ADVERTISEMENT

ಧರ್ಮ,ಜಾತಿಗಳ ನಡುವೆ ದ್ವೇಷದ ನಂಜು ಹರಡಬೇಡಿ: ಡಾ.ರಹಮತ್ ತರೀಕೆರೆ ಸಲಹೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 2:48 IST
Last Updated 3 ಜುಲೈ 2022, 2:48 IST
ಚಿತ್ತಾಪುರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಪತ್ರಕರ್ತರ ಸಂಘ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ, ನೂತನ ಪದಾಧಿಕಾರಿ ಪದಗ್ರಹಣ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಶಾಸಕ ಪ್ರಿಯಾಂಕ್ ಎಂ.ಖರ್ಗೆ ಅವರು ಸಸಿಗೆ ನೀರುಣಿಸಿ ಉದ್ಘಾಟಿಸಿದರು
ಚಿತ್ತಾಪುರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಪತ್ರಕರ್ತರ ಸಂಘ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ, ನೂತನ ಪದಾಧಿಕಾರಿ ಪದಗ್ರಹಣ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಶಾಸಕ ಪ್ರಿಯಾಂಕ್ ಎಂ.ಖರ್ಗೆ ಅವರು ಸಸಿಗೆ ನೀರುಣಿಸಿ ಉದ್ಘಾಟಿಸಿದರು   

ಚಿತ್ತಾಪುರ: ‘ಸಮಾಜದ ಶಾಂತಿ, ಸೌಹಾರ್ದತೆಗೆ ಧಕ್ಕೆ ತರುವ ಕೆಲಸ ಯಾರೂ ಮಾಡಬಾರದು. ಧರ್ಮ, ಜಾತಿಗಳ ನಡುವೆ ಪ್ರಚೋದನಕಾರಿ ದ್ವೇಷದ ನಂಜು ಹರಡುವ ಕೆಲಸ ಯಾರೂ ಮಾಡಬಾರದು’ ಎಂದು ಸಾಹಿತಿ ಡಾ.ರಹಮತ್ ತರೀಕೆರೆ ಸಲಹೆ ನೀಡಿದರು.

ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಪತ್ರಕರ್ತರ ಸಂಘ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ, ನೂತನ ಪದಾಧಿಕಾರಿ ಪದಗ್ರಹಣ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಮಾಜಿಕ ವ್ಯವಸ್ಥೆಯಲ್ಲಿ ಧಾರ್ಮಿಕ, ಸಾಮಾಜಿಕ ಸಾಮರಸ್ಯ, ಸೌಹಾರ್ದತೆ ಮತ್ತು ಸಮಾಜ, ಧರ್ಮ, ಜಾತಿಗಳ ನಡುವಿನ ಸಂಬಂಧದ ಮಹತ್ವ ಅರಿಯಬೇಕು. ಧರ್ಮ, ಜಾತಿಗಳ ನಡುವಿನ ಸಂಬಂಧ ಕದಡುವ ದುಷ್ಕೃತ್ಯ ಮಾಡಬಾರದು. ದುರಂತವೆಂದರೆ ಸಮಾಜದಲ್ಲಿ ಇಂದು ಅದೇ ಹೆಚ್ಚಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ADVERTISEMENT

ಕೋಮು ದ್ವೇಷದ ಸುದ್ದಿಯಿಂದ ಮನುಷ್ಯ ಸಂಬಂಧಗಳು ಹದಗೆಟ್ಟಿವೆ.ಎಂ.ಎಂ ಕಲಬುರಗಿ ಮತ್ತು ಗೌರಿ ಲಂಕೇಶ ಅವರ ಹತ್ಯೆಯನ್ನು ಧಾರುಣ ಕೊಲೆ ಎಂದು ಬಿತ್ತರಿಸಿದ್ದು ದುರಂತ ಸಂಗತಿ. ಸಾಮಾಜಿಕ ಜಾಲತಾಣದ ಪ್ರಭಾವದಿಂದ ಪತ್ರಕರ್ತರು ಮುಚ್ಚಿಟ್ಟ ಸುದ್ದಿ ಸದ್ದಿಲ್ಲದೆ ಬಿತ್ತರವಾಗುತ್ತಿವೆ ಎಂದು ಅವರು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಪ್ರಿಯಾಂಕ್ ಎಂ. ಖರ್ಗೆ ಮಾತನಾಡಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಯಬೇಕಾದರೆ ಅದು ಸ್ವತಂತ್ರ, ನಿಷ್ಪಕ್ಷಪಾತ ಹಾಗೂ ಪ್ರಾಮಾಣಿಕತೆಯ ಪತ್ರಿಕಾರಂಗದಿಂದ ಮಾತ್ರ ಸಾಧ್ಯ. ಭಕ್ತಿಯು ಆಧ್ಯಾತ್ಮಕವಾಗಿರಬೇಕು. ಅದು ವ್ಯಕ್ತಿಯ ಮೇಲೆ ಬರಬಾರದು. ವ್ಯಕ್ತಿ ಮೇಲಿನ ಭಕ್ತಿ ಬಲು ಅಪಾಯಕಾರಿ. ಸರ್ವಾಧಿಕಾರಿ ಮತ್ತು ಅಹಂಕಾರಕ್ಕೆ ಮೂಲ ಕಾರಣವಾಗುತ್ತದೆ ಎಂದು ಅವರು ಹೇಳಿದರು.

ತೊಗರಿ ಮಂಡಳಿ ಅಧ್ಯಕ್ಷ ಲಿಂಗಾರೆಡ್ಡಿ ಭಾಸರೆಡ್ಡಿ, ನಾಗರೆಡ್ಡಿ ಪಾಟೀಲ್ ಕರದಾಳ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಶಿವರಂಜನ್ ಸತ್ಯಂಪೇಟೆ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ದರಾಜ ಮಲಕಂಡಿ ಮಾತನಾಡಿದರು.

ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ವಾಡಿ ಪುಸರಭೆ ಅಧ್ಯಕ್ಷೆ ಜರೀನಾ ಬೇಗಂ, ಹಿರಿಯ ಪತ್ರಕರ್ತ ಶಿವರಾಯ ದೊಡ್ಡಮನಿ, ಜಿ.ಪಂ ಮಾಜಿ ಸದಸ್ಯ ಅರುಣಕುಮಾರ ಪಾಟೀಲ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೂಂಡಗಿ, ತಾ.ಪಂ ಅಧಿಕಾರಿ ನೀಲಗಂಗಾ ಬಬಲಾದ್, ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರು, ವಕೀಲರ ಸಂಘದ ಅಧ್ಯಕ್ಷ ಗಂಗಾಧರ ಸಾಲಿಮಠ ಉಪಸ್ಥಿತರಿದ್ದರು.

ಪತ್ರಕರ್ತ ವೀರೇಂದ್ರ ಕೊಲ್ಲೂರ, ಡಾ.ಸಾಯಬಣ್ಣ ಗುಡುಬಾ ಹಾಗೂ ಪತ್ರಿಕಾ ವಿತರಕನ್ನು ಸಂಘದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಮಲ್ಲಿಕಾರ್ಜುನ ಮುಡಬೂಳಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಡಿವಾಳಪ್ಪ ಹೇರೂರ ಸ್ವಾಗತಿಸಿದರು. ಕಾಶಿನಾಥ ಗುತ್ತೆದಾರ ನಿರೂಪಿಸಿದರು. ರಾಯಪ್ಪ ಕೊಟಗಾರ ವಂದಿಸಿದರು.

ಆರೋಗ್ಯ ತಪಾಸಣೆ, ಸಸಿ ವಿತರಣೆ: ಪತ್ರಿಕಾ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ವೇದಿಕೆಯ ಹತ್ತಿರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಮರದೀಪ ಪವಾರ್ ಅವರ ನೇತೃತ್ವದಲ್ಲಿ ಸಿಬ್ಬಂದಿ ಆರೋಗ್ಯ ತಪಾಸಣೆ ನಡೆಸಿದರು. ಅರಣ್ಯ ಇಲಾಖೆಯ ವಿಜಯಕುಮಾರ ಅವರ ನೇತೃತ್ವದಲ್ಲಿ ಸಾರ್ವಜನಿಕರಿಗೆ ಉಚಿತ ಸಸಿ ವಿತರಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.