತೆರವು: ‘ಅಲ್ಲಾವುದ್ದಿನ್ ಅವರು ತಮ್ಮ ಜಮೀನಿನಲ್ಲಿ ಇದ್ದ ಐದಾರು ಗೋರಿಗಳನ್ನು ನೆಲಸಮ ಮಾಡಿದ್ದಾರೆ. ಇನ್ನೂ ಮೂರು–ನಾಲ್ಕು ಗೋರಿಗಳಿದ್ದು, ಅವು ತಮ್ಮ ತಂದೆ, ತಾಯಿಯ ಮತ್ತು ಕುಟುಂಬದವರ ಗೋರಿಗಳೆಂದು ಮಾಹಿತಿ ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಸಮಸ್ಯೆ ಕುರಿತು ತಹಶೀಲ್ದಾರ್ ಮತ್ತು ತಮ್ಮ ಇಲಾಖೆ ಮೇಲಧಿಕಾರಿಗೆ ಮಾಹಿತಿ ನೀಡಲಾಗಿದೆ. ಖಬರಸ್ಥಾನ ಮತ್ತು ಪಟ್ಟಾ ಜಮೀನು ಕುರಿತು ಸೂಕ್ತ ದಾಖಲೆ ತರುವಂತೆ ದೂರುದಾರರಿಗೆ ಸೂಚಿಸಲಾಗಿದೆ’ ಎಂದು ಪಿಎಸ್‌ಐ ವಿಜಯಕುಮಾರ ತಿಳಿಸಿದರು.

ಖಬರಸ್ಥಾನ ಸಮಸ್ಯೆ ಕುರಿತು ಮಾಡಬೂಳ ಪೊಲೀಸರಿಂದ ಮಾಹಿತಿ ಲಭಿಸಿದೆ. ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ, ದಾಖಲೆ ಪರಿಶೀಲನೆ ಮಾಡಲಾಗುತ್ತದೆ
ಉಮಾಕಾಂತಹಳ್ಳೆ, ತಹಶೀಲ್ದಾರ್

ಖಬರಸ್ಥಾನ ಸಮಸ್ಯೆಯನ್ನು ಕಂದಾಯ ಇಲಾಖೆ ಇತ್ಯರ್ಥ ಮಾಡಬೇಕು ಅಥವಾ ನ್ಯಾಯಾಲಯ ತೀರ್ಮಾನಿಸಬೇಕು. ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುವುದು
ವಿ.ಎನ್.ಪಾಟೀಲ, ಶಹಾಬಾದ್ ಡಿವೈಎಸ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.