ಕಾಳಗಿ: ‘ರೋಗಿಗಳ ಆರೈಕೆ ಜತೆಗೆ ಸರ್ಕಾರಿ ಆಸ್ಪತ್ರೆಯ ಪರಿಸರವನ್ನು ಹಸಿರುಮಯಗೊಳಿಸುವ ಮೂಲಕ ಕಾಳಗಿ ಹಾಗೂ ಮಂಗಲಗಿ ಸಮುದಾಯ ಕೇಂದ್ರಗಳ ವೈದ್ಯಾಧಿಕಾರಿಗಳಾದ ಡಾ.ಅಮರೇಶ ಎಂ.ಎಚ್ ಹಾಗೂ ಡಾ.ದೀಪಕ್ ಕುಮಾರ ರಾಠೋಡ ಅವರು ಹಸಿರುಕ್ರಾಂತಿ ಮಾಡಿದ್ದಾರೆ.
ಕಾಳಗಿ ತಾಲ್ಲೂಕಾಗಿದ್ದರೂ ಈಗಲೂ ಸಮುದಾಯ ಆರೋಗ್ಯ ಕೇಂದ್ರವಿದೆ. ತಾಲ್ಲೂಕು ಆಸ್ಪತ್ರೆಗೆ ಮೀರಿಸುವಷ್ಟು ಒಳ-ಹೊರ ರೋಗಿಗಳ ನೋಂದಣಿ ಇಲ್ಲಿದೆ. ಕಲಬುರಗಿ-ಚಿಂಚೋಳಿ ಮುಖ್ಯರಸ್ತೆ ಬದಿಗಿರುವ 8 ಎಕರೆ ಪ್ರದೇಶದಲ್ಲಿ 30 ಹಾಸಿಗೆಯ ಆಸ್ಪತ್ರೆ ಕಟ್ಟಡ ಮತ್ತು ಸಿಬ್ಬಂದಿ ವಸತಿ ಗೃಹಗಳ ಮಧ್ಯೆ ಇರುವ ಮೈದಾನವು ಹಸಿರಿನಿಂದ ಕಂಗೊಳಿಸುತ್ತಿದೆ.
ಆಗಸ್ಟ್ 2019ರಲ್ಲಿ ಕರ್ತವ್ಯಕ್ಕೆ ಹಾಜರಾಗಿ, ಜುಲೈ 2020ರಲ್ಲಿ ಆಡಳಿತದ ಪ್ರಭಾರ ವಹಿಸಿರುವ ಮಕ್ಕಳ ವೈದ್ಯ ಡಾ.ಅಮರೇಶ ಎಂ.ಎಚ್. ಅವರು ಆಸ್ಪತ್ರೆಯ ಆವರಣದಲ್ಲಿ ಸಾವಿರಕ್ಕೂ ಹೆಚ್ಚು ಸಸಿಗಳನ್ನು ಮಕ್ಕಳಂತೆ ಬೆಳೆಸಿ ಪೋಷಿಸಿದ್ದಾರೆ.
ಹೊಂಗೆ, ಹಲಸು, ಬೇವು, ಹುಣಸೆ, ಬಿಲ್ವಪತ್ರಿ, ಹೆಬ್ಬೇವು, ಅಶೋಕ, ಅರಳಿ ಸೇರಿದಂತೆ ಕಣಗಿಲ, ದಾಸವಾಳ, ಸೂಜಿಮಲ್ಲಿಗೆ ಹೂ-ಬಳ್ಳಿ ಮತ್ತಿತರ ಬಗೆಬಗೆಯ ಗಿಡಮರಗಳನ್ನು ಬೆಳೆಸುತ್ತ ಆಸ್ಪತ್ರೆಗೆ ಬರುವವರನ್ನು ತಂಪಾದ ನೆರಳು, ಶುದ್ಧಗಾಳಿ ಉಸಿರಾಡುವಂತೆ ಮಾಡಿದ್ದಾರೆ. ಒಬ್ಬ ಸರ್ಕಾರಿ ವೈದ್ಯ ಮನಸ್ಸು ಮಾಡಿದರೆ ಏನು ಮಾಡಲು ಸಾಧ್ಯವೆಂಬುದು ಅವರಿಲ್ಲಿ ಮಾಡಿತೋರಿಸಿ ವೈದ್ಯಲೋಕಕ್ಕೆ ಮಾದರಿಯಾಗಿದ್ದಾರೆ.
ಶಹಾಪುರ-ಶಿವರಾಂಪುರ ರಾಜ್ಯ ಹೆದ್ದಾರಿ-149 ಬದಿಯ ಕೊಡದೂರ ಗ್ರಾ.ಪಂ ವ್ಯಾಪ್ತಿಯ ಮಂಗಲಗಿ ಹೊರವಲಯದಲ್ಲಿ ಕಾಣಸಿಗುವ ಪ್ರಾಥಮಿಕ ಆರೋಗ್ಯ ಕೇಂದ್ರ ವನಸಿರಿಯಿಂದ ನೋಡುಗರ ಮನ ಸೆಳೆಯುವಂತಿದೆ.
ಆಗಸ್ಟ್ 2017ರಲ್ಲಿ ಆಡಳಿತ ವೈದ್ಯಾಧಿಕಾರಿಯಾಗಿ ಇಲ್ಲಿಗೆ ಬಂದ ಡಾ.ದೀಪಕ್ ಕುಮಾರ ರಾಠೋಡ ಅವರು ಆಸ್ಪತ್ರೆಯ 1.7 ಎಕರೆ ಪ್ರದೇಶವನ್ನು ಪ್ರಕೃತಿಯ ಮಡಿಲನ್ನಾಗಿಸಿದ್ದಾರೆ.
ತೆಂಗು, ಸೀತಾಫಲ, ಚಿಕ್ಕು, ನೇರಳೆ, ಮಾವು, ನಿಂಬೆ, ಕರಿಬೇವು, ಸಪೋಟ, ಬನ್ನಿ, ಸಂಪಿಗೆ, ಸೇವಂತಿಗೆ, ದುಂಡುಮಲ್ಲಿಗೆ, ಚೆಂಡು, ಗುಲಾಬಿ, ನಕ್ಷತ್ರ ಮಲ್ಲಿಗೆ ಸೇರಿದಂತೆ ನೆರಳು-ಗಾಳಿಯ ವಿವಿಧ ಜಾತಿಯ 300ಕ್ಕೂ ಹೆಚ್ಚು ಗಿಡಮರಗಳನ್ನು ಬೆಳೆಸಿ ಒಳಂಗಣ, ಹೊರಂಗಣ ಕೈತೋಟವಾಗಿ ನಿರ್ಮಿಸಿದ್ದಾರೆ.
ಬಳಲಿ ಬರುವ ರೋಗಿಗಳಿಗೆ ಕುಳಿತೊಳ್ಳಲು ಬೆಂಚುಗಳ ಆಶ್ರಯ ಕಲ್ಪಿಸಿ, ಮನ ತಣಿಸಿ ಗುಣಮುಖರನ್ನಾಗಿ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರ ಯಾವುದಕ್ಕೂ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ವೈದ್ಯರು, ಎಲ್ಲರ ಸಹಕಾರದಿಂದ ಸಣ್ಣ ಸರ್ಕಾರಿ ಆಸ್ಪತ್ರೆಯೊಂದು ಮಾದರಿಯಾಗಿದೆ.
ವೈದ್ಯರ ದಿನಾಚರಣೆ ಜುಲೈ 1ರಂದು ಅನ್ಯ ಆಸ್ಪತ್ರೆಗಳ ವೈದ್ಯರು, ಈ ರೀತಿಯ ಪಣತೊಟ್ಟರೆ ಆಸ್ಪತ್ರೆಗಳು ಸುಂದರ ಸಸ್ಯಕಾಶಿಗಳಾಗುತ್ತವೆ ಎಂದು ಸ್ಥಳೀಯರಾದ ಚಂದ್ರಶೇಖರ ಕಲ್ಲಾ, ವೀರಣ್ಣಾ ಸಗರ ಹೇಳುತ್ತಾರೆ.
‘ರೋಗಿಗಳ ಆರೈಕೆ ಜತೆಗೆ ಪರಿಸರ ಕಾಳಜಿಯೂ ಇದೆ. ಹಿಂದೆ ಹೆಬ್ಬಾಳ ಆಸ್ಪತ್ರೆಯಲ್ಲೂ ಈ ಕೆಲಸ ಮಾಡಿದ್ದೇನೆ. ಮರಗಳ ನೆರಳು ಶುದ್ಧ ಗಾಳಿ ರೋಗಿಗಳನ್ನು ಬೇಗನೆ ಚೇತರಿಸಿಕೊಳ್ಳುವಂತೆ ಮಾಡುತ್ತದೆಡಾ.ಅಮರೇಶ ಎಂ.ಎಚ್. ಆಡಳಿತ ವೈದ್ಯಾಧಿಕಾರಿ ಸಿಎಚ್‌ಸಿ ಕಾಳಗಿ
ರೋಗಿಗಳನ್ನು ನೋಡುವುದಷ್ಟೇ ನನ್ನ ಕರ್ತವ್ಯವಲ್ಲ. ಪರಿಸರವನ್ನೂ ಸ್ವಚ್ಛ ಸುಂದರವಾಗಿ ಇಡುವ ಬಯಕೆ ನನ್ನದು. ಆಸ್ಪತ್ರೆಗೆ ಬಂದ ದಿನದಿಂದಲೂ ಪ್ರತಿ ತಿಂಗಳ ಕೊನೆ ಶನಿವಾರ ಎಲ್ಲ ಸಿಬ್ಬಂದಿ ಸಹಕಾರದೊಂದಿಗೆ ಗಿಡಮರ ಬೆಳೆಸಿದ್ದೇನೆಡಾ.ದೀಪಕ್ ಕುಮಾರ ರಾಠೋಡ ಆಡಳಿತ ವೈದ್ಯಾಧಿಕಾರಿ ಪಿಎಚ್‌ಸಿ ಮಂಗಲಗಿ
ಇಂದು ವೈದ್ಯರಿಗೆ ಸನ್ಮಾನ
ವೈದ್ಯರ ದಿನದ ನಿಮಿತ್ತ ದ್ವಿಚಕ್ರ ವಾಹನ ಮೆಕ್ಯಾನಿಕ್‌ಗಳ ಸಂಘ ಹಾಗೂ ನಿಸರ್ಗ ಗುರುಕುಲ ಎಜ್ಯುಕೇಶನಲ್ ಮತ್ತು ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಜುಲೈ 1ರಂದು ವೈದ್ಯರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾಳಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಧ್ಯಾಹ್ನ 12.50ಕ್ಕೆ ಜರುಗಲಿರುವ ಸಮಾರಂಭದಲ್ಲಿ ಕಾಳಗಿ ಮಂಗಲಗಿ ಮತ್ತು ಕೋಡ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದು ಆಯೋಜಕರಾದ ಬಂಡು ಬೊಮ್ಮಾಣಿ ನಾಗರಾಜ ಚಿಕ್ಕಮಠ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.