ADVERTISEMENT

ಆಲೂರ: 7 ತಿಂಗಳಿಂದ ನೀರಿನ ಸಮಸ್ಯೆ

ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬೀಗ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 5:57 IST
Last Updated 3 ಆಗಸ್ಟ್ 2020, 5:57 IST
ಆಲೂರ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬೀಗ ಹಾಕಿರುವುದು
ಆಲೂರ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬೀಗ ಹಾಕಿರುವುದು   

ಯಡ್ರಾಮಿ: ತಾಲ್ಲೂಕಿನ ಆಲೂರ ಗ್ರಾಮದಲ್ಲಿ 7 ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಗ್ರಾಮದಲ್ಲಿದ್ದ ಕೊಳವೆ ಬಾವಿಗಳಲ್ಲಿ ಸರಿಯಾಗಿ ನೀರು ಬರದ ಕಾರಣ ಶುದ್ಧ ಕುಡಿಯುವ ನೀರಿನ ಘಟಕದ ಮೊರೆ ಹೋಗಿದ್ದರು. ಅದು ಕೂಡ 7 ತಿಂಗಳಿಂದ ಕೆಟ್ಟು ನಿಂತಿರುವುದರಿಂದ ಮಳೆಗಾಲದಲ್ಲೂ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ.

ಆಲೂರ ಗ್ರಾಮದಲ್ಲೇ ಗ್ರಾಮ ಪಂಚಾಯತಿ ಕಚೇರಿ ಇದ್ದು 7 ಸದಸ್ಯರನ್ನು ಹೊಂದಿದೆ. 2 ಸಾವಿರ ಮತದಾರರು ಸೇರಿ 3 ಸಾವಿರ ಜನಸಂಖ್ಯೆ ಇದೆ.

ಗ್ರಾಮದಲ್ಲಿ 6 ಕೊಳವೆ ಬಾವಿಗಳು ಇದ್ದರೂ ಯಾವುದರಲ್ಲಿಯೂ ಸರಿಯಾಗಿ ನೀರು ಬರುತ್ತಿಲ್ಲ. ಗ್ರಾಮಸ್ಥರು ಶುದ್ಧ ಕುಡಿಯುವ ನೀರಿನ ಘಟಕವಾದರೂ ಆಸರೆಯಾಗುತ್ತದೆ ಎಂದುಕೊಂಡಿದ್ದರು. ಆದರೆ ಅದಕ್ಕೆ ಕೂಡ ಬೀಗ ಹಾಕಲಾಗಿದೆ. ಕೊಳವೆಬಾವಿಗಳ ಮುಂದೆ ಗಂಟೆಗಟ್ಟಲೆ ನಿಲ್ಲಬೇಕು. ಇಲ್ಲವೇ ಗ್ರಾಮದ ಸುತ್ತಮುತ್ತ ಇರುವ ಕರೆ, ಬಾವಿಗಳಿಗೆ ಹೋಗಿ ನೀರು ತರಬೇಕಾದ ಪರಿಸ್ಥಿತಿ ಬಂದಿದೆ. ಮಹಿಳೆಯರು, ಮಕ್ಕಳು, ಹಿರಿಯರು ತುಂಬಾ ಹೈರಾಣಾಗಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ADVERTISEMENT

ಕುಡಿಯುವ ನೀರು ಒದಗಿಸುವಂತೆ ಗ್ರಾಮ ಪಂಚಾಯಿತಿ ಮುಂದೆ ಎರಡು ಬಾರಿ ಪ್ರತಿಭಟನೆ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಗ್ರಾಮದಲ್ಲಿ ಇನ್ನೆರಡು ಕೊಳವೆ ಬಾವಿ ಹಾಕಿದರೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಆದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಗ್ರಾಮಕ್ಕೆ ಸರ್ಮಪಕ ನೀರು ಒದಗಿಸುವಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸದಸ್ಯರಿಗೆ ಮನವಿ ಮಾಡಿದರೂ ಲೆಕ್ಕಕ್ಕೆ ಇಲ್ಲದಂತಾಗಿದೆ. ಇವರ ನಿರ್ಲಕ್ಷ್ಯದಿಂದ ಆಲೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರಾದ ಸಿದ್ದು ಅಂಗಡಿ, ರಾಹುಲ್ ಕಟ್ಟಮನಿ.

ಘಟಕ ಆರಂಭದಲ್ಲಿಯೇ ಸ್ವಲ್ಪ ದಿನ ಚನ್ನಾಗಿ ನಡೆದು ನಂತರ ಕೆಟ್ಟು ಹೋಗಿದೆ, ತದನಂತರ ಅಧಿಕಾರಿಗಳು ರಿಪೇರಿ ಮಾಡಿಸದೆ ಘಟಕಕ್ಕೆ ಬೀಗ ಹಾಕಿದ್ದರಿಂದ ನೀರಿನ ಸಮಸ್ಯೆ ಎದುರಾಗಿದೆ ಈಗ ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಿ, ಗ್ರಾಮಕ್ಕೆ ಎರಡು ಕೊಳವೆ ಬಾವಿ ಹಾಕಿದರೆ ಸಮಸ್ಯೆ ಬಗೆಹರಿಯುತ್ತದೆ ಎನ್ನುತ್ತಾರೆ ಕರವೇ ಮುಖಂಡ ಸಾಹೇಬಗೌಡ ನಾಟಿಕಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.