ADVERTISEMENT

‘ಗಾಂಜಾ ಪೂರೈಕೆದಾರರ ವಿರುದ್ಧವೂ ಪ್ರಕರಣ’

ಮಾದಕ ವಸ್ತು ವ್ಯಸನಿಗಳ ಮನಃಪರಿವರ್ತನೆ ಕಾರ್ಯಾಗಾರ; ಕಮಿಷನರ್ ಶರಣಪ್ಪ ಎಸ್‌.ಡಿ.

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 14:54 IST
Last Updated 21 ಜೂನ್ 2025, 14:54 IST
ಕಲಬುರಗಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶನಿವಾರ ನಡೆದ ಮಾದಕ ವಸ್ತು ವ್ಯಸನಿಗಳ ಮನಃಪರಿವರ್ತನೆ ಕಾರ್ಯಾಗಾರದಲ್ಲಿ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಮಾತನಾಡಿದರು. ಗಣ್ಯರು ಉಪಸ್ಥಿತರಿದ್ದರು            ಪ್ರಜಾವಾಣಿ ಚಿತ್ರ
ಕಲಬುರಗಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶನಿವಾರ ನಡೆದ ಮಾದಕ ವಸ್ತು ವ್ಯಸನಿಗಳ ಮನಃಪರಿವರ್ತನೆ ಕಾರ್ಯಾಗಾರದಲ್ಲಿ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಮಾತನಾಡಿದರು. ಗಣ್ಯರು ಉಪಸ್ಥಿತರಿದ್ದರು            ಪ್ರಜಾವಾಣಿ ಚಿತ್ರ   

ಕಲಬುರಗಿ: ‘ನಿಷೇಧಿತ ಮಾದಕ ದ್ರವ್ಯ ಸೇವನೆ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ 50ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದು. ಈ ವರ್ಷ 200ಕ್ಕೂ ಅಧಿಕ ಪ್ರಕರಣ ದಾಖಲಿಸಿಕೊಂಡಿದ್ದು, ಗಾಂಜಾ ಸೇವಿಸಿದವರು ಸೇರಿದಂತೆ ಸರಬರಾಜು ಮಾಡುವವರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ. ಹೇಳಿದರು.

ನಗರದ ಕಮಿಷನರ್ ಕಚೇರಿಯಲ್ಲಿ ಶನಿವಾರ ನಗರ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಮಾದಕ ವಸ್ತು ವ್ಯಸನಿಗಳ ಮನಃಪರಿವರ್ತನೆ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಸ್ತುತ ಸಮಾಜದ ಕೆಲವು ಯುವಕರು ಮಾದಕವಸ್ತು ಸೇವನೆ ದಾಸರಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಶೆಡ್ಯೂಲ್ ಎಚ್ ಡ್ರಗ್ ಸೇವನೆ ಹಾಗೂ ಕೆಲವು ಕೆಮ್ಮಿನ ಔಷಧಗಳು, ಮತ್ತು ಬರೆಸುವ ಔಷಧಗಳನ್ನು ಯುವ ಸಮುದಾಯ ತೆಗೆದುಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ’ ಎಂದರು.

ADVERTISEMENT

‘ಮಾದಕ ವಸ್ತುಗಳ ಬಳಕೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರ ಜತೆಗೆ ಸಮಾಜದ ಮೇಲೂ ಪರಿಣಾಮ ಬೀರಬಹುದು. ಹೀಗಾಗಿ, ಮಾದಕ ವ್ಯಸನದಿಂದ ಮುಕ್ತಿ ಹೊಂದಲು ವ್ಯಸನ ಬಿಡಿಸುವ ಶಿಬಿರಗಳು ಮತ್ತು ಮನೋವ್ಯೆದ್ಯರಿಗಿಂತ ವ್ಯಸನ ಹೊಂದಿದವರ ಮನೋಸ್ಥೈರ್ಯ ಮುಖ್ಯವಾಗುತ್ತದೆ’ ಎಂದರು.

‘ಒಬ್ಬ ವ್ಯಕ್ತಿ ಗಾಂಜಾ ಅಥವಾ ಮಾದಕ ದ್ರವ್ಯ ಸೇವನೆ ಮಾಡಿ ನಶೆಯಲ್ಲಿ ತೇಲಾಡುವುದರಿಂದ ತನ್ನ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತಾನೆ. ಇದರಿಂದ ತನ್ನ ಸಂಸಾರದಲ್ಲಿ ಕಲಹಗಳು ಏರ್ಪಡುತ್ತವೆ. ಸಾಮಾಜಿಕ ಜೀವನವೂ ಹಾಳಾಗುತ್ತಿದೆ. ಸಮಾಜವೂ ಆತನನ್ನು ಧಿಕ್ಕರಿಸುತ್ತದೆ. ನಶೆಯಿಂದ ಹೊರಬರುವುದು ಕೇವಲ ನಿಮ್ಮಿಂದ (ವ್ಯಸನಿಗಳು) ಮಾತ್ರವೇ ಸಾಧ್ಯ. ನಶೆ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು’ ಎಂದು ಹೇಳಿದರು.

ಜಿಲ್ಲಾ ಮನೋವೈದ್ಯ ಡಾ.ಆರಿಫ್ ಮಾತನಾಡಿ, ‘ನಶೆ ತರಿಸುವ ಮಾದಕ ವಸ್ತುಗಳು ಸಾಮಾಜಿಕ ಪೀಡುಗಾಗಿ ಮಾರ್ಪಟ್ಟಿದ್ದು, ಯುವ ಸಮುದಾಯವನ್ನು ತಪ್ಪು ದಾರಿಗೆ ಕರೆದೊಯ್ದು ಅವರ ಬದುಕನ್ನು ಕಸಿದುಕೊಳ್ಳುತ್ತಿದೆ’ ಎಂದು ಎಚ್ಚರಿಸಿದರು.

ಅಪರಾಧ ಮತ್ತು ಸಂಚಾರ ಡಿಸಿಪಿ ಪ್ರವೀಣ್ ನಾಯಕ್, ಡಾ.ಸಂತೋಷಿ, ಎಸಿಪಿ ಚಂದ್ರಶೇಖರ, ಪಿಐಗಳಾದ ಸಂತೋಷ ತಟ್ಟೆಪಲ್ಲಿ, ಶಿವಾನಂದ ವಾಲೀಕಾರ, ಶಕೀಲ್ ಅಹಮದ್, ಸೋಮಲಿಂಗ ಕಿರದಳ್ಳಿ, ದಿಲೀಪ್ ಸಾಗರ, ಪ್ರಮೋದ್ ನಾಯಕ್, ಸುಶೀಲ ಕುಮಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

‘778 ಕೆ.ಜಿ ಡ್ರಗ್ಸ್ ವಶ’

‘ಯುವಕರು ತೆಗೆದುಕೊಳ್ಳುವ ‍ಪದಾರ್ಥಗಳ ಬಗ್ಗೆ ಮನೆಯಲ್ಲಿನ ಹಿರಿಯರು ಅವರ ಮೇಲೆ ನಿಗಾ ಇರಿಸಬೇಕು’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ. ಹೇಳಿದರು. ‘ಹೊರ ರಾಜ್ಯಗಳಿಂದ ಬಂದ ಸುಮಾರು 778 ಕೆ.ಜಿ ಶೆಡ್ಯೂಲ್ ಎಚ್ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ನಶೆ ಮುಕ್ತ ಕಲಬುರಗಿ ಮಾಡುವವರೆಗೆ ಪೊಲೀಸ್ ಇಲಾಖೆಯು ತನ್ನ ಕಾರ್ಯಾಚರಣೆಯನ್ನು ಮುಂದುವರಿಸಲಿದೆ. ಇದಕ್ಕೆ ಸಾರ್ವಜನಿಕರು ಸಹ ಸಹಕಾರ ನೀಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.