ADVERTISEMENT

ಭೂಕಂಪನ ನಿರ್ಲಕ್ಷ್ಯ: ಹೆದ್ದಾರಿ ತಡೆದು ಆಕ್ರೋಶ

ನಾಲ್ಕು ತಾಸು ಸಂಚಾರ ಬಂದ್‌, ಗ್ರಾಮಕ್ಕೆ ಬರುವಂತೆ ಜಿಲ್ಲಾಧಿಕಾರಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 3:45 IST
Last Updated 12 ಅಕ್ಟೋಬರ್ 2021, 3:45 IST
ಚಿಂಚೋಳಿಯ ಹೋಡೇಬೀರನಹಳ್ಳಿ ಕ್ರಾಸ್‌ನಲ್ಲಿ ಭೂಕಂಪನ ಅನುಭವವಾದ ಹಳ್ಳಿಗಳ ನಾಗರಿಕ ಹೋರಾಟ ಸಮಿತಿ ವತಿಯಿಂದ ನಡೆದ ರಸ್ತೆತಡೆ ಪ್ರತಿಭಟನೆಯಲ್ಲಿ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿದರು. ಸುಭಾಷ ರಾಠೋಡ, ಬಸವರಾಜ ಮಲಿ, ಅನಿಲಕುಮಾರ ಜಮಾದಾರ, ಮಂಗಳಮೂರ್ತಿ, ವೀರೇಂದ್ರ ಬಳಿ, ಪ್ರಕಾಶ ರಂಗನೂರ, ರೇವಣಸಿದ್ದಪ್ಪ ಅಣಕಲ್ ಇದ್ದರು
ಚಿಂಚೋಳಿಯ ಹೋಡೇಬೀರನಹಳ್ಳಿ ಕ್ರಾಸ್‌ನಲ್ಲಿ ಭೂಕಂಪನ ಅನುಭವವಾದ ಹಳ್ಳಿಗಳ ನಾಗರಿಕ ಹೋರಾಟ ಸಮಿತಿ ವತಿಯಿಂದ ನಡೆದ ರಸ್ತೆತಡೆ ಪ್ರತಿಭಟನೆಯಲ್ಲಿ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿದರು. ಸುಭಾಷ ರಾಠೋಡ, ಬಸವರಾಜ ಮಲಿ, ಅನಿಲಕುಮಾರ ಜಮಾದಾರ, ಮಂಗಳಮೂರ್ತಿ, ವೀರೇಂದ್ರ ಬಳಿ, ಪ್ರಕಾಶ ರಂಗನೂರ, ರೇವಣಸಿದ್ದಪ್ಪ ಅಣಕಲ್ ಇದ್ದರು   

ಚಿಂಚೋಳಿ: ಚಿಂಚೋಳಿ ಹಾಗೂ ಕಾಳಗಿ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಪದೇಪದೇ ಭೂಕಂಪನ ಸಂಭವಿಸುತ್ತಿದ್ದರೂ ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಸೋಮವಾರ, ಉಮರ್ಗಾ– ಸುಲೇಪೇಟ ರಾಜ್ಯ ಹೆದ್ದಾರಿಯಲ್ಲಿ ನಾಲ್ಕು ತಾಸು ಧರಣಿ ನಡೆಸಿದರು. ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಗಡಿಕೇಶ್ವಾರ, ರುದ್ನೂರು, ರಾಯಕೋಡ, ಭೂತ್ಪೂರ, ಕುಪನೂರ, ಸುಲೇಪೇಟ, ಹೊಡೆಬೀರನಹಳ್ಳಿ, ಮರನಾಳ್, ಭಂಟನಳ್ಳಿ, ಬೆನಕನಳ್ಳಿ, ಕೊರವಿ, ಕೊರವಿ ತಾಂಡಾ, ಕುಡಳ್ಳಿ, ನಾವದಗಿ, ಹೊಸಳ್ಳಿ (ಎಚ್), ಹಲಚೇರಾ, ತೇಗಲತಿಪ್ಪಿ ಗ್ರಾಮಗಳಲ್ಲಿ ಒಂದು ವಾರದಲ್ಲಿ ಮೂರು ಬಾರಿ ಭೂಕಂಪನ ಅನುಭವಕ್ಕೆ ಬಂದಿದೆ. ಭೂಗರ್ಭ ಶಾಸ್ತ್ರಜ್ಞರು ಇದನ್ನು ಖಚಿತಪಡಿಸಿದ ಮೇಲೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ. ತಕ್ಷಣ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಬೇಕು ಎಂದೂ ಆಗ್ರಹಿಸಿದರು.

ನೇತೃತ್ವ ವಹಿಸಿದ್ದ ಕಾಂಗ್ರೆಸ್‌ ಮುಖಂಡ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ‘ಸರ್ಕಾರಕ್ಕೆ ಜನರ ಜೀವದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಕಾಳಜಿ ಇದ್ದಿದ್ದರೇ ಭೂಕಂಪನ ಪೀಡಿತ ಗ್ರಾಮಗಳ ನಿವಾಸಿಗರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತಿತ್ತು ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಅಧಿಕಾರಿಗಳು ತಮ್ಮ ಕೆಲಸ ಮಾಡಲು ವಿಫಲವಾದರೆ ಜನಪ್ರತಿನಿಧಿಗಳು ಅವರ ಮೇಲೆ ಒತ್ತಡ ಹೇರಬೇಕು. ಆದರೆ ಜನನಾಯಕರು ಸಾರ್ವಜನಿಕರ ಬಗ್ಗೆ ಕಾಳಜಿ ವಹಿಸದಿದ್ದರೇ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ’ ಎಂದರು.

‘ಜಿಲ್ಲಾಧಿಕಾರಿಗಳು ಹಾಗೂಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಭೂಕಂಪನ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಇಲ್ಲದಿದ್ದರೇ ನಗರದಲ್ಲಿ ಜಿಲ್ಲಾಧಿಕಾರಿಗಳಿಗೆ ಘೇರಾವ್ ಹಾಕಲಾಗುವುದು’ ಎಂದು ಎಚ್ಚರಿಸಿದರು.

ಮುಖಂಡ ಸುಭಾಷ ರಾಠೋಡ್ ಮಾತನಾಡಿ, ‘ನಿರಂತರ ಭೂಕಂಪನದಿಂದ ಸಂಕಷ್ಟಕ್ಕೀಡಾದ ಜನರ ಅಹವಾಲು ಆಲಿಸುವುದು ಸರ್ಕಾರದ ಜವಾಬ್ದಾರಿ. ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದೆ ಇದ್ದಾಗ ಹೋರಾಟ ಮಾಡುವುದು ನಮ್ಮ ಮುಂದಿನ ದಾರಿ. ಹೀಗಾಗಿ ನೀವು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲ ಇದೆ’ ಎಂದರು.

ರವಿರಾಜ ಕೊರವಿ, ಬಸವರಾಜ ಮಲಿ, ಭೀಮರಾವ್ ಟಿಟಿ, ನಾಗರೀಕ ಹೋರಾಟ ಸಮಿತಿಯ ರೇವಣಸಿದ್ದಪ್ಪ ಅಣಕಲ್, ಪ್ರಕಾಶ ರಂಗನೂರ, ಶರಣಪ್ಪ ಕುಂಬಾರ, ಮಂಗಳಮೂರ್ತಿ, ಸಂತೋಷಕುಮಾರ ಬಳಿ, ಶರಣು ಕೋರವಾರ, ನಾಗರಾಜ ಚಕ್ರವರ್ತಿ, ಮಹಾದೇವಪ್ಪ ಮುಕರಂಬಿ, ಮಾಳಪ್ಪ ಅಪ್ಪೋಜಿ, ಮತ್ತಿತರರು ಮಾತನಾಡಿದರು.

ಸುರೇಶ ಪಾಟೀಲ ರಾಯಕೋಡ, ಹಣಮಂತರಾವ್ ಪಾಟೀಲ ತೇಗಲತಿಪ್ಪಿ, ಜಗನ್ನಾಥ ಪೂಜಾರಿ, ವಿಶ್ವನಾಥ ಪಾಟೀಲ, ವೀರೇಂದ್ರ ಬಳಿ, ಜಗದೇವಯ್ಯ ಸ್ವಾಮಿ, ಧನಶೆಟ್ಟಿ ರೆಮ್ಮಣಿ, ಮಲ್ಲು ರಾಯಪ್ಪಗೌಡ, ಬಸವರಾಜ ವಿ.ಸಜ್ಜನ್, ಮಸ್ತಾನ ಅಲಿ ಪಟ್ಟೇದಾರ, ಪ್ರಭುಲಿಂಗ ಮಂತಾ, ಉದಯಕುಮಾರ ಕಲ್ಯಾಣಶೆಟ್ಟಿ, ರಾಜಶೇಖರ ರೆಮ್ಮಣಿ, ಅಶೋಕ ಗುತ್ತೇದಾರ, ವೀರೇಶ ರೆಮ್ಮಣಿ, ಮೇಘರಾಜ ರಾಠೋಡ್,ಸಿದ್ದಲಿಂಗಪ್ಪ ಹಲಚೇರಾ, ಬಸವರಾಜ ಮಾಲಿ ಪಾಟೀಲ, ಕವಿರಾಜ, ಶರಣಪ್ಪ ಕೋರವಾರ, ಮಾಳಪ್ಪ ಅಪ್ಪೋಜಿ, ಅರುಣಕುಮಾರ ರಂಗನೂರ ಮೊದಲಾದವರು ಇದ್ದರು.

ಪ್ರಮುಖ ಬೇಡಿಕೆಗಳು

- ಪ್ರತಿ ಕುಟುಂಬಗಳಿಗೆ ತಕ್ಷಣ ತಾಡಪತ್ರಿ, ಹಾಸಿಗೆ, ರಗ್ಗು ವಿತರಿಸಬೇಕು.

- ಗ್ರಾಮಸ್ಥರ ರಕ್ಷಣೆಗೆ ಜಿಂಕ್ ಶೀಟ್‌ನಿಂದತಾತ್ಕಾಲಿಕ ಶೆಡ್ ನಿರ್ಮಿಸಬೇಕು.

- ಭೂಕಂಪದ ಮಾಪನದ ಕೇಂದ್ರ ತೆರೆಯಬೇಕು. ನಿರಂತರ ವಿದ್ಯುತ್ ಪೂರೈಸಲು ಕ್ರಮ‌ಕೈಗೊಳ್ಳಬೇಕು.

- ಗ್ರಾಮದಲ್ಲಿ ಪೊಲೀಸ್ ಗಸ್ತು ನಿಯೋಜಿಸಿ, ಆರೋಗ್ಯಾಧಿಕಾರಿಗಳು ಕೇಂದ್ರಸ್ಥಾನದಲ್ಲಿ ನಿಯೋಜಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.