ADVERTISEMENT

ಕಲಬುರಗಿ | ‘ಆರತಿ’ ಸಡಗರ; ಲಕ್ಷ್ಮಿ ಪೂಜೆ ಸಂಭ್ರಮ

ಮುಂದುವರಿದ ಖರೀದಿ ಭರಾಟೆ; ಆಗಸದಲ್ಲಿ ಬಾಣ–ಬಿರುಸುಗಳ ಚಿತ್ತಾರ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 4:44 IST
Last Updated 21 ಅಕ್ಟೋಬರ್ 2025, 4:44 IST
ದೀಪಾವಳಿ ಹಬ್ಬದ ಅಂಗವಾಗಿ ಕಲಬುರಗಿಯ ಯುನೈಟೆಡ್‌ ಆಸ್ಪತ್ರೆಯಲ್ಲಿ ಡಾ.ವೀಣಾ ಸಿದ್ದಾರೆಡ್ಡಿ ಹಾಗೂ ಆಸ್ಪತ್ರೆ ಸಿಬ್ಬಂದಿ ಸೋಮವಾರ ಲಕ್ಷ್ಮಿ ಮೂರ್ತಿಗೆ ಆರತಿ ಬೆಳಗಿದರು
–ಪ್ರಜಾವಾಣಿ ಚಿತ್ರ
ದೀಪಾವಳಿ ಹಬ್ಬದ ಅಂಗವಾಗಿ ಕಲಬುರಗಿಯ ಯುನೈಟೆಡ್‌ ಆಸ್ಪತ್ರೆಯಲ್ಲಿ ಡಾ.ವೀಣಾ ಸಿದ್ದಾರೆಡ್ಡಿ ಹಾಗೂ ಆಸ್ಪತ್ರೆ ಸಿಬ್ಬಂದಿ ಸೋಮವಾರ ಲಕ್ಷ್ಮಿ ಮೂರ್ತಿಗೆ ಆರತಿ ಬೆಳಗಿದರು –ಪ್ರಜಾವಾಣಿ ಚಿತ್ರ   

ಕಲಬುರಗಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ದೀಪಾವಳಿ ಹಬ್ಬದ ಸಡಗರ ಮನೆ ಮಾಡಿತ್ತು. ಮೂರು ದಿನಗಳ ‘ಹಬ್ಬ’ಕ್ಕೆ ನರಕಚತುರ್ದಶಿ ಆಚರಣೆ ಮುನ್ನುಡಿ ಬರೆಯಿತು.

ನೀರು ತುಂಬುವ ಹಬ್ಬದೊಟ್ಟಿಗೆ ಭಾನುವಾರ ಸಂಜೆಯಿಂದಲೇ ‘ಬೆಳಕಿನ ಹಬ್ಬ’ದ ಸಡಗರ ಅಧಿಕೃತವಾಗಿ ಶುರುವಾಗಿತ್ತು. ಅನೇಕರು ಸಂಪ್ರದಾಯದಂತೆ ಸೋಮವಾರ ಕಗ್ಗತ್ತಲಿನ ಆಕಾಶದಲ್ಲಿ ನಕ್ಷತ್ರಗಳು ಮಿನುಗುವ ಬ್ರಾಹ್ಮಿ ಮುಹೂರ್ತದಲ್ಲೇ ಎಣ್ಣೆ ಸ್ನಾನ ಮಾಡಿದರು. ‘ಮನೆಯ ಲಕ್ಷ್ಮಿ’ಯಿಂದ ಜನರು ವೀರತಿಲಕ ಇರಿಸಿಕೊಂಡು, ಆರತಿ ಬೆಳಗಿಸಿಕೊಂಡು ಹಬ್ಬ ಆಚರಿಸಿದರು.

ಬಳಿಕ ಆರತಿ ಮಾಡಿದವರು ಮನೆಯ ಗಂಡುಮಕ್ಕಳಿಂದ ಹಣ, ಚಿನ್ನ, ಸೀರೆಯ ರೂಪದಲ್ಲಿ ಉಡುಗೊರೆಯನ್ನೂ ಪಡೆದರು. ಬೆಳಿಗ್ಗೆ ಹಾಗೂ ಸಂಜೆ ಪಟಾಕಿ ಹೊಡೆದು ಖುಷಿಪಟ್ಟರು. ಮಳಿಗೆಗಳ ಎದುರಿನ ರಸ್ತೆಯಲ್ಲಿ ದೊಡ್ಡ ಸದ್ದಿನ ಪಟಾಕಿ ಸಿಡಿಸಿ, ಆಗಸದಲ್ಲಿ ಚಿತ್ತಾರ ಮೂಡಿಸಿ ಖುಷಿಪಟ್ಟರು.

ADVERTISEMENT

‘ಈ ಸಲ ನರಕಚತುರ್ದಶಿ ದಿನವಾದ ಸೋಮವಾರ ಮಧ್ಯಾಹ್ನವೇ ಅಮಾವಾಸ್ಯೆಯ ಪ್ರವೇಶವಾಗಿದ್ದು, ಮಂಗಳವಾರ ಮಧ್ಯಾಹ್ನದ ತನಕ ಇರಲಿದೆ’ ಎಂಬ ನಂಬಿಕೆಯಿಂದ ಹಲವರು ಸೋಮವಾರ ಸಂಜೆಯೇ ಮನೆಗಳು, ಮಳಿಗೆಗಳಲ್ಲಿ ಲಕ್ಷ್ಮಿಯನ್ನು ಪೂಜಿಸಿ, ಪ್ರಾರ್ಥಿಸಿದರು. 

ಮನೆಗಳಲ್ಲಿ ಮಹಿಳೆಯರು ಸಂಜೆ ಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ, ಬಗೆಬಗೆಯ ಪುಷ್ಪಗಳು, ಹಣ–ಒಡವೆಗಳನ್ನು ಹಾಕಿ ಸಿಂಗರಿಸಿದರು. ನೆರೆ–ಹೊರೆಯವರನ್ನು ಮನೆಗೆ ಆಹ್ವಾನಿಸಿ ಲಕ್ಷ್ಮಿಯನ್ನು ಪೂಜಿಸಿದರು. ತರಹೇವಾರಿ ಭಕ್ಷ್ಯ, ಹಣ್ಣುಗಳನ್ನು ನೈವೇದ್ಯ ಮಾಡಿದರು. ಬಳಿಕ ಸಿಹಿ ಹಂಚಿ, ಪಟಾಕಿ ಸಿಡಿಸಿ ದೀಪಾವಳಿ ಆಚರಿಸಿದರು.

ಸಂಜೆಯಾಗುತ್ತಲೇ ನಗರದ ಅಂಗಡಿಗಳಲ್ಲಿ ಲಕ್ಷ್ಮಿ ಪೂಜೆಯ ಸಂಭ್ರಮ ಕಂಡುಬಂತು. ಅಂಗಡಿಗಳನ್ನು ತರಹೇವಾರಿ ವಿದ್ಯುತ್‌ ದೀಪಗಳಿಂದ ಸಿಂಗರಿಸಿ, ಕಬ್ಬು–ಬಾಳೆಕಂದು– ಚಂಡು ಹೂವಿನ ಗಿಡಗಳ ಸಮೇತ ಕಟ್ಟಿ ಸಿಂಗರಿಸಲಾಗಿತ್ತು. ಭಕ್ತಿಯಿಂದ ಲಕ್ಷ್ಮಿಯನ್ನು ಪೂಜಿಸಿ ಆರಾಧಿಸಲಾಯಿತು. ನೆರೆ–ಹೊರೆಯವರಿಗೆ ಸಿಹಿ ವಿತರಣೆಯೂ ನಡೆಯಿತು.

ಲಂಬಾಣಿ ಸಮುದಾಯವರು ಹಾಗೂ ವ್ಯಾಪಾರಿ ಸಮುದಾಯದವರಲ್ಲಿ ದೀಪಾವಳಿ ಹಬ್ಬದ ಸಂಭ್ರಮ ತುಸು ಹೆಚ್ಚು ಕಂಡು ಬಂತು.

ಮಂಗಳವಾರ ದೀಪಾವಳಿ ಅಮಾವಾಸ್ಯೆ ಹಾಗೂ ಬುಧವಾರ ಬಲಿಪಾಡ್ಯ ಆಚರಣೆ ನಡೆಯಲಿದೆ. ವ್ಯಾಪಾರಿಗಳು ಅಂಗಡಿಗಳನ್ನು ಸಿಂಗರಿಸಿ, ಪೂಜಿಸಿದ ಬಳಿಕ ‘ಹೊಸ ‘ಖಾತೆ ಪುಸ್ತಕ’ (ಯಾದಿ) ತೆರೆಯಲಿದ್ದಾರೆ.

ದೀಪವಾಳಿ ಹಬ್ಬದ ಅಂಗವಾಗಿ ಕಲಬುರಗಿಯ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಜನರು ಪಟಾಕಿ ಖರೀದಿಯಲ್ಲಿ ತೊಡಗಿದ್ದ ನೋಟ ಪ್ರಜಾವಾಣಿ ಚಿತ್ರ

ಮೊದಲ ಹಬ್ಬ ಸಂಭ್ರಮಿಸಿದ ಜನ ದೀಪಾವಳಿ ಅಮಾವಾಸ್ಯೆ ಇಂದು ಬುಧವಾರ ಬಲಿಪಾಡ್ಯ ಆಚರಣೆ

ಮಾರುಕಟ್ಟೆಯಲ್ಲಿ ಜನದಟ್ಟಣೆ ದೀಪಾವಳಿ ಹಬ್ಬದ ಅಂಗವಾಗಿ ನಗರದ ಎಲ್ಲೆಡೆ ಸೋಮವಾರವೂ ಖರೀದಿ ಭರಾಟೆ ಕಂಡಬಂತು. ಸರ್ಕಾರಿ ರಜಾ ದಿನ ಹಾಗೂ ಲಕ್ಷ್ಮಿ ಪೂಜೆ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಬಗೆ ಬಗೆಯ ಹಣ್ಣು– ಹೂವು ಬಾಳೆಕಂದು ಕಬ್ಬು ಮಾವಿನ ತೋರಣದ ಎಲೆಗಳು ಸೇರಿದಂತೆ ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದರು. ಇದರಿಂದ ಮಾರುಕಟ್ಟೆಯಲ್ಲಿ ಜನದಟ್ಟಣೆ ಕಂಡು ಬಂತು.  ಆಗಸದಲ್ಲಿ ‘ಪಟಾಕಿ’ ಅಬ್ಬರ ಸೂರ್ಯಾಸ್ತವಾಗುತ್ತಿದ್ದಂತೆ ನಗರದಲ್ಲಿ ಬಹುಮಹಡಿ ಕಟ್ಟಡಗಳು ವಿದ್ಯುತ್‌ ದೀಪಗಳ ಸಿಂಗಾರದಲ್ಲಿ ಮಿನುಗಿದವು. ಮನೆಗಳು ಅಂಗಡಿಗಳ ಎದುರು ಜನರು ಮಣ್ಣಿನ ದೀಪಗಳನ್ನೂ ಬೆಳಗಿ ‘ಬೆಳಕಿನ ಹಬ್ಬ’ಕ್ಕೆ ಸಂಪ್ರಾದಾಯಿಕ ಕಳೆ ತುಂಬಿದರು. ರಾತ್ರಿ 8 ಗಂಟೆ ಹೊತ್ತಿಗೆ ನಗರದ ರಸ್ತೆಗಳಲ್ಲಿ ಪಟಾಕಿಗಳ ಅಬ್ಬರ ಹಾಗೂ ನಭದಲ್ಲಿ ಬಾಣಬಿರುಸುಗಳ ಚಿತ್ತಾರ ಕಂಡು ಬಂತು. ‘ಮಳೆಗೆ ಪಟಾಕಿ ವಹಿವಾಟು ಮಂದ’ ಕಲಬುರಗಿಯ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಸ್ಥಾಪಿಸಿರುವ 40 ಪಟಾಕಿ ಮಳಿಗೆಗಳಲ್ಲಿ ಭಾನುವಾರ ಹಾಗೂ ಸೋಮವಾರ ಖರೀದಿ ಭರಾಟೆ ಕಂಡು ಬಂತು. ‘ಈ ಸಲ ಪಟಾಕಿ ವ್ಯಾಪಾರ ಉತ್ತಮವಾಗಿದೆ. ಭಾನುವಾರ ಜನರು ಉತ್ಸಾಹದಿಂದ ಖರೀದಿಸಿದ್ದರು. ಆದರೆ ಸೋಮವಾರ ಮಳೆಯಿಂದಾಗಿ ವ್ಯಾಪಾರ ನಿರೀಕ್ಷಿತವಾಗಿ ನಡೆಯಲಿಲ್ಲ. ತುಸು ಮಂದವಾಗಿತ್ತು’ ಎಂದು ಶರಣಬಸವೇಶ್ವರ ಪಟಾಕಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರೇವಣಸಿದ್ಧಪ್ಪ ಪಡಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿಹಿ ಹಂಚಿ ಬಾಗಿನ ಕೊಡುಗೆ’ ‘

25 ವರ್ಷಗಳಿಂದ ಲಕ್ಷ್ಮಿಪೂಜೆ ಆಚರಿಸುತ್ತಿರುವೆ. ಪ್ರತಿ ವರ್ಷ ಅಮಾವಾಸ್ಯೆ ದಿನವೇ ಆಚರಿಸುವುದು ರೂಢಿ. ಈ ಸಲ ನರಕ ಚತುರ್ದಶಿ ದಿನವೇ ಅಮಾವಾಸ್ಯೆಯೂ ಬಂದಿದ್ದರಿಂದ ದೀಪವಾಳಿಯ ಮೊದಲ ದಿನವೇ ಲಕ್ಷ್ಮಿಯನ್ನು ಪೂಜಿಸಿದೆವು. ಐದು ಮನೆಯವರನ್ನು ಆಹ್ವಾನಿಸಿ ಸಿಹಿ ಹಂಚಿ ಬಾಗಿನ ಕೊಟ್ಟೆವು –ಡಾ.ಮಮತಾ ಹೋಳ್ಕರ್ ಕರುಣೇಶ್ವರ ನಗರ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.