ADVERTISEMENT

ಸಾಮಾಜಿಕ ಜಾಗೃತಿ ಮೂಡಿಸಿದ ಡಾ.ರಾಮರಾವ್ ಮಹಾರಾಜರ

ಮಹಾರಾಜರಲ್ಲಿ ಸೇವಾಲಾಲರನ್ನು ಕಂಡ ಬಂಜಾರಾ ಸಮುದಾಯ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 3:21 IST
Last Updated 1 ನವೆಂಬರ್ 2020, 3:21 IST
2011ರ ಫೆಬ್ರುವರಿ 17ರಂದು ನಡೆದ ಗುಲಬರ್ಗಾ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ರಾಮರಾವ್‌ ಮಹಾರಾಜ ಅವರಿಗೆ ಗೌರವ ಡಾಕ್ಟರೇಟ್‌ ಪ್ರಧಾನ ಮಾಡಿದ ಕ್ಷಣವಿದು. ಆಗಿನ ಕುಲಪತಿ ಎ.ಟಿ. ಪುಟ್ಟಯ್ಯ, ಮೌಲ್ಯಮಾಪನ ಕುಲಸಚಿವ ಡಿ.ಬಿ.ನಾಯಕ, ಕುಲಸಚಿವರಾಗಿದ್ದ ಎಸ್‌.ಎಲ್‌. ಹಿರೇಮಠ ಇದ್ದಾರೆ
2011ರ ಫೆಬ್ರುವರಿ 17ರಂದು ನಡೆದ ಗುಲಬರ್ಗಾ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ರಾಮರಾವ್‌ ಮಹಾರಾಜ ಅವರಿಗೆ ಗೌರವ ಡಾಕ್ಟರೇಟ್‌ ಪ್ರಧಾನ ಮಾಡಿದ ಕ್ಷಣವಿದು. ಆಗಿನ ಕುಲಪತಿ ಎ.ಟಿ. ಪುಟ್ಟಯ್ಯ, ಮೌಲ್ಯಮಾಪನ ಕುಲಸಚಿವ ಡಿ.ಬಿ.ನಾಯಕ, ಕುಲಸಚಿವರಾಗಿದ್ದ ಎಸ್‌.ಎಲ್‌. ಹಿರೇಮಠ ಇದ್ದಾರೆ   

ಚಿಂಚೋಳಿ: ಮುಂಬೈಯ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದ ಮಹಾರಾಷ್ಟ್ರದ ಪೌರಾದೇವಿ ಶಕ್ತಿಪೀಠದ ಡಾ.ರಾಮರಾವ್ ಮಹಾರಾಜರು ಬಂಜಾರಾ ಸಮುದಾಯದ ಅನರ್ಘ್ಯ ರತ್ನ. ಅಜ್ಞಾನ, ಅಂಧಶ್ರದ್ಧೆಯಿಂದ ಬಸವಳಿದ ಬಂಜಾರಾ ಸಮುದಾಯದಲ್ಲಿ ಅರಿವಿನ ಕದ ತೆರೆದು ಶೈಕ್ಷಣಿಕ ಮಹತ್ವ ಸಾರುತ್ತ ಧರ್ಮ, ಸಂಸ್ಕೃತಿ ಜತೆಗೆ ಸಾಮಾಜಿಕ ಜಾಗೃತಿ ಮೂಡಿಸಿದ್ದರ ಫಲವಾಗಿಯೇ ಬಂಜಾರಾ ಸಮಾಜದಲ್ಲಿ ಬೆಳಕು ಮೂಡಿದೆ.

ಪುತಳಾಬಾಯಿ, ಪರಶುರಾಮ ಮಹಾರಾಜ ದಂಪತಿಯ ಪುತ್ರರಾದ ಡಾ. ರಾಮರಾವ್ ಮಹಾರಾಜ ಬಾಲಬ್ರಹ್ಮಚಾರಿ. 7 ಜುಲೈ 1935ರಲ್ಲಿ ಪೌರಾದೇವಿಯಲ್ಲಿ ಜನಿಸಿದ್ದ ಅವರು ಬಂಜಾರಾ ಸಮುದಾಯದ ಏಳಿಗೆಗಾಗಿ ಅವಿರತವಾಗಿ ಶ್ರಮಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಗೆ ಅವರು ಭಾಜನರಾಗಿದ್ದಾರೆ.

ADVERTISEMENT

ವಾಸ್ತವವಾಗಿ ಡಾ. ರಾಮರಾವ್ ಮಹಾರಾಜರು ಬಂಜಾರಾ ಸಮುದಾ ಯದ ಪಾಲಿಗೆ ಬೆಳಕಿನ ಸೂರ್ಯ. ಸಮುದಾಯದ ಜನರ ಪಾಲಿಗೆ ಇವರೇ ನಡೆದಾಡುವ ಭಗವಂತ. ಭಕ್ತಿ, ಶ್ರದ್ಧೆಯಿಂದ ಭಕ್ತರನ್ನು ಸೂಜಿಗಲ್ಲಿನಂತೆ ಸೆಳೆದ ಕೋಲ್ಮಿಂಚು. ಭಾಷೆ ಮತ್ತು ವೇಷ ಭೂಷಣಗಳಿಂದ ಬಹುಬೇಗ ಗುರುತಿಸಲ್ಪಡುತ್ತಿದ್ದ ಬಂಜಾರಾ ಜನರು ದೇಶದಾದ್ಯತ ಹರಿದು ಹಂಚಿ ಹೋಗಿದ್ದಾರೆ. ಇವರನ್ನು ಒಂದುಗೂಡಿಸಿ ಅವರಲ್ಲಿ ಜಾಗೃತಿ ಮೂಡಿಸಿದ್ದರ ಶ್ರೇಯಸ್ಸು ಡಾ.ರಾಮರಾವ್ ಮಹಾರಾಜರದ್ದಾಗಿದೆ.

ಪರುಷ ಹಸ್ತದ ವಾಕ್‌ಸಿದ್ಧಿ ಪುರುಷರಾಗಿದ್ದ ಡಾ. ರಾಮರಾವ್ ಮಹಾರಾಜರು ಮೂಲತಃ ಸೇವಾಲಾಲ್ ವಂಶಸ್ಥರು. ಆದರೆ ಸೇವಾಲಾಲರನ್ನು ನೋಡದ ಬಂಜಾರಾ ಜನರು ರಾಮ ರಾವ್ ಮಹಾರಾಜರಲ್ಲಿಯೇ ಸೇವಾಲಾಲ್‌ರನ್ನು ಕಾಣುತ್ತಿದ್ದರು. ವ್ಯಸನಮುಕ್ತ ಸಮಾಜ ನಿರ್ಮಾಣ ರಾಮರಾವ್ ಮಹಾರಾಜರ ಕನಸಾಗಿತ್ತು. ಅಂತೆಯೇ, ಸಮುದಾಯದಲ್ಲಿ ಜಾಗೃತಿ ಮೂಡಿಸಲು ವ್ಯಸನಗಳನ್ನು ಬಿಡಿಸಲು ಸೇವಾಲಾಲ್ ವ್ರತ ಅಭಿಯಾನ ಕೈಗೊಂಡು ದೀಕ್ಷೆ ನೀಡಿ ಜನರನ್ನು ದುಶ್ಚಟಗಳಿಂದ ದೂರ ಮಾಡಿದ್ದಾರೆ.

ಡಾ.ರಾಮರಾವ್ ಮಾರಾಜರ ನೇತೃತ್ವದಲ್ಲಿ ತೆಲಂಗಾಣದಲ್ಲಿ ಪ್ರೇಮ ಸಿಂಗ್ ಮಹಾರಾಜ ಮತ್ತು ವಿಠಲ ನಾಯಕ್, ಬದ್ದು ನಾಯಕ್, ಗೊಬ್ಬೂರುವಾಡಿಯ ಬಳಿರಾಮ ಮಹಾರಾಜ, ಕಿಶನ ನಾಯಕ, ಗೋವಿಂದ ಮಹಾರಾಜ ನೇತೃತ್ವದಲ್ಲಿ ದೀಕ್ಷಾ ಕಾರ್ಯಕ್ರಮ ನಡೆಸಿ ಸಮಾಜದಲ್ಲಿ ಪರಿವರ್ತನೆ ಗಾಳಿ ಬೀಸಿದ್ದರು. ಅವರಿಲ್ಲದ ಬಂಜಾರ ಸಮುದಾಯ ಶೋಕದಲ್ಲಿದೆ ಎಂದು ನೆಲಗಂಗಿ ತಾಂಡಾದ ಭಕ್ತ ಜಗನ್ನಾಥ ರಾಠೋಡ್ ಮಹಾರಾಜರ ಕೊಡುಗೆಯನ್ನು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.