ADVERTISEMENT

ಸೇಡಂ: ಮನೆ, ಮನಗಳಲ್ಲಿ ಸಂಭ್ರಮದ ದೀಪಾವಳಿ

ತಾಂಡಾಗಳಲ್ಲಿ ದೀಪಾವಳಿ ಹಬ್ಬದ ಸಂಭ್ರಮ, ಗಮನ ಸೆಳೆದ ಯುವತಿಯರ ಸಾಮೂಹಿಕ ನೃತ್ಯ

ಅವಿನಾಶ ಬೋರಂಚಿ
Published 26 ಅಕ್ಟೋಬರ್ 2022, 4:03 IST
Last Updated 26 ಅಕ್ಟೋಬರ್ 2022, 4:03 IST
ಸೇಡಂ ತಾಲ್ಲೂಕಿನ ವೆಂಕಟಾಪೂರ ತಾಂಡಾದಲ್ಲಿ ಮಕ್ಕಳು ದೀಪ ಹಿಡಿದು ಆರತಿ ಬೆಳಗಲು ಮನೆಮನೆಗೆ ತೆರಳುತ್ತಿರುವುದು
ಸೇಡಂ ತಾಲ್ಲೂಕಿನ ವೆಂಕಟಾಪೂರ ತಾಂಡಾದಲ್ಲಿ ಮಕ್ಕಳು ದೀಪ ಹಿಡಿದು ಆರತಿ ಬೆಳಗಲು ಮನೆಮನೆಗೆ ತೆರಳುತ್ತಿರುವುದು   

ಸೇಡಂ: ತಾಲ್ಲೂಕಿನರುವ ಕೋಲ್ಕುಂದಾ, ಕಡತಾಲ್, ವೆಂಕಟಾಪೂರ, ನಾಡೆಪಲ್ಲಿ, ಕದಲಾಪೂರ, ಕಡಚರ್ಲಾ ಸೇರಿದಂತೆ ಇನ್ನಿತರ ತಾಂಡಾಗಳಲ್ಲಿ ಸೋಮವಾರ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ತಾಂಡಾಗಳಲ್ಲಿ ದಿನವಿಡೀ ಎತ್ತ ನೋಡಿದರತ್ತ ಹಲಗೆ ವಾದ್ಯ, ಯುವತಿಯರ ನೃತ್ಯ, ಯುವಕರು ಪಟಾಕಿ ಸಿಡಿಸುವಿಕೆ, ಜ್ಯೋತಿ ಬೆಳಗಿಸುವಿಕೆಯ ಸಡಗರ ರಾರಾಜಿಸಿತು.

‘ವರ್ಷದಾಡ್ ಕೋರ್ ದಿವಾಳಿ, ಭಯಾ ತೋನ ಮೇರಾ, ಬಾಯಿ ತೋನ ಮೇರಾ, ಬಾಪು ತೋನ ಮೇರಾ’ ಹೀಗೆ ಲಂಬಾಣಿ ಭಾಷೆಯ ಹಾಡುಗಳನ್ನು ತಾಂಡಾ ಯುವತಿಯರು ಹಾಡಿದರು. ಬೆಳಿಗ್ಗೆ ಮನೆಯಂಗಳ ಸಾರಿಸುವುದರಿಂದ ಆರಂಭಿಸಿ, ಸೇವಾಲಾಲ್, ಹನುಮಾನ ಮಂದಿರ ಎದುರು ಹೋಮ ಮಾಡಿ, ದೇವರಿಗೆ ನೈವೇದ್ಯ ಸಲ್ಲಿಸಿದರು.

ನಂತರ ಹಲಗೆ ವಾದ್ಯದೊಂದಿಗೆ ಯುವತಿಯರು ಅಡವಿಗೆ ತೆರಳಿ, ವಿವಿಧ ಗಿಡಗಳ ಹೂವುಗಳನ್ನು ತಲೆಮೇಲೆ ಹೊತ್ತು ಹಾಡುತ್ತಾ, ನಲಿಯುತ್ತಾ ತಾಂಡಾಗಳಿಗೆ ಆಗಮಿಸಿದರು. ಮೊದಲು ಗೋವಿಗೆ ಪೂಜೆ ಸಲ್ಲಿಸಿ, ನಂತರ ತಾಂಡಾದ ನಾಯಕನ ಮನೆಗೆ ತೆರಳಿ ಅವರಿಂದ ಆಶೀರ್ವಾದ ಪಡೆದರು. ಯುವತಿಯರು ತಾಂಡಾದ ಪ್ರತಿ ಮನೆಗೆ ತೆರಳಿ ಆರತಿ ಬೆಳಗುತ್ತಾ ಸಂಭ್ರಮಿಸಿದರು. ರಾತ್ರಿ ಹಿರಿಯರಿಗೆ ತಿಲಕ ಹಚ್ಚಿ, ಅವರಿಗೆ ಆರತಿ ಬೆಳಗಿ ದೀಪಾವಳಿಯ ಶುಭಾಶಯ ಕೋರಿದರೆ, ಇತ್ತ ಯುವಕರು ಪಟಾಕಿ ಸಿಡಿಸಿದರು.

ADVERTISEMENT

ಸಂಜೆ ನಡೆದ ಯುವತಿಯರ ಸಾಮೂಹಿಕ ನೃತ್ಯ ಗಮನ ಸೆಳೆಯಿತು. ತಾಂಡಾಗಳಲ್ಲಿ ಪ್ರತಿ ವರ್ಷ ಆಚರಣೆಯಿದ್ದರೂ, ಈ ವರ್ಷ ಹಬ್ಬ ಅತ್ಯಂತ ಸಂಭ್ರದಿಂದ ಕೂಡಿತ್ತು. ಚಿಕ್ಕಮಕ್ಕಳು ಕೂಡ ದೀಪ ಹಿಡಿದು ತಾಂಡಾದ ಮನೆ ಮನೆಗೆ ತೆರಳಿ ಶುಭಾಶಯ ಕೋರಿ, ಹೂವುಗಳನ್ನು ನೀಡಿದರು.

ಕಡತಾಲ ಬಿ.ಎನ್. ತಾಂಡಾದಲ್ಲಂತೂ ಅತ್ಯಂತ ಸಂಭ್ರಮದಿಂದ ಹಬ್ಬ ಆಚರಿಸಲಾಯಿತು. ಪ್ರಮುಖರಾದ ರವಿ ಕಡತಾಲ್, ಆನಂದ, ವೀರೇಂದ್ರ, ಅವಿನಾಶ, ವೀರೇಂದ್ರ, ಕಾಶಿನಾಥ, ಎಸುಬಾಯಿ, ಪೂಜಾ, ಪ್ರಿಯಾಂಕ್, ಅಂಬಿಕಾ, ಅರುಣಾ , ಜ್ಯೋತಿ, ಅನುಷಾ, ಪ್ರೀತಿ ಇನ್ನಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.