ಕಲಬುರಗಿ: ‘ಸಾಮಾನ್ಯವಾಗಿ ಮನೆ, ಮಠ, ಮಡದಿ, ಮಕ್ಕಳನ್ನೇ ಸಂಸಾರವೆಂದು ತಿಳಿದುಕೊಂಡಿರುತ್ತಾರೆ. ಆದರೆ ಅವು ಯಾವುವೂ ಸಂಸಾರವಲ್ಲ. ಸಂಸಾರವೆಂದರೆ ಅವುಗಳ ಮೇಲಿನ ನನ್ನದೆಂಬ ಭಾವನೆ’ ಎಂದು ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ನಗರದ ಸೊಗಸನಕೇರಿಯ ಗುರುಶಾಂತಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಆಷಾಢ ಮಾಸದ ಅಂಗವಾಗಿ ಗುರುವಾರ ಆಯೋಜಿಸಿದ್ದ ‘ಸಿದ್ಧಾಂತ ಶಿಖಾಮಣಿ’ ಪ್ರವಚನ ಕಾರ್ಯಕ್ರಮದ ಸಮಾರೋಪದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಿದ್ಧಾಂತ ಶಿಖಾಮಣಿಯ ಸಂಸಾರ ಹೇಯ ಸ್ಥಲದ ಬಗ್ಗೆ ಆಶೀರ್ವಚನ ನೀಡಿದ ಶ್ರೀಗಳು, ‘ಪರಮಾತ್ಮ ಮಾಡಿದ ಸೃಷ್ಟಿಯೊಳಗಿನ ಕಲ್ಲು ಮಣ್ಣುಗಳನ್ನು ತೆಗೆದುಕೊಂಡು ಮನುಷ್ಯನು ಮನೆ ಮಠಗಳನ್ನು ನಿರ್ಮಿಸುತ್ತಾನೆ. ಅಷ್ಟೇ ಅಲ್ಲ, ಅವು ತನ್ನವು ಎಂಬ ಪ್ರಬಲ ಭಾವನೆಯನ್ನು ಇಟ್ಟುಕೊಳ್ಳುತ್ತಾನೆ. ನೀರಿನಲ್ಲಿ ಇರುವ ಕಮಲವು ನೀರಿಗೆ ಅಂಟಿಕೊಳ್ಳದಂತೆ ವಿವೇಕಿಯು ಸಂಸಾರಕ್ಕೆ ಅಂಟಿಕೊಳ್ಳದೇ ಇದೆಲ್ಲ ಈಶ್ವರನದು ಎಂಬ ಧೃಢವಾದ ಭಾವನೆಯಿಂದ ಇರಬೇಕು. ಈ ಜಗತ್ತು ಬಿಟ್ಟು ಯಾರೂ ಎಲ್ಲಿಯೂ ಹೋಗಲಿಕ್ಕೆ ಆಗುವುದಿಲ್ಲ. ಆದರೆ ಜಗತ್ತಿನಲ್ಲಿ ಯಾವ ವಸ್ತುವಿನ ಮೇಲೆಯೂ ಅಭಿಮಾನ ಇಲ್ಲದಂತೆ ಬದುಕಿದರೆ ಅದುವೇ ಸಂಸಾರದ ಹೇಯ ಸ್ಥಿತಿಯು’ ಎಂದರು.
ಕಡಗಂಚಿಯ ವೀರಭದ್ರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಪಾಳಾದ ಗುರುಮೂರ್ತಿ ಶಿವಾಚಾರ್ಯರು, ರಾಯಚೂರಿನ ಸೋಮವಾರಪೇಟೆಯ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಗುರುಸಿದ್ಧ ಮಣಿಕಂಠ ಶಿವಾಚಾರ್ಯ ಬಾರ್ಷಿ, ಟೆಂಗಳಿ, ಕಿಣ್ಣಿಸುಲ್ತಾನ, ಸುಲೇಪೇಟ, ಕಡಗಂಚಿ, ಆಳಂದ, ಮುದ್ದಡಗಾ ಶ್ರೀಗಳು ಇದ್ದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಅಧ್ಯಕ್ಷ ಶರಣುಕುಮಾರ ಮೋದಿ, ಮಹಿಳಾ ಘಟಕದ ಅಧ್ಯಕ್ಷೆ ಅನ್ನಪೂರ್ಣ ಮಲ್ಲಿನಾಥ ಸನ್‍ಶೆಟ್ಟಿ, ಅಖಿಲ ಭಾರತ ವೀರಶೈವ ಲಿಂಗಾಯತ ರಾಷ್ಟ್ರೀಯ ಮಹಿಳಾ ಘಟಕದ ಉಪಾಧ್ಯಕ್ಷೆ ದಿವ್ಯಾ ಹಾಗರಗಿ, ಬಾಬುರಾವ ಅಗ್ರಿ, ಶಿವಾನಂದ ಮಠಪತಿ, ಈರಣ್ಣ ಧುತ್ತರಗಾಂವ, ಮಲ್ಲಿಕಾರ್ಜುನ ತಡಕಲ್, ಗಂಗಾಧರ ಅಗ್ಗಿಮಠ, ಭದ್ರಯ್ಯ ಸಾಲಿಮಠ, ಜಿಡಿಎ ಮಾಜಿ ಅಧ್ಯಕ್ಷ ಬಸವರಾಜ ತಡಕಲ್, ಚಂದ್ರಕಾಂತ ಭೂಸನೂರ ಇದ್ದರು.
ಸಿದ್ರಾಮಪ್ಪ ಆಲಗೂಡಕರ ಸ್ವಾಗತಿಸಿದರು. ಸಿದ್ದೇಶ್ವರ ಶಾಸ್ತ್ರಿಗಳಿಂದ ವೇದ ಘೋಷ ಜರುಗಿತು. ಗುರುಲಿಂಗಯ್ಯ ಹಾಗೂ ಮಹಾಂತಯ್ಯ ಸ್ವಾಮಿಗಳಿಂಗ ಸಂಗೀತ ಜರುಗಿತು. ಸಾಹಿತಿ ಶಿವಯ್ಯ ಮಠಪತಿ ನಿರೂಪಿಸಿದರು.
ಸಾರೋಟಿನಲ್ಲಿ ಮೆರವಣಿಗೆ: ಇದಕ್ಕೂ ಮುನ್ನ ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಭಕ್ತರು ಸಾರೋಟಿನಲ್ಲಿ ಗಂಜ್ ಹನುಮಾನ ಮಂದಿರದಿಂದ ಮೆರವಣಿಗೆಯ ಮೂಲಕ ಕುಂಭ ಹೊತ್ತ ಮಹಿಳೆಯರು, ಪುರವಂತರ ಮೇಳ, ಭಜನಾ ಸಂಘದವರು, ಡೊಳ್ಳು ಮತ್ತು ಬಾಜಾ ಭಜಂತ್ರಿಯೊಂದಿಗೆ ಚೌಕ ಮುಖಾಂತರ, ಶಹಾಬಜಾರ ಲಾಲ್ ಹನುಮಾನ ಮಂದಿರದಿಂದ ಗುರುಶಾಂತಲಿಂಗೇಶ್ವರ ಕಲ್ಯಾಣ ಮಂಟಪದವರೆಗೆ ಮೆರವಣಿಗೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.