ADVERTISEMENT

ಬರ ನಿರ್ವಹಣೆ ಸಭೆಗೂ ಬಾರದ ಅಧಿಕಾರಿಗಳು

ಗೈರಾದವರಿಗೆ ನೊಟೀಸ್‌ ನೀಡಲು ಉಸ್ತುವಾರಿ ಕಾರ್ಯದರ್ಶಿ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 12:41 IST
Last Updated 22 ಮಾರ್ಚ್ 2019, 12:41 IST
ಬರ ನಿರ್ವಹಣಾ ಸಭೆಯಲ್ಲಿ ಡಾ.ಜೆ.ರವಿಶಂಕರ ಮಾತನಾಡಿದರು
ಬರ ನಿರ್ವಹಣಾ ಸಭೆಯಲ್ಲಿ ಡಾ.ಜೆ.ರವಿಶಂಕರ ಮಾತನಾಡಿದರು   

ಕಲಬುರ್ಗಿ: ‘ಜಿಲ್ಲೆಯಲ್ಲಿ ಭೀಕರ ಬರ ಆವರಿಸಿದ್ದು, ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವ ಮೂಲಕ ಜನರಿಗೆ ಕುಡಿಯುವ ನೀರು ಒದಗಿಸಬೇಕು’ ಎಂದು ವಸತಿ ಇಲಾಖೆಯ ಕಾರ್ಯದರ್ಶಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಜೆ. ರವಿಶಂಕರ ಸೂಚಿಸಿದರು.

ಶುಕ್ರವಾರ ಇಲ್ಲಿ ಜಿಲ್ಲೆಯ ಬರ ಪರಿಸ್ಥಿತಿಯ ಪರಿಶೀಲನಾ ಸಭೆ ನಡೆಸಿದ ಅವರು, ಬರ ಪರಿಸ್ಥಿತಿ ವಿಷಯದ ಚರ್ಚೆಗೆ ಬಾರದ ಅಧಿಕಾರಿಗಳಿಗೆ ಕಾರಣ ಕೇಳಿ ನೊಟೀಸ್‌ ಜಾರಿಮಾಡುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿದರು.

‘ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದೆ. ಜಿಲ್ಲಾಮಟ್ಟದ ಅಧಿಕಾರಿಗಳು ಜಿಲ್ಲಾ ಚುನಾವಣಾಧಿಕಾರಿ ಪೂರ್ವಾನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡಬಾರದು. ಅದಕ್ಕೂ ಮಿಗಿಲಾಗಿ ಬರಗಾಲದಲ್ಲಿ ಕುಡಿಯುವ ನೀರು, ಮೇವು ಕೊರತೆಯಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ’ ಎಂದು ಅವರು ಕಿವಿಮಾತು ಹೇಳಿದರು.

ADVERTISEMENT

ಬರ ನಿರ್ವಹಣೆಗೆ ಅನುದಾನದ ಕೊರತೆಯಿಲ್ಲ. ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿರುವ ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಬೇಕು. ಅದಕ್ಕಾಗಿ ಹೆಚ್ಚು ನೀರು ಲಭ್ಯವಿರುವ ಖಾಸಗಿ ಕೊಳವೆಬಾವಿಗಳ ಪಟ್ಟಿ ಸಿದ್ಧಪಡಿಸಬೇಕು. ಕುಡಿಯುವ ನೀರಿನ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಗ್ರಾಮೀಣ ಮಹಿಳೆಯರು ಒಂದು ಕೊಡ ನೀರಿಗಾಗಿ ಬಹಳ ದೂರ ಹೋಗಬೇಕಾಗುತ್ತದೆ. ಪದೇ ಪದೇ ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿರುವ ಗ್ರಾಮಗಳಿಗೆ ಶಾಶ್ವತ ಸೌಲಭ್ಯ ಕಲ್ಪಿಸಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ‘ಕಲಬುರ್ಗಿ ನಗರಕ್ಕೆ ಬೆಣ್ಣೆತೊರಾದಿಂದ 2 ಕೋಟಿ ಹಾಗೂ ಭೀಮಾ ನದಿಯಿಂದ 5.5 ಕೋಟಿ ಲೀಟರ್‌ ನೀರು ಪ್ರತಿದಿನ ಪೂರೈಕೆಯಾಗುತ್ತಿದೆ. ಬೆಣ್ಣೆತೊರಾ ಜಲಾಶಯದಿಂದ ನೀರು ಪೂರೈಕೆಯಾಗುವಮಾರ್ಗದ ಮಧ್ಯದಲ್ಲಿ ಸೋರಿಕೆಯಿದ್ದು, ಅದನ್ನು ತಡೆಯುವ ಕಾಮಗಾರಿ ಪ್ರಗತಿಯಲ್ಲಿದೆ. ಭೀಮಾ ನದಿಯಲ್ಲಿ ಸಮರ್ಪಕ ನೀರಿನ ಹರಿವು ಇಲ್ಲದ ಕಾರಣ ನಾರಾಯಣಪುರ ಜಲಾಶಯದಿಂದ ಇಂಡಿ ಶಾಖಾ ಕಾಲುವೆ ಮೂಲಕ ನೀರು ಬಿಡಲಾಗುತ್ತಿದೆ. ಈಗಾಗಲೇ ಸರಡಗಿ ಬ್ಯಾರೇಜ್‌ನಲ್ಲಿ ನೀರು ಸಂಗ್ರಹವಾಗುತ್ತಿದೆ’ ಎಂದರು.

ಜಿಲ್ಲೆಯ ಅಫಜಲಪುರ ಮತ್ತು ಜೇವರ್ಗಿ ಪಟ್ಟಣಗಳಿಗೆ ಕುಡಿಯುವ ನೀರಿನ ತೊಂದರೆಯಿದ್ದು, ಮಹಾರಾಷ್ಟ್ರದ ದುಧನಿ ಜಲಾಶಯದಿಂದ ಭೀಮಾನದಿಗೆ ನೀರು ಬಿಡಲು ಪ್ರಯತ್ನಿಸಲಾಗುತ್ತಿದೆ. ಇದರಿಂದ ಭೀಮಾನದಿಯಲ್ಲಿ ನೀರು ಸಂಗ್ರಹವಾಗಿ ಅಫಜಲಪುರ ಮತ್ತು ಜೇವರ್ಗಿ ನಗರಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಸಾಧ್ಯವಾಗುವುದು. ಕೆಳದಂಡೆ ಮುಲ್ಲಾಮಾರಿ ನದಿಯಿಂದ ನೀರು ಕಾಗಿಣಾ ನದಿಗೆ ಬಿಡುವ ಮೂಲಕ ಸೇಡಂ ಪಟ್ಟಣಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಮಹಾನಗರ ಪಾಲಿಕೆ ಆಯುಕ್ತೆ ಬಿ.ಫೌಜಿಯಾ ತರನ್ನುಮ್, ಉಪ ವಿಭಾಗಾಧಿಕಾರಿ ರಾಹುಲ್ ತುಕಾರಂ ಪಾಂಡ್ವೆ, ಐಎಎಸ್ ಪ್ರೊಬೇಷನರಿ ಅಧಿಕಾರಿ ಸ್ನೇಹಲ್ ಸುಧಾಕರ ಲೋಖಂಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

***

700 ಅಡಿ ಕೊರೆದರೂ ನೀರು ಸಿಗುತ್ತಿಲ್ಲ!

‘ಕುಡಿಯುವ ನೀರಿಗಾಗಿ ಹೊಸ ಕೊಳವೆಬಾವಿಗಳನ್ನು ಕೊರೆಸಲು ಅನುದಾನದ ಕೊರತೆಯಿಲ್ಲ. ಆದರೆ, 700 ಅಡಿ ಆಳ ಕೊರೆದರೂ ನೀರು ಸಿಗುತ್ತಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ ಆತಂಕ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಬರ ನಿರ್ವಹಣೆಗಾಗಿ ಮೂರು ಹಂತದಲ್ಲಿ ಒಟ್ಟು ₹9.75 ಕೋಟಿ ಬಿಡುಗಡೆಯಾಗಿದ್ದು, ಆಳಂದ ಹೊರತುಪಡಿಸಿ ಉಳಿದ ತಾಲ್ಲೂಕುಗಳಿಗೆ ತಲಾ ₹1.5 ಕೋಟಿ ನೀಡಲಾಗಿದೆ. ಆಳಂದ ತಾಲ್ಲೂಕಿಗೆ ₹75 ಲಕ್ಷ ನೀಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು 473 ಕಾಮಗಾರಿ ಪ್ರಾರಂಭಿಸಿದ್ದು, ಈ ಪೈಕಿ 394 ಕಾಮಗಾರಿ ಪೂರ್ಣಗೊಂಡಿವೆ’ ಎಂದು ವಿವರಿಸಿದರು.

‘ನರೇಗಾ ಅಡಿ ಜಿಲ್ಲೆಯಲ್ಲಿ 3,778 ಕುಟುಂಬಗಳು 100 ದಿನ ಕೆಲಸ ಪೂರೈಸಿದ್ದಾರೆ. ಪ್ರಸಕ್ತ ವರ್ಷ 30 ಲಕ್ಷ ಮಾನವ ದಿನಗಳ ಸೃಜನೆಗೆ ಗುರಿ ನೀಡಲಾಗಿದ್ದು, ಇಲ್ಲಿಯವರೆಗೆ 31.32 ಲಕ್ಷ ಮಾನವ ದಿನ ಸೃಜಿಸಲಾಗಿದೆ. ಜಿಲ್ಲೆಯ ಒಟ್ಟು 97,669 ಕುಟುಂಬಗಳಿಗೆ ಉದ್ಯೋಗ ನೀಡಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ 1,578 ಕಾಮಗಾರಿಗಳು ಪ್ರಾರಂಭಗೊಂಡಿದ್ದು, ಇದರಲ್ಲಿ 27,138 ಜನರಿಗೆ ಕೆಲಸ ನೀಡಲಾಗಿದೆ. 2019-20ನೇ ಸಾಲಿಗಾಗಿ 50 ಲಕ್ಷ ಮಾನವ ದಿನಗಳ ಗುರಿ ನೀಡಲಾಗಿದ್ದು, ಜಿಲ್ಲೆಯ ಬರ ಪರಿಸ್ಥಿತಿ ನಿಭಾಯಿಸಲು ಹೆಚ್ಚಿನ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

***

ತಿಂಗಳಿಗೆ ಸಾಲುವಷ್ಟಿದೆ ಮೇವು

‘ಜಿಲ್ಲೆಯಲ್ಲಿ 81,752 ಮೆಟ್ರಿಕ್ ಟನ್ ಮೇವು ಲಭ್ಯವಿದ್ದು, ನಾಲ್ಕು ವಾರ ಜಾನುವಾರುಗಳಿಗೆ ಪೂರೈಸಬಹುದಾಗಿದೆ. ಸದ್ಯ ಜಿಲ್ಲೆಯಲ್ಲಿ ಬೆಳೆ ಕಟಾವು ಮಾಡುತ್ತಿರುವುದರಿಂದ ಹೆಚ್ಚಿನ ಮೇವು ಲಭ್ಯವಾಗಲಿದ್ದು, ಮುಂದಿನ 49 ವಾರಗಳವರೆಗೆ ಮೇವು ಪೂರೈಸಬಹುದಾಗಿದೆ. ಮುಂಜಾಗೃತಾ ಕ್ರಮವಾಗಿ ತಾಲ್ಲೂಕಿಗೆ ಎರಡರಂತೆ ಒಟ್ಟು 14 ಮೇವು ಬ್ಯಾಂಕ್‍ಗಳನ್ನು ಸ್ಥಾಪಿಸಲಾಗಿದೆ’ ಎಂದು ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ನಾಮದೇವ ರಾಠೋಡ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.