ADVERTISEMENT

ಖಾಸಗಿ ಆಸ್ಪತ್ರೆಗಳ ಒಪಿಡಿ ಬಹುತೇಕ ಬಂದ್‌

ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರ, ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಿದ ಜನಸಂದಣಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 13:32 IST
Last Updated 17 ಜೂನ್ 2019, 13:32 IST

ಕಲಬುರ್ಗಿ: ನಗರದ ಬಹುಪಾಲು ಖಾಸಗಿ ಆಸ್ಪತ್ರೆಗಳು ಸೋಮವಾರ ಹೊರರೋಗಿಗಳ ವಿಭಾಗವನ್ನು ಸ್ಥಗಿತಗೊಳಿಸಿದವು. ಮುಷ್ಕರದ ಮಾಹಿತಿ ಇಲ್ಲದ ರೋಗಿಗಳು ಬೆಳಿಗ್ಗೆ ಆಸ್ಪತ್ರೆಗೆ ಬಂದರೂ ಚಿಕಿತ್ಸೆ ಸಿಗದೇ ಮರಳಿದರು. ಬಸವೇಶ್ವರ ಆಸ್ಪತ್ರೆಯಲ್ಲಿ ಮಾತ್ರ ಹಳ್ಳಿಯಿಂದ ಬಂದಿದ್ದ ರೋಗಿಗಳಿಗೆ ಬೆಳಿಗ್ಗೆ 10 ಗಂಟೆಯವರೆಗೆ ಚಿಕಿತ್ಸೆ ನೀಡಲಾಯಿತು.

ಕೋಲ್ಕತ್ತಾದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ರಾಷ್ಟ್ರವ್ಯಾಪಿ ಮುಷ್ಕರ ಘೋಷಿಸಿದೆ. ಇದಕ್ಕೆ ಬೆಂಬಲವಾಗಿ ಸಂಘದ ಜಿಲ್ಲಾ ಘಟಕ ಕೂಡ ಮುಷ್ಕರಕ್ಕೆ ಕರೆ ನೀಡಿತ್ತು.

ನಗರದ ಯುನೈಟೆಡ್‌ ಆಸ್ಪತ್ರೆ, ಆಶೀರ್ವಾದ್‌ ಆಸ್ಪತ್ರೆ, ನಾಯ್ಕೋಡಿ ಸ್ಪೆಷಾಲಿಟಿ ಹಾಸ್ಪಿಟಲ್‌, ಚಿರಾಯು, ಕಾಮರಡ್ಡಿ ಆರ್ಥೊ ಅಂಡ್‌ ಟ್ರಾಮಾ ಕೇರ್‌ ಸೆಂಟರ್‌, ಚಿಂಚೋಳಿ ಕಣ್ಣಿನ ಆಸ್ಪತ್ರೆ, ಹಸ್ತಾಪುರ ಹೈಟೆಕ್‌ ಕಿವಿ– ಮೂಗು– ಗಂಟಲ ಆಸ್ಪತ್ರೆ, ಅನುಗ್ರಹ ಸೂಪರ್‌ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಯಶೋದಾ ಮಕ್ಕಳ ಆಸ್ಪತ್ರೆ, ಖಾಜಾ ಬಂದಾ ನವಾಜ್‌ ಆಸ್ಪತ್ರೆ ಸೇರಿದಂತೆ ಬಹುತೇಕ ದೊಡ್ಡ ಆಸ್ಪತ್ರೆಗಳಲ್ಲಿ ಹೊರರೋಗಿಗಳ ವಿಭಾಗ ಬಂದ್ ಆಗಿತ್ತು. ಜತೆಗೆ, ಸಣ್ಣ ಪುಟ್ಟ ಕ್ಲಿನಕ್‌ಗಳ ವೈದ್ಯರೂ ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ರೋಗಿಗಳಿಗೆ ಚಿಕಿತ್ಸೆ ಲಭ್ಯವಾಗಲಿಲ್ಲ.

ADVERTISEMENT

ಅಪಘಾತ, ಪ್ರಸೂತಿ, ತುರ್ತುಚಿಕಿತ್ಸೆ ಹಾಗೂ ಒಳರೋಗಿಗಳ ವಿಭಾಗದಲ್ಲಿ ಎಂದಿನಂತೆ ಚಿಕಿತ್ಸೆ ಲಭ್ಯವಾಯಿತು. ಜಿಲ್ಲಾ ಆಸ್ಪತ್ರೆಯ ಒಪಿಡಿ ವಿಭಾಗದ ಮುಂದೆ ಬೆಳಿಗ್ಗೆಯಿಂದಲೇ ಜನಜಂಗುಳಿ ಇತ್ತು. ಪ್ರತಿದಿನ ಬರುವ ರೋಗಿಗಳಿಗಿಂತ ಸುಮಾರು 200ಕ್ಕೂ ರೋಗಿಗಳು ಹೆಚ್ಚಿಗೆ ಬಂದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಜಿಲ್ಲೆಯ ಸೇಡಂ, ಶಹಾಪುರ, ಚಿತ್ತಾಪುರ, ಚಿಂಚೋಳಿಗಳಲ್ಲಿ ಒಪಿಡಿ ಬಂದ್‌ ಮಾಡಿದ್ದು, ಉಳಿದೆಡೆ ಹಳ್ಳಿಯ ಜನರ ಅನುಕೂಲಕ್ಕೆ ತಕ್ಕಂತೆ ಸೇವೆ ನೀಡಲಾಗಿದೆ.

ಐಎಂಎ ಸದಸ್ಯರು, ವಿವಿಧ ಖಾಸಗಿ ಆಸ್ಪ‍ತ್ರೆಗಳ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ನಗರದಲ್ಲಿ ಬೆಳಿಗ್ಗೆ ಪ್ರತಿಭಟನೆ ನಡೆಸಿದರು. ವೈದ್ಯರಿಗೆ ರಕ್ಷಣೆ ನೀಡಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಡಾ.ಕಿರಣ ಎ. ದೇಶಮುಖ, ಪದಾಧಿಕಾರಿಗಳಾದ ಡಾ.ವಿಜಯಕುಮಾರ ಕಪ್ಪಿಕೇರಿ, ಡಾ.ಗುರುಪಾದ ಪಾಟೀಲ, ಡಾ.ಅಮುಲ್‌ ಪತಂಗೆ, ಡಾ.ಶಫಿ ಉದ್ದಿನ್‌, ಡಾ.ಸಂಜನಾ ತಲ್ಲೂರ ನೇತೃತ್ವ ವಹಿಸಿದ್ದರು.

**

ಐಎಂಎ ಮುಷ್ಕರಕ್ಕೆ ನಮ್ಮದೂ ಬೆಂಬಲವಿದೆ. ಹುಟ್ಟಿನಿಂದ ಸಾಯುವವರೆಗೂ ಎಲ್ಲರ ಆರೋಗ್ಯವನ್ನು ವೈದ್ಯರೇ ಕಾಪಾಡುತ್ತಾರೆ. ಆದರೆ, ವೈದ್ಯರಿಗೇ ರಕ್ಷಣೆ ಇಲ್ಲ. ಕೇಂದ್ರ ಸರ್ಕಾರ ಇದಕ್ಕೆ ಗಟ್ಟಿ ನಿರ್ಧಾರ ಕೈಗೊಳ್ಳಬೇಕು
– ಡಾ.ಶರಣಗೌಡ,ವೈದ್ಯಕೀಯ ನಿರ್ದೇಶಕ, ಬಸವೇಶ್ವರ ಆಸ್ಪತ್ರೆ

**
ಒಪಿಡಿಗಳನ್ನು ಬಂದ್‌ ಮಾಡಿದ್ದು, ತುರ್ತು ಚಿಕಿತ್ಸೆಗೆ ತೊಂದರೆಯಾಗದಂತೆ ನೋಡಿಕೊಳ್ಳಲು ತಿಳಿಸಿದ್ದೇನೆ. ಯಾರು ಜೀವದ ರಕ್ಷಣೆ ಮಾಡುತ್ತಾರೋ ಅವರ ಜೀವ ರಕ್ಷಣೆಗೇ ಕಾನೂನು ಇಲ್ಲ. ಈ ಬಗ್ಗೆ ಕೇಂದ್ರವನ್ನು ಆಗ್ರಹಿಸಲಾಗುವುದು
– ಡಾ.ಕಿರಣ ಎ. ದೇಶಮುಖ, ಅಧ್ಯಕ್ಷ, ಐಎಂಎ, ಜಿಲ್ಲಾ ಘಟಕ

**

ಅಂಕಿ ಅಂಶ

700 – ಜಿಲ್ಲೆಯಲ್ಲಿರುವ ಐಎಂಎ ಸದಸ್ಯರ ಸಂಖ್ಯೆ

725 – ಜಿಲ್ಲೆಯಲ್ಲಿರುವ ನೋಂದಾಯಿತ ಆಸ್ಪತ್ರೆಗಳು

150 – ಒಳರೋಗಿಗಳ ವಿಭಾಗ ಹೊಂದಿದ ಆಸ್ಪತ್ರೆಗಳು

**

‘ಅ‌‌ಮಾನವೀಯ ಹಲ್ಲೆಗಳು ನಿಲ್ಲಲಿ’

‘ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆ ಅಮಾನುಷವಾದುದು. ಇಂಥ ಘಟನೆಗಳು ಮರುಕಳಿಸಬಾರದು. ಇದಕ್ಕಾಗಿ ಕೇಂದ್ರ ಸರ್ಕಾರ ಕಠಿಣ ಕಾನೂನು ರೂಪಿಸಬೇಕು’ ಎಂದುಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕಿರಣ ಎ. ದೇಶಮುಖ ಆಗ್ರಹಿಸಿದರು.

ಮುಷ್ಕರ ಕುರಿತು‍ಪ್ರತಿಕ್ರಿಯೆ ನೀಡಿದ ಅವರು, ‘ರಾಜ್ಯ ಸರ್ಕಾರ ಕೂಡ ವೈದ್ಯರ ರಕ್ಷಣೆಗಾಗಿ 2009ರಲ್ಲಿ ಕಾನೂನು ಜಾರಿ ಮಾಡಿದೆ. ಸಾಕ್ಷಿ ಸಮೇತ ಸಿಕ್ಕವರಿಗೆ ಇದರಲ್ಲಿ ಕೇವಲ ಮೂರು ವರ್ಷ ಶಿಕ್ಷೆ ಇದೆ. ಆದರೆ, ಇದರಿಂದ ಯಾರಿಗೂ ಭಯ ಹುಟ್ಟುವುದಿಲ್ಲ. ಆದ್ದರಿಂದ ಕಾಯ್ದೆಯನ್ನು ತಿದ್ದುಪಡಿ ಮಾಡಿ ಶಿಕ್ಷೆಯ ಅವಧಿಯನ್ನು 7 ವರ್ಷಕ್ಕೆ ಹೆಚ್ಚಿಸಬೇಕು. ಇದರಿಂದ ಮಾತ್ರ ‘ನಾನ್‌ಬೇಲೇಬಲ್‌’ ಶಿಕ್ಷೆ ಕೊಡಿಸಲು ಸಾಧ್ಯ’ ಎಂದರು.

‘ಯಾವೊಬ್ಬ ವೈದ್ಯ ಕೂಡ ಉದ್ದೇಶಪೂರ್ವಕ ಕೆಟ್ಟದ್ದನ್ನು ಬಯಸುವುದಿಲ್ಲ. ಹಾಗೆಂದ ಮಾತ್ರಕ್ಕೆ ವೈದ್ಯರೇನೂ ದೇವರಲ್ಲ. ನಮ್ಮ ಪ್ರಯತ್ನ ಜೀವಪ‍ರವಾಗೇ ಇರುತ್ತದೆ. ಆದರೆ, ರೋಗಿಗಳು ಚಿಕಿತ್ಸೆಗೆ ಸ್ಪಂದಿಸದಿದ್ದಾಗ ತೊಂದರೆಯಾಗುತ್ತದೆ. ರೋಗಿಗಿಂತ ಹೆಚ್ಚಾಗಿ ಅವರ ಪೋಷಕರೇ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳುತ್ತಾರೆ. ಇದು ಸರಿಯಾದ ಕ್ರಮವಲ್ಲ. ವೈದ್ಯರನ್ನೂ ಮನುಷ್ಯರಂತೆಯೇ ಕಾಣಬೇಕು’ ಎಂದೂ ಅವರು ಕೋರಿದರು.

‘ದೇಶದಲ್ಲಿ ರೋಗಿಗಳ ಸಂಖ್ಯೆ ಎಚ್ಚಾದಷ್ಟು, ರೋಗಗಳ ಸಂಖ್ಯೆ ಹೆಚ್ಚಾದಷ್ಟು ವೈದ್ಯರ ಸಂಖ್ಯೆ ಹೆಚ್ಚುತ್ತಿಲ್ಲ. ಒಬ್ಬೊಬ್ಬ ವೈದ್ಯ ಕೂಡ ತನ್ನ ಸಾಮರ್ಥ್ಯಕ್ಕೂ ಮೀರಿ ರೋಗಿಗಳ ಆರೋಗ್ಯದ ಕಾಳಜಿ ಮಾಡುತ್ತಾನೆ. ದಿನ ಬೆಳಗಾದರೆ ನೂರಾರು ಮಂದಿ ಬರುತ್ತಾರೆ. ಅಂಥವರನ್ನು ಜೀವನಪೂರ್ತಿ ತಪಾಸಣೆ ಮಾಡುತ್ತೇವೆ. ಆದರೆ, ಯಾವುದೋ ಒಂದು ಪ್ರಕರಣ ಕೈಕೊಟ್ಟಾಗ ಅದಕ್ಕೆ ವೈದ್ಯರನ್ನೇ ನೇರ ಹೊಣೆ ಮಾಡುವುದು, ಹಲ್ಲೆ ಮಾಡುವುದು ಸರಿಯಲ್ಲ. ಜನರಲ್ಲಿ ಈ ಬಗ್ಗೆ ಸಾಮಾನ್ಯ ಪ್ರಜ್ಞೆ ಮೂಡಬೇಕು’ ಎಂದುಬಸವೇಶ್ವರ ಆಸ್ಪತ್ರೆಯವೈದ್ಯಕೀಯ ನಿರ್ದೇಶಕ ಡಾ.ಶರಣಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.