ADVERTISEMENT

ಜಿಲ್ಲಾ ಮಟ್ಟದ ಜನಸ್ಪಂದನ: ಸಮಸ್ಯೆ ಹೇಳಿಕೊಳ್ಳಲು ಸಾರ್ವಜನಿಕರ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2019, 9:50 IST
Last Updated 28 ಫೆಬ್ರುವರಿ 2019, 9:50 IST
ಕಲಬುರ್ಗಿಯಲ್ಲಿ ನಡೆಯುತ್ತಿರುವ ಜನಸ್ಪಂದನ ಸಭೆಯ ನೋಟ
ಕಲಬುರ್ಗಿಯಲ್ಲಿ ನಡೆಯುತ್ತಿರುವ ಜನಸ್ಪಂದನ ಸಭೆಯ ನೋಟ   

ಕಲಬುರ್ಗಿ: ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಬೃಹತ್‌ ಜನಸ್ಪಂದನ ಆರಂಭಗೊಂಡಿದ್ದು, ಸಮಸ್ಯೆ ಹೇಳಿಕೊಳ್ಳಲು ಸಾರ್ವಜನಿಕರು ಸರದಿ ಸಾಲಿನಲ್ಲಿ ನಿಂತಿದ್ದಾರೆ.

ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೆಳಿಗ್ಗೆ 11ರಿಂದ ಆರಂಭವಾಗಿರುವ ಜನಸ್ಪಂದನ, ಸಂಜೆ 5ರ ವರೆಗೆ ನಡೆಯಲಿದೆ.

ಸಾರ್ವಜನಿಕರು ಅಹವಾಲು ಸಲ್ಲಿಸಲು ಅನುಕೂಲವಾಗುವಂತೆ ಇಲಾಖಾವಾರು 27ಕ್ಕೂ ಹೆಚ್ಚು ಕೌಂಟರ್‌ಗಳನ್ನು ತೆರೆಯಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಇಲಾಖೆಯ ಕೌಂಟರ್‌ಗಳಲ್ಲಿ ಬೀಡು ಬಿಟ್ಟಿದ್ದಾರೆ.

ADVERTISEMENT

ಅಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ದಾಖಲಿಸಿಕೊಂಡು ಸ್ವೀಕೃತಿ ನೀಡಲಾಗುತ್ತದೆ. ಹೀಗೆ ಸ್ವೀಕೃತಿ ಪಡೆದ ಸಾರ್ವಜನಿಕರು ಸಚಿವರನ್ನು ಭೇಟಿಯಾಗಿ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳನ್ನು ಕರೆದು ಸಮಸ್ಯೆ ಪರಿಹರಿಸುವ ಪ್ರಯತ್ನವನ್ನು ಸಚಿವರು ಮಾಡುತ್ತಿದ್ದಾರೆ.

50ಕ್ಕೂ ಹೆಚ್ಚು ಸ್ವಯಂ ಸೇವಕರು ಕಾರ್ಯನಿರ್ವಹಿಸುತ್ತಿದ್ದು, ಕೆಲ ಸಾರ್ವಜನಿಕರಿಗೆ ಅರ್ಜಿಗಳನ್ನೂ ಅಲ್ಲಿಯೇ ಬರೆದುಕೊಡುತ್ತಿದ್ದಾರೆ. ಇದಕ್ಕಾಗಿಯೇ ನಾಲ್ಕು ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಕಂದಾಯ, ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ವಿಕಲಚೇತನರ ವೇತನ, ವೃದ್ಧಾಪ್ಯ ವೇತನಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗುತ್ತಿವೆ.

ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಪೊಲೀಸ್‌ ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.