ADVERTISEMENT

ಕಾಳಗಿ: ‘ಬೆಣ್ಣೆ ಇದ್ದರೂ ಬರ ತಪ್ಪಿಲ್ಲ’

ಬರದಿಂದ 19,151 ಹೆಕ್ಟೇರ್‌ ಬೆಳೆಹಾನಿ

ಗುಂಡಪ್ಪ ಕರೆಮನೋರ
Published 15 ಡಿಸೆಂಬರ್ 2023, 6:38 IST
Last Updated 15 ಡಿಸೆಂಬರ್ 2023, 6:38 IST
ಕಾಳಗಿ ತಾಲ್ಲೂಕಿನ ಗೋಟೂರ ಗ್ರಾಮದ ಕಡಲೆ ಹೊಲ ಮಳೆಗೆ ಕಾಯುತ್ತಿದೆ
ಕಾಳಗಿ ತಾಲ್ಲೂಕಿನ ಗೋಟೂರ ಗ್ರಾಮದ ಕಡಲೆ ಹೊಲ ಮಳೆಗೆ ಕಾಯುತ್ತಿದೆ   

ಕಾಳಗಿ: ನೀರಿನ ಕೊರತೆ ನೀಗಿಸುವ ಸಲುವಾಗಿ ತಾಲ್ಲೂಕಿನಲ್ಲಿ ಹೇರೂರ (ಕೆ) ಬೆಣ್ಣೆತೊರಾ ಜಲಾಶಯ ತಲೆಯೆತ್ತಿದೆ. ಈ ಸಂಬಂಧ ಸರ್ಕಾರದ ಕೋಟ್ಯಂತರ ರೂಪಾಯಿ ಇನ್ನು ಖರ್ಚು ಆಗುತ್ತಲೇ ಇದೆ. ಆದರೂ ಯಾವುದೇ ಹೊಲಕ್ಕೆ ಸಮರ್ಪಕವಾಗಿ ನೀರು ಹರಿಯದ ಕಾರಣ ತಾಲ್ಲೂಕಿನ ‘ಬರ’ ತಾಂಡವವಾಡುತ್ತಿದೆ.

ಮುಂಗಾರು ಮಳೆ ತಡವಾಗಿ ಆಗಮನವಾಗಿದೆ. ಹಿಂಗಾರು ಮಳೆ ನಿರ್ದಿಷ್ಟ ಪ್ರಮಾಣದಲ್ಲಿ ಬರಲೇ ಇಲ್ಲ. ಈ ಮಧ್ಯೆ ಮುಂಗಾರಿನಲ್ಲಿ ಉಂಟಾದ ಪ್ರವಾಹಕ್ಕೆ 3,834 ಹೆಕ್ಟೇರ್‌ ಬೆಳೆ ಹಾನಿಯಾಗಿದೆ.  4,917 ರೈತರಿಗೆ ಭೂಮಿ ತಂತ್ರಾಂಶದಿಂದ ಅವರ ಖಾತೆಗೆ ಪರಿಹಾರದ ಹಣ ಜಮೆ ಮಾಡಲಾಗಿದೆ ಎನ್ನುತ್ತಾರೆ ತಹಶೀಲ್ದಾರ್ ಘಮಾವತಿ ರಾಠೋಡ.

ಮುಂಗಾರಿನಲ್ಲೇ 145 ಮನೆಗಳು ಬಿದ್ದಿದ್ದು, ಹಾನಿಯಾದ ಈ ಮನೆಗಳಿಗೆ ತಲಾ ₹4 ಸಾವಿರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಕೊರವಿ ಸಣ್ಣ ತಾಂಡಾದಲ್ಲಿ ಗೋಡೆ ಕುಸಿದುಬಿದ್ದು 22 ಕುರಿಗಳ ಜೀವ ಹಾನಿಯಾಗಿದೆ. ಆದರೂ ಪರಿಹಾರ ಬಂದಿಲ್ಲ.

ADVERTISEMENT

ಮಳೆ ಕೊರತೆಗೆ ಕಾಳಗಿ, ಕೋಡ್ಲಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ಉದ್ದು 567 ಹೆಕ್ಟೇರ್‌, ತೊಗರಿ 18,176 ಹೆಕ್ಟೇರ್‌, ಹತ್ತಿ 143 ಹೆಕ್ಟೇರ್‌, ಸೋಯಾಬಿನ್ 265 ಹೆಕ್ಟೇರ್‌ ಸೇರಿ ಒಟ್ಟು 19,151 ಹೆಕ್ಟೇರ್‌ ಬೆಳೆ ಹಾನಿಯಾಗಿದೆ.

ಕಾಳಗಿ ರೌದ್ರಾವತಿ ನದಿ, ಬೆಣ್ಣೆತೊರಾ ಜಲಾಶಯದ ಎಡದಂಡೆ ಮತ್ತು ಬಲದಂಡೆ ಕಾಲುವೆ ಮತ್ತಿತರ ಮೂಲಗಳ ನೀರಾವರಿ ಪೈಕಿ ಹಿಂಗಾರು ಹಂಗಾಮಿನಲ್ಲಿ ಜೋಳ 10 ಹೆಕ್ಟೇರ್‌, ಗೋಧಿ 10 ಹೆಕ್ಟೇರ್‌, ಕಡಲೆ 10 ಹೆಕ್ಟೇರ್‌ ಗುರಿ ಹೊಂದಲಾಗಿತ್ತು. ಆದರೆ, ನಿಗದಿತ ಗುರಿ ಸಾಧನೆಯಾಗಿಲ್ಲ.

ಖುಷ್ಕಿ ಬೆಳೆಗಳಲ್ಲಿ ಏಕದಳ 1160 ಹೆಕ್ಟೇರ್‌, ಬೇಳೆಕಾಳು (ಕಡಲೆ) 1430 ಹೆಕ್ಟೇರ್‌, ಎಣ್ಣೆಕಾಳು 10 ಹೆಕ್ಟೇರ್‌ ಹೀಗೆ ಒಟ್ಟು 2600 ಹೆಕ್ಟೇರ್‌ ಗುರಿ ಹೊಂದಿದ್ದ ಕ್ಷೇತ್ರದಲ್ಲಿ, 2,225 ಹೆಕ್ಟೇರ್‌ ಕ್ಷೇತ್ರ ಬಿತ್ತನೆಯಾಗಿದೆ ಎನ್ನುತ್ತಾರೆ ಕೃಷಿ ಅಧಿಕಾರಿ ಸರೋಜಾ ಕಲಬುರಗಿ.

’ಬರ ಘೋಷಣೆಯಿಂದಾಗಿ 3 ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಕಾಮಗಾರಿ ಶುರು ಮಾಡಲಾಗಿದೆ. ಕೋಡ್ಲಿಯಲ್ಲಿ 330, ತೆಂಗಳಿಯಲ್ಲಿ 350 ಮತ್ತು ಹಲಚೇರಾದಲ್ಲಿ 60 ಕೂಲಿಕಾರರಿಗೆ ಉದ್ಯೋಗ ಕಲ್ಪಿಸಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಗಂಗಾಧರ ವಿಶ್ವಕರ್ಮ ತಿಳಿಸಿದರು.

’ಮೇವು, ನೀರಿನ ಸೂಕ್ತ ಸ್ಥಳವಿಲ್ಲದೇ 2,552 ದನಕರುಗಳು, 41,805 ಎಮ್ಮೆಗಳು, 9,161 ಕುರಿಗಳು ಮತ್ತು 40,295 ಆಡುಗಳು ಪರಿತಪಿಸುತ್ತಿವೆ. ತೇವಾಂಶ ಕೊರತೆಗೆ ತೊಗರಿ, ಕಡಲೆ ಅಲ್ಲಲ್ಲಿ ನೆಟೆ ರೋಗದಿಂದ ಹಾಳಾಗಿ ಹೋಗಿದೆ. ಸರ್ಕಾರ ಬರಗಾಲ ಪ್ರದೇಶವೆಂದು ಘೋಷಣೆ ಮಾಡಿದೆ. ಆದರೆ ಬರ ಪರಿಹಾರ ಬಂದಿಲ್ಲ. ಬೆಳೆ ವಿಮೆಯೂ ಕೈಗೆ ಸಿಕ್ಕಿಲ್ಲ. ಫೋನ್ ಮಾಡಿದರೆ ವಿಮೆ ಕಂಪನಿಯವರು ಕರೆ ಸ್ವೀಕರಿಸುತ್ತಿಲ್ಲ’ ಎಂದು ಪೇಠಶಿರೂರದ ಮಹಾಂತಯ್ಯ ವಸ್ತ್ರದ ಅಸಮಾಧಾನ ಹೊರಹಾಕಿದರು.

ಭೀಮರಾವ ಹಿಂದಿನಮನಿ ಸುಂಠಾಣ ಗ್ರಾಮದ ರೈತ
ಮಳೆ ಅಭಾವದಿಂದ ಬೆಳೆಯು ನೆಟೆರೋಗಕ್ಕೆ ತುತ್ತಾಗಿ ಸಂಪೂರ್ಣ ಹಾಳಾಗಿದೆ. ಕುಡಿಯಲು ನೀರಿನ ಕೊರತೆ ಎದುರಾಗಿದೆ ಊರಿನ 20ರಿಂದ 30ಕುಟುಂಬಗಳು ವಲಸೆ ಹೋಗಿವೆ
ಭೀಮರಾವ ಹಿಂದಿನಮನಿ ಸುಂಠಾಣ ಗ್ರಾಮದ ರೈತ

ನಾಗಣ್ಣಾ ತಳವಾರ, ಕಮಕನೂರ ಗ್ರಾಮದ ರೈತ

ಈ ವರ್ಷ 2 ತಿಂಗಳು ಮಾತ್ರ ಮಳೆ ಬಂದಿದೆ. ಮಂಜು ಬೀಳುವುದರಿಂದ ತೊಗರಿಯ ಕೆನೆ ಹೂವು ಈರುಳ್ಳಿ ಹತ್ತಿ ತರಕಾರಿ ಮೇಲೆ ದುಷ್ಪರಿಣಾಮ ಬೀರಿದೆ
ನಾಗಣ್ಣಾ ತಳವಾರ, ಕಮಕನೂರ ಗ್ರಾಮದ ರೈತ
ಗುರುನಂದೇಶ ಕೋಣಿನ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ gurunandesh 
21 ಗ್ರಾಮ ಪಂಚಾಯಿತಿಗಳ 73 ಹಳ್ಳಿ 28 ತಾಂಡಾಗಳಲ್ಲಿ ಒಟ್ಟು 63407 ಕೂಲಿಕಾರರಿದ್ದಾರೆ. ಇವರಿಗೆ ಕೆಲಸ ನೀಡುವಲ್ಲಿ ಮತ್ತು ಕುಡಿಯುವ ನೀರು ದನಕರುಗಳಿಗೆ ಮೇವಿನ ಬಗ್ಗೆ ಅಧಿಕಾರಿಗಳು ಯಾವುದೇ ತಯಾರಿ ಮಾಡಿಕೊಂಡಿಲ್ಲ
ಗುರುನಂದೇಶ ಕೋಣಿನ, ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.