ADVERTISEMENT

ಕಲಬುರ್ಗಿ: ಮಳೆ ನಿಂತರೂ ನಿಲ್ಲದ ಕೊಳಚೆ ನೀರು

ಭಾರಿ ಮಳೆಗೆ ಹದಗೆಟ್ಟ ರಸ್ತೆ, ಮ್ಯಾನ್‌ಹೋಲ್; ನಿವಾಸಿಗಳಿಗೆ ನಿತ್ಯ ಸಮಸ್ಯೆ

ಹನಮಂತ ಕೊಪ್ಪದ
Published 19 ಅಕ್ಟೋಬರ್ 2020, 19:45 IST
Last Updated 19 ಅಕ್ಟೋಬರ್ 2020, 19:45 IST
ಕಲಬುರ್ಗಿಯ ಜಿ.ಆರ್‌.ನಗರದ ರಸ್ತೆಯಲ್ಲಿರುವ ಮ್ಯಾನ್‌ಹೋಲ್‌ನಿಂದ ಕೊಳಚೆ ನೀರು ಹರಿಯುತ್ತಿರುವುದು
ಕಲಬುರ್ಗಿಯ ಜಿ.ಆರ್‌.ನಗರದ ರಸ್ತೆಯಲ್ಲಿರುವ ಮ್ಯಾನ್‌ಹೋಲ್‌ನಿಂದ ಕೊಳಚೆ ನೀರು ಹರಿಯುತ್ತಿರುವುದು   

ಕಲಬುರ್ಗಿ: ನಗರದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಆದರೆ, ಖಾದ್ರಿ ಚೌಕ್‌ಗೆ ಹೋಗುವ ಇಲ್ಲಿನ ಜಿ.ಆರ್.ನಗರದ ರಸ್ತೆಯಲ್ಲಿ ಮಾತ್ರ ನೀರು ಹರಿಯುತ್ತಲೇ ಇದೆ!

ಭಾರಿ ಮಳೆಗೆ ಇಲ್ಲಿನ ಮ್ಯಾನ್‌ಹೋಲ್‌ಗಳು ಒಡೆದು, ಮಳೆ ನೀರಿನೊಂದಿಗೆ ಕೊಳಚೆ ನೀರು ಸಹ ಮನೆಗಳಿಗೆ ನುಗ್ಗಿದ್ದರಿಂದ ನಿವಾಸಿಗಳು ದುರ್ನಾತದಿಂದ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ರಸ್ತೆಯಲ್ಲಿರುವ 5 ಮ್ಯಾನ್‌ಹೋಲ್‌ಗಳು ಒಡೆದಿದ್ದು, ಅವುಗಳಿಂದ ಕೊಳಚೆ ನೀರಿನ ಬುಗ್ಗೆಗಳು ಚಿಮ್ಮುತ್ತಿವೆ. ರಸ್ತೆ ಸುತ್ತ ಅಂಗಡಿ, ದೇವಸ್ಥಾನ, ಹೋಟೆಲ್, ಮನೆಗಳು ಇರುವುದರಿಂದ ನೈರ್ಮಲ್ಯ ಸಮಸ್ಯೆ ಎದುರಾಗಿದೆ.

ಕೊಳಚೆ ನೀರು ಎಲ್ಲೆಡೆ ವ್ಯಾಪಿಸುತ್ತಿರುವುದು ಜನರ ಓಡಾಟ ಮತ್ತು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಈ ಭಾಗದಲ್ಲಿ ವಾಹನಗಳು ಸಂಚರಿಸಿದಾಗ ಕೊಳಚೆ ನೀರು ಪಾದಚಾರಿಗಳ ಮೇಲೆ ಸಿಡಿದು ಅವಾಂತರ ಸೃಷ್ಟಿಸುತ್ತದೆ. ಅಲ್ಲದೆ, ಸೊಳ್ಳೆಗಳ ಕಾಟವೂ ಹೆಚ್ಚಾಗಿದ್ದು ಬಡಾವಣೆ ನಿವಾಸಿಗಳಲ್ಲಿ ಸಾಂಕ್ರಾಮಿಕ ರೋಗ ಭೀತಿ ಮನೆ ಮಾಡಿದೆ.

ADVERTISEMENT

ಜಿ.ಆರ್.ನಗರದ ಹತ್ತಿರದಲ್ಲಿರುವ ಕೈಲಾಸನಗರದಲ್ಲಿ ಪರಿಸ್ಥತಿ ಕೂಡಾ ಇದಕ್ಕಿಂತ ಭಿನ್ನವಾಗಿಲ್ಲ. ಈ ಬಡಾವಣೆ ತಗ್ಗು ಪ್ರದೇಶದಲ್ಲಿರುವಕಾರಣ ಮಳೆ ಬಂದಾಗ ಬೇರೆ ಬಡಾವಣೆಗಳ ಒಳಚರಂಡಿಗಳ ನೀರು ಇಲ್ಲಿಗೆ ನುಗ್ಗುತ್ತಿದೆ. ಇದರಿಂದಾಗಿ ಕೊಳಚೆ ನೀರಿನ ದುರ್ನಾತದಿಂದ ನಿವಾಸಿಗಳು ಕಂಗೆಡುವಂತಾಗಿದೆ.

‘ಹತ್ತು ವರ್ಷಗಳಿಂದ ಈ ಸಮಸ್ಯೆ ಅನುಭವಿಸುತ್ತಿದ್ದೇವೆ. ಒಳಚರಂಡಿಗಳಲ್ಲಿ ಹೂಳು ತುಂಬಿರುವುದರಿಂದ ಮಳೆ ನೀರು ಸರಾಗವಾಗಿ ಹರಿಯದೆ ಮನೆಗಳಿಗೆ ನುಗ್ಗುತ್ತದೆ. ಈ ಕುರಿತು ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಸ್ಪಂದನೆ ದೊರೆತಿಲ್ಲ’ ಎಂದು ಸ್ಥಳೀಯರು ಹೇಳುತ್ತಾರೆ.

‘ಬಡಾವಣೆಯ ಹಲವೆಡೆ ಸಿಸಿ ರಸ್ತೆ ನಿರ್ಮಿಸಿಲ್ಲ. ನಾವೇ ಮಣ್ಣು ಹಾಕಿ ರಸ್ತೆ ಮಾಡಿಕೊಂಡಿದ್ದೇವೆ. ಆದರೆ, ಮಳೆ ಬಂದಾಗ ರಸ್ತೆ ಕೆಸರು ಗದ್ದೆಯಾಗುತ್ತದೆ. ಇದರಿಂದ ವಾಹನಗಳನ್ನು ಹೊರಗಡೆ ಒಯ್ಯಲು ಸಾಧ್ಯವಾಗುವುದಿಲ್ಲ. ನೀರಿನಲ್ಲಿ ವಾಹನಗಳು ನಿಲ್ಲುವುದರಿಂದ ಬೇಗನೇ ಕೆಡುತ್ತವೆ’ ಎಂದು ನಿವಾಸಿ ಮಲ್ಲಿಕಾರ್ಜಿನ ಭೈರಮುಡಗಿ ದೂರಿದರು.

ದುರ್ನಾತದಿಂದ ತೀವ್ರ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮ್ಯಾನ್‌ ಹೋಲ್‌ಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಜಿ.ಆರ್.ನಗರದ ವ್ಯಾಪಾರಿಶರಣು ನಿಂಬಾಳ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.