ಕಲಬುರಗಿ: ‘ಎಲ್ಲರ ಪರಿಶ್ರಮದಿಂದ ವೈದ್ಯಾಧಿಕಾರಿಗಳ ಸಂಘಟನೆ ಬಲಗೊಳಿಸಬಹುದು. ಕಲಬುರಗಿಯಲ್ಲಿ ರಾಜ್ಯಮಟ್ಟದ ಸಮಾವೇಶ ಆಗಬೇಕು. ಇದಕ್ಕೆ ಆದ್ಯತೆ ನೀಡುವುದರ ಜತೆ ಸಂಘಟನೆ ಬಲಗೊಳಿಸೋಣ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಸಹ ನಿರ್ದೆಶಕ ಡಾ. ಶಂಕ್ರಪ್ಪ ಮೈಲಾರಿ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಸಂಜೆ ನಡೆದ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಅಂಬಾರಾಯ ಎಸ್. ರುದ್ರವಾಡಿ ಮಾತನಾಡಿ, ‘ಸಂಘ ಕಟ್ಟಿ 40 ವರ್ಷಗಳಾಗಿವೆ. ನಮ್ಮ ಹಿರಿಯರು ಸಂಘಟನೆ ಸ್ಥಾಪನೆ ಮಾಡಿ ಬಹಳಷ್ಟು ಕೆಲಸ ಮಾಡಿದ್ದಾರೆ, ಅದನ್ನು ನಾವು ಮುಂದುವರಿಸಿಕೊಂಡು ಹೋಗೋಣ’ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ ಮಾತನಾಡಿ, ‘ಸಂಘಟನೆಯನ್ನು ಎಲ್ಲರೂ ಕೂಡಿ ಬೆಳೆಸಬೇಕು. ಸಮಸ್ಯೆ ಏನೇ ಇದ್ದರು ಸಂಘಕ್ಕೆ ಮೊದಲು ತಿಳಿಸಬೇಕು. ಬಳಿಕ ಸಮಸ್ಯೆ ಬಗೆಹರಿಸಿಕೊಂಡಾಗ ಮಾತ್ರ ಉತ್ತಮ ಸಂಘಟನೆ ಆಗಲು ಸಾಧ್ಯ’ ಎಂದ ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಕಲಬುರಗಿ ಶಾಖೆಯ ಅಧ್ಯಕ್ಷ ಡಾ.ಶರಣಬಸಪ್ಪ ಗಣಜಲಖೇಡ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಕಲಬುರಗಿ ಶಾಖೆಯ ಪದಾಧಿಕಾರಿಗಳು: ಡಾ.ವಿನೋದಕುಮಾರ ಎಸ್.ಎಚ್., ಡಾ. ಇರ್ಫಾನ್ ಅಲಿ (ಉಪಾಧ್ಯಕ್ಷರು), ಡಾ.ಸಂತೋಷ ಅಲಗೂರು (ಕಾರ್ಯದರ್ಶಿ), ಡಾ. ದೀಪಕಕುಮಾರ ರಾಠೋಡ (ಖಜಾಂಚಿ), ಡಾ. ಸಂಧ್ಯಾ ಕಾನೇಕರ್, ಡಾ. ಅಮೃತಾ ಕುಲಕರ್ಣಿ (ಜಂಟಿ ಕಾರ್ಯದರ್ಶಿಗಳು).
ಜಿಲ್ಲಾ ಶಾಖೆಯ ನೂತನ ಪದಾಧಿಕಾರಿಗಳು ಪದಗ್ರಹಣ ಮಾಡಿದರು. ಬಳಿಕ ಅವರಿಗೆ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು.
ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ರುಕಿಯಾ ಆಸ್ತಾ ರಬಾ, ಡಾ. ನಾಗರಾಜ ಪಾಟೀಲ, ಡಾ. ಪೂರ್ಣಿಮಾ, ಡಾ. ಅಮೃತಾ ದೇಶಪಾಂಡೆ ಸೇರಿದಂತೆ ಜಿಲ್ಲೆಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.