ADVERTISEMENT

ಕಲಬುರಗಿ ‌| ಮಳೆ ಕೊರತೆ, ಕೆರೆಗಳಲ್ಲಿ ನೀರಿನ ಮಟ್ಟ ಕುಸಿತ: ಆತಂಕ

ಓಂಕಾರ ಬಿರಾದಾರ
Published 9 ಅಕ್ಟೋಬರ್ 2023, 6:29 IST
Last Updated 9 ಅಕ್ಟೋಬರ್ 2023, 6:29 IST
ಜೇವರ್ಗಿ ತಾಲ್ಲೂಕಿನ ಅವರಾದ ಕೆರೆಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ
ಜೇವರ್ಗಿ ತಾಲ್ಲೂಕಿನ ಅವರಾದ ಕೆರೆಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ   

ಕಲಬುರಗಿ: ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಹಂಗಾಮಿನಲ್ಲಿ ಸಮರ್ಪಕ ಮಳೆಯಾಗದ ಕಾರಣ ಜಿಲ್ಲೆಯ ಕೆರೆಗಳಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣ ಭಾರೀ ಕಡಿಮೆಯಾಗಿದೆ.

ಅಫಜಲಪುರ, ಶಹಾಬಾದ್, ಕಮಲಾಪುರ, ಆಳಂದ, ಜೇವರ್ಗಿ, ಯಡ್ರಾಮಿ ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿಲ್ಲ. ಹೀಗಾಗಿ ಇಲ್ಲಿನ ಕೆರೆಗಳಿಗೆ ಹರಿದು ಬರುವ ನೀರಿನ ಪ್ರಮಾಣವೂ ಕಡಿಮೆಯಾಗಿದೆ.

ಕಲಬುರಗಿ ನಗರದ ಅಪ್ಪನ ಕೆರೆ, ದುಬೈ ಕಾಲೊನಿಯಲ್ಲಿರುವ ಕೆರೆಗಳಲ್ಲಿ ಕಳೆದ ಬಾರಿಯಷ್ಟು ನೀರು ಈ ಬಾರಿ ಸಂಗ್ರಹವಾಗಿಲ್ಲ. ಇದರಿಂದ ಬೇಸಿಗೆ ವೇಳೆಗೆ ನಗರದಲ್ಲಿಯೂ ಸಹ ಅಂತರ್ಜಲ ಮಟ್ಟ ಕುಸಿತದಿಂದ ಬೊರವೆಲ್‌ಗಳ ನೀರಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ADVERTISEMENT

ದೊಡ್ಡ ಪ್ರಮಾಣದ ಕೆರೆಗಳಲ್ಲಿ ಸಂಗ್ರಹ ಸಾಮರ್ಥ್ಯವಿದ್ದರೂ ಮಳೆಯಾಗದ ಕಾರಣ ನೀರಿನ ಮಟ್ಟ ಕುಸಿತ ಕಂಡಿದೆ. ಕೆಲ ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆಯಾದರೂ ಬೆಳೆಗಳಿಗೆ ಮಾತ್ರ ಅನುಕೂಲವಾಗಿದೆ. ಕೆರೆ ಕಟ್ಟೆಗಳಿಗೆ ನೀರು ಹರಿದು ಬಂದಿಲ್ಲ. ಇದರಿಂದ ಕೆರೆ ಹಾಗೂ ಹಳ್ಳಗಳಿಗೆ ನೀರು ಹರಿದು ಸಂಗ್ರಹವಾಗಿಲ್ಲ.

ಕೆರೆಗಳ ಜಲಮೂಲವನ್ನು ನಂಬಿರುವ ಗ್ರಾಮಗಳು ಹಾಗೂ ಅಚ್ಚುಕಟ್ಟು ಪ್ರದೇಶದಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗಿ ಕೃಷಿಕರ ಮೇಲೆ ಪರಿಣಾಮ ಬೀರಿದೆ. ಈ ಮೊದಲು ಬಾವಿಗೆ ಮೋಟಾರ್‌ ಅಳವಡಿಸಿ ಜಮೀನುಗಳಿಗೆ ನೀರುಣಿಸಲಾಗುತ್ತಿತ್ತು. ಈಗ ಅಂತರ್ಜಲ ಮಟ್ಟ ಕುಸಿದಿದ್ದರಿಂದ ಬಾವಿಗಳಲ್ಲಿ ಸಹ ನೀರಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಕೃಷಿ ಉತ್ಪಾದನೆಯಲ್ಲಿ ಕೊರತೆ ಕಂಡು ಬರುವ ಸಾಧ್ಯತೆ ಇದೆ ಎನ್ನುತ್ತಾರೆ ರೈತ ಶರಣಪ್ಪ.

ಮಳೆಯ ನಿರೀಕ್ಷೆಯಲ್ಲಿ ರೈತರು ನೀರಾವರಿ ಆಶ್ರಿತ ಬೆಳೆಗಳನ್ನು ಬೆಳೆಯಲು ಮುಂದಾಗಿ ಬಿತ್ತನೆ ಮಾಡಿದ್ದಾರೆ. ಆದರೆ, ಅಂತರ್ಜಲ ಮಟ್ಟ ಕಡಿಮೆಯಾಗಿ ಮಡ್ಡಿ ಮಿಶ್ರಿತ ಜಮೀನಿನಲ್ಲಿ ಬಿತ್ತನೆ ಮಾಡಲಾದ ಹತ್ತಿ, ತೊಗರಿ ಇತರೆ ಬೆಳೆಗಳು ಈಗಲೇ ತೇವಾಂಶ ಕೊರತೆಯಿಂದ ನೆಲ ಕಚ್ಚುತ್ತಿವೆ.

ಬಹುತೇಕ ಕೆರೆಗಳಲ್ಲಿ ನೀರಿಲ್ಲ: ಜಿಲ್ಲಾ ಪಂಚಾಯಿತಿ, ಸಣ್ಣ ನೀರಾವರಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆರೆಗಳಿವೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 167 ಕೆರೆಗಳು, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 32, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 500ಕ್ಕೂ ಹೆಚ್ಚು ಜಿನುಗು ಕೆರೆಗಳು ಇವೆ.

ಸೇಡಂ, ಚಿಂಚೋಳಿ, ಕಾಳಗಿ, ಚಿತ್ತಾಪುರ ತಾಲ್ಲೂಕಿನ ಕೆಲ ಭಾಗದಲ್ಲಿ ಮಳೆಯಾಗಿ ಕೆರೆಗಳಲ್ಲಿ ಒಂದು ಹಂತದಲ್ಲಿ ನೀರು ಸಂಗ್ರಹವಿದೆ. ಆದರೆ ಅಫಜಲಪುರ, ಆಳಂದ, ಜೇವರ್ಗಿ, ಶಹಾಬಾದ್‌ನಲ್ಲಿ ಶೇ 50ಕ್ಕೂ ಹೆಚ್ಚು ಕೆರೆಗಳಲ್ಲಿ ಶೇ 30ಕ್ಕಿಂತ ಕಡಿಮೆ ನೀರು ಇದೆ.

ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ನಂದರಗಾ ಕೆರೆಯಲ್ಲಿ ಶೇ 20, ಆಳಂದ ತಾಲ್ಲೂಕಿನ ಕವಲಗಾ ಕೆರೆಯಲ್ಲಿ ಶೇ 10, ಲಿಂಗದಳ್ಳಿ ಶೇ 30, ಮಲ್ಲಯ್ಯನ ತಾಂಡಾ ಶೇ 45, ಗೋಗಿ ತಾಂಡಾ ಶೇ 50. ಸಣ್ಣ ನೀರಾವರಿ ಇಲಾಖೆಯ ಕೆರೆಗಳಲ್ಲಿ ಅಫಜಲಪುರ ತಾಲ್ಲೂಕಿನ 12 ಕೆರೆಗಳು ಇವೆ. 8 ಕೆರೆಗಳಲ್ಲಿ 30ರಷ್ಟು ಮಾತ್ರ ನೀರಿದೆ.

ಆಳಂದ ತಾಲ್ಲೂಕಿನಲ್ಲಿ ಇರುವ 35 ಕೆರೆಗಳಲ್ಲಿ, 28 ಕೆರೆಗಳಲ್ಲಿ ಶೇ 30 ರಷ್ಟು ನೀರಿದೆ. 7 ಕೆರೆಯಲ್ಲಿ ಶೇ 31ರಿಂದ ಶೇ 50ರಷ್ಟು ನೀರಿದೆ. ಕಲಬುರಗಿ ತಾಲ್ಲೂಕಿನಲ್ಲಿ 12 ಕೆರೆಗಳ ಪೈಕಿ 3ರಲ್ಲಿ ಶೇ 30, 4 ಕೆರೆಗಳಲ್ಲಿ ಶೇ 31 ರಿಂದ ಶೇ 50 ರಷ್ಟು ನೀರಿದೆ. ಮೂರು ಕೆರೆಗಳು ಭರ್ತಿಯಾಗಿವೆ.

ಅಫಜಲಪುರ ತಾಲ್ಲೂಕಿನ ಕರಜಗಿ, ಮಾಶಾಳ ಭಾಗದಲ್ಲಿ ಕೆರೆ ಇದ್ದರೂ ಸಹ ನೀರು ಮಾತ್ರ ಇಲ್ಲ. ಆದರೆ ಕೆರೆಯ ಅಂತರ್ಜಲದ ಮೇಲೆ ಅವಲಂಬಿತವಾದ ಬೊರವೆಲ್‌ಗಳು ಈಗಲೇ ನಿಂತು ಹೋಗಿವೆ. ಇದರಿಂದ ಕುಡಿಯುವ ನೀರಿನ ಸಮಸ್ಯೆಯೂ ಉದ್ಭವಿಸಿದೆ. ಬೇಸಿಗೆಯಲ್ಲಿ ಹೇಗೆ ಎಂಬ ಚಿಂತೆ ಕಾಡುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.

ಯಡ್ರಾಮಿ ತಾಲ್ಲೂಕಿನ ಇಜೇರಿ ಗ್ರಾಮದಲ್ಲಿ ದೊಡ್ಡ ಪ್ರಮಾಣದ ಕೆರೆ ಇದೆ. ಮಳೆ ಬರದೆ ಇರುವುದಿಂದ ಶೇ 10 ರಷ್ಟು ಮಾತ್ರ ನೀರು ಉಳಿದಿದೆ. ಇನ್ನೂ ತಾಲ್ಲೂಕಿನ ಸಣ್ಣ-ಪುಟ್ಟ ಕೆರೆಗಳಲ್ಲಿ ನೀರೇ ಇಲ್ಲ. ಇದು ರೈತರಿಗೆ ಸಂಕಷ್ಟ ತಂದೊಡ್ಡಿದೆ. ಮುಂದಿನ ದಿನಗಳಲ್ಲಿ ಜನ-ಜಾನುವಾರುಗಳಿಗೆ ನೀರು ಸಿಗುವುದು ಕಷ್ಟವಿದೆ ಎನ್ನುತ್ತಾರೆ ರೈತರು.

ಜೇವರ್ಗಿ ತಾಲ್ಲೂಕಿನ ಹಾಲಗಡ್ಲಾ, ಹೆಗ್ಗನಾಳ, ಸೈದಾಪುರ, ಯಡ್ರಾಮಿ, ಆಂದೋಲಾ, ಅವರಾದ, ಬುಟ್ನಾಳ, ತಾಲ್ಲೂಕಿನಲ್ಲಿ 7 ಕೆರೆಗಳಿವೆ. ಆದರೆ 3 ಮಾತ್ರ ತುಂಬಿವೆ. ನಾಲ್ಕು ಕೆರೆಗಳು ಖಾಲಿ ಇವೆ. ಪ್ರಸಕ್ತ ವರ್ಷದ ತಾಲ್ಲೂಕಿನಲ್ಲಿ ಸಮರ್ಪಕವಾಗಿ ಮಳೆಯಾಗದ ಕಾರಣ ಮೀನುಗಾರಿಕೆ ಸಾಧ್ಯವಾಗುತ್ತಿಲ್ಲ ಎಂದು ಗ್ರೇಡ್‌–2 ತಹಶೀಲ್ದಾರ್ ಪ್ರಸನ್ನಕುಮಾರ ಮೋಗೆಕರ ತಿಳಿಸಿದರು.

ಪೂರಕ ಮಾಹಿತಿ: ಶಿವಾನಂದ ಹಸರಗುಂಡಗಿ, ವೆಂಕಟೇಶ ಹರವಾಳ, ರಘುವೀರಸಿಂಗ್ ಠಾಕೂರ್‌, ಮಂಜುನಾಥ್ ದೊಡ್ಡಮನಿ.

ಆಳಂದ ತಾಲ್ಲೂಕಿನ ಸಾಲೇಗಾಂವ ಕೆರೆ
ಶಹಾಬಾದ್‌ ನಗರ ಸಮೀಪದ ಹಳೆ ಶಹಾಬಾದ್‌ ಸಮೀಪದಲ್ಲಿರುವ ಕುನ್ನಿ ಕೆರೆ ನೀರು ಸಂಗ್ರಹ ಕಡಿಮೆಯಾಗಿರುವುದು
ಅಫಜಲಪುರ ತಾಲ್ಲೂಕಿನ ಮಾಶಾಳ ಗ್ರಾಮದಲ್ಲಿ ನರೇಗಾ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಿರುವ ಕೆರೆ ಮಳೆ ಇಲ್ಲದೆ ಬತ್ತಿರುವುದು
ತಾಲ್ಲೂಕಿನಲ್ಲಿ ನಿರ್ಮಾಣ ಮಾಡಿರುವ ಕೆರೆಗಳಲ್ಲಿ ಜನರು ಒತ್ತುವರಿ ಮಾಡುತ್ತಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯತಿ ಮತ್ತು ಸಣ್ಣ ನೀರಾವರಿ ಇಲಾಖೆ ಕ್ರಮ ಕೈಗೊಂಡು ಮತ್ತು ಕೆರೆಗಳ ಸುತ್ತ ತಂತಿ ಬೇಲಿ ಹಾಕಬೇಕು. ಶ್ರೀಮಂತ ಬಿರಾದಾರ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ
ಅಂತರ್ಜಲ ಮಟ್ಟ ಇರುವ ಕಡೆ ನೀರಿನ ಸೆಲೆಗಳನ್ನು ಗುರುತಿಸಿ ಹಳ್ಳಿಗಳಲ್ಲಿ ಬೋರವೆಲ್‌ ಹಾಕಬೇಕು. ರೈತರ ಬೆಳೆ ಅನುಕೂಲವಾಗುವಂತೆ ಕೃಷಿ ಹೊಂಡದ ಮಾದರಿಯಲ್ಲಿ ನೀರು ಸಂಗ್ರಹ ಟ್ಯಾಂಕ್‌ ನಿರ್ಮಾಣ ಮಾಡಬೇಕು.
ಮೌಲಾ ಮುಲ್ಲಾ ರೈತ ಹೋರಾಟಗಾರ
ಜಿಲ್ಲೆಯ ಸುಮಾರು 80ಕ್ಕೂ ಹೆಚ್ಚು ಕೆರೆಗಳಲ್ಲಿ ಮೀನು ಮರಿಗಳ ಬಿತ್ತನೆಗೆ ಅವಕಾಶ ಇದ್ದು ಅಲ್ಲಿ ಬಿತ್ತನೆ ಮಾಡಲಾಗಿದೆ. ನೀರು ಕಡಿಮೆಯಾಗಿದ್ದರೂ ಮೀನುಗಾರಿಕೆಗೆ ಯಾವುದೇ ತೊಂದರೆಯಾಗಿಲ್ಲ.
ಶಂಕರ್‌ ಗೊಂದಳಿ ಮೀನುಗಾರಿಕೆ ಉಪ ನಿರ್ದೇಶಕ
ಕುನ್ನಿಕೆರೆ ಅಭಿವೃದ್ಧಿಗೊಂಡರೆ ಸುತ್ತಮುತ್ತಲಿನ ಹಳೆಶಹಾಬಾದ್‌ ಹಾಗೂ ತರನಳ್ಳಿ ಗ್ರಾಮದ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗಿ ಕೊಳವೆ ಬಾವಿ ಹಾಗೂ ಬಾವಿಗಳಲ್ಲಿ ನೀರು ಕಾಣಬಹುದು
ಶರಣಗೌಡ ಪಾಟೀಲ ಕಸಾಪ ಕಲಬುರಗಿ ಗ್ರಾಮೀಣ ಮಾಜಿ ಅಧ್ಯಕ್ಷ
‘ನರೇಗಾದಡಿ ಕೆರೆಗಳ ಹೂಳೆತ್ತಲು ಕ್ರಮ’
‘ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಕೊಳವೆ ಬಾವಿಗಳಿಗೆ ಸಿಗುವ ನೀರಿನ ಮಟ್ಟ ಕಡಿಮೆಯಾಗಿದೆ. ಮುಂದೆ ನೀರಿನ ಸಮಸ್ಯೆ ಎದುರಾಗಬಹುದು ಎಂಬ ದೃಷ್ಠಿಯಿಂದ ಈಗಾಗಲೇ 140 ಕ್ಕೂ ಹೆಚ್ಚು ಹಳ್ಳಿಗಳ ಪಟ್ಟಿ ಮಾಡಿಕೊಳ್ಳಲಾಗಿದೆ. ಸದ್ಯ ಯಾವುದೇ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇಲ್ಲ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್‌ ಸಿಂಗ್‌ ಮೀನಾ ‘ಪ್ರಜಾವಾಣಿ’ಗೆ ತಿಳಿಸಿದರು. ‘ಬರಗಾಲ ಕಾಮಗಾರಿ ಹಾಗೂ ನರೇಗಾ ಅಡಿಯಲ್ಲಿ ಜಿಲ್ಲಾ ಪಂಚಾಯಿತಿಯಿಂದ ತಾಲ್ಲೂಕುವಾರು ನರೇಗಾ ಕಾಮಗಾರಿ ಕೆಲಸಕ್ಕೆ ಅನುಮೋದನೆ ನೀಡಲು ಮಾಹಿತಿ ಕೇಳಲಾಗಿದೆ. ತಾಲ್ಲೂಕುವಾರು ಕೆಲಸದ ಬೇಡಿಕೆ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಬಳಿಕ ಹೆಚ್ಚಿನ ಪ್ರಮಾಣದಲ್ಲಿ ನರೇಗಾದಡಿ ಹೂಳು ಎತ್ತುವುದು ಸೇರಿ ವಿವಿಧ ಕಾಮಗಾರಿ ಪ್ರಾರಂಭ ಮಾಡಲಾಗುವುದು’ ಎಂದು ಹೇಳಿದರು.
ಪ್ರತಿ ಗ್ರಾಮಗಳಲ್ಲಿ ಕೆರೆ ಇದ್ದರೂ ನೀರಿಲ್ಲ...
ಅಫಜಲಪುರ: ತಾಲ್ಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆ ಮತ್ತು ನರೇಗಾ ಯೋಜನೆ ಅಡಿಯಲ್ಲಿ ಪ್ರತಿ ಗ್ರಾಮದಲ್ಲಿಯೂ ಕೆರೆಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ವರ್ಷ ಮುಂಗಾರು ಹಿಂಗಾರು ಮಳೆ ಬರದ ಕಾರಣ ಕೆರೆಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ. ಇದರಿಂದ ಬಾವಿಗಳು ಮತ್ತು ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಪಾತಾಳ ಕಂಡಿದ್ದು ಈಗಲೇ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ತೊಂದರೆ ಉಂಟಾಗಿದೆ. ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಾಂತಪ್ಪ ಅವರು ಮಾಹಿತಿ ನೀಡಿ ತಾಲ್ಲೂಕಿನಲ್ಲಿ ಸಣ್ಣ ನೀರಾವರಿ ವ್ಯಾಪ್ತಿಗೆ ಒಳಪಡುವ 12 ಕೆರೆಗಳಿವೆ. ಸದ್ಯಕ್ಕೆ ಗೊಬ್ಬುರ (ಕೆ) ಅಫಜಲಪುರ ಬಿದನೂರು ಭೈರಾಮಡಗಿ ಅರ್ಜುನಗಿ ಕೆರೆಗಳಲ್ಲಿ ಅಲ್ಪ ಸ್ವಲ್ಪ ನೀರು ಸಂಗ್ರಹವಿದ್ದು ಉಳಿದ ಕೆರೆಗಳು ಖಾಲಿ ಇವೆ. ಪ್ರಸ್ತುತ ವರ್ಷ ಮಳೆ ಬರದ ಕಾರಣ ಕೆರೆಗಳಿಗೆ ನೀರು ಬಂದಿಲ್ಲ ಎಂದರು. ‘ನರೇಗಾ ಯೋಜನೆ ಹೊರತುಪಡಿಸಿ ಇನ್ನಾವುದೇ ಯೋಜನೆ ಅಡಿಯಲ್ಲಿ ಕೆರೆಗಳನ್ನು ನಿರ್ಮಾಣ ಮಾಡಲು ಅನುದಾನ ಇರುವುದಿಲ್ಲ. ಕಾಮಗಾರಿಯನ್ನು ತೆಗೆದುಕೊಳ್ಳಲು ಅವಕಾಶ ಇಲ್ಲ’ ಎಂದರು. ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ರಮೇಶ್ ಪಾಟೀಲ ಮಾಹಿತಿ ನೀಡಿ ‘ನರೇಗಾ ಯೋಜನೆಯಲ್ಲಿ ಕೆರೆಗಳ ನಿರ್ಮಾಣಕ್ಕೆ ಬೇಕಾದಷ್ಟು ಅನುದಾನವನ್ನು ಬಳಸಿಕೊಳ್ಳಬಹುದಾಗಿದೆ. ಪ್ರತಿಯೊಂದು ಗ್ರಾಮ ಪಂಚಾಯತಿ ತಮ್ಮ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಕೆರೆಗಳ ನಿರ್ಮಾಣ ಕುರಿತು ಕಡ್ಡಾಯವಾಗಿ ಅನುದಾನ ನಿಗದಿ ಮಾಡಿದರೆ ಗ್ರಾಮದಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಹಾಗೂ ಕೃಷಿಗೂ ಅನುಕೂಲವಾಗಲಿದೆ’ ಎಂದರು.
ಅವಸಾನದತ್ತ ಕುನ್ನಿಕೆರೆ
ಶಹಾಬಾದ್‌: ನಗರದ ಕುನ್ನಿಕೆರೆ ಕಳಪೆ ಮಟ್ಟದ ಕಾಮಗಾರಿಯಿಂದ ವರ್ಷದಿಂದ ವರ್ಷಕ್ಕೆ ಅವಸಾನದತ್ತ ಸಾಗುತ್ತಿದೆ. ಸುಮಾರು 2.60 ಕಿ.ಮೀ. ಚದರ್‌ ವಿಸ್ತೀರ್ಣ ಹೊಂದಿರುವ ಈ ಕೆರೆಯಲ್ಲಿ ಸರಿಯಾದ ಪ್ರಮಾಣದಲ್ಲಿ ನೀರಿನ ಸಂಗ್ರಹಣೆ ಇಲ್ಲ. ಮಳೆಗಾಲದಲ್ಲಿ ಮಾತ್ರ ಹೊಂಡದಲ್ಲಿ ನೀರು ನಿಲ್ಲುವಂತೆ ನಿಲ್ಲುತ್ತದೆ. ಪ್ರತಿ ಬಾರಿ ಹೂಳೆತ್ತುವ ಯೋಜನೆ ಹಾಕಿಕೊಂಡಾಗ ಕೇವಲ ಹೆಸರಿಗೆ ಮಾತ್ರ ಕೆಲಸ ಮಾಡಿ ಬಿಲ್‌ ಎತ್ತಿ ಹಾಕಲಾಗುತ್ತಿದೆ ಎನ್ನುವ ಆರೋಪವಿದೆ. ಈಚೆಗೆ ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಸುಮಾರು ₹75 ಲಕ್ಷ ಅನುದಾನದಲ್ಲಿ ಕೆರೆ ದುರಸ್ತಿ ಹಾಗೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ ಸರಿಯಾದ ಕಾಮಗಾರಿಯಿಲ್ಲದೇ ಹಾಗೂ ಸಮರ್ಪಕ ನಿರ್ವಹಣೆಯಿಲ್ಲದೆ ಕೆಲಸ ಸ್ಥಗಿತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.