ಕಲಬುರಗಿ: ಕಳೆದ ಐದು ದಿನಗಳಿಂದ ಚಿಂಚೋಳಿ ಹಾಗೂ ಕಾಳಗಿ ತಾಲ್ಲೂಕಿನ ಕೆಲವೇ ಗ್ರಾಮಗಳಲ್ಲಿ ಅನುಭವಕ್ಕೆ ಬಂದಿದ್ದ ಭೂಕಂಪನವು, ಸೋಮವಾರ ಜಿಲ್ಲೆಯ ಬಹುಪಾಲು ಕಡೆ ಸಂಭವಿಸಿದೆ. ಕೇವಲ ಐದು ದಿನಗಳಲ್ಲಿ ಐದು ಬಾರಿ ಭೂಮಿ ತೂಗಿದ್ದು, ಜನರನ್ನು ದಿಗಿಲುಗೊಳಿಸಿದೆ. ಇದರಿಂದಾಗಿ ಹಳ್ಳಿಗಳ ಜನ ಮನೆಯ ಹೊರಗಿನ ಅಂಗಳದಲ್ಲೇ ನಿದ್ರಿಸುವಂತಾಗಿದೆ.
ಸೋಮವಾರ ಒಂದೇ ದಿನ ಎರಡು ಬಾರಿ ಭೂಮಿ ಕಂಪಿಸಿದೆ. ಬೆಳಿಗ್ಗೆ 6.31ಕ್ಕೆ ತೆಲಂಗಾಣದ ಮನಿಯಾರಪಲ್ಲಿ ಎಂಬಲ್ಲಿ ರಿಕ್ಟರ್ ಮಾಪನದಲ್ಲಿ 2.5 ರಷ್ಟು ಭೂಕಂಪಿಸಿತ್ತು. ಆದರೆ, ರಾತ್ರಿ 9.55ರಿಂದ 56ರವರೆಗಿನ ಅವಧಿಯಲ್ಲಿ 4.0 ರಿಕ್ಟರ್‌ನಷ್ಟು ಕಂಪನವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತುಗಳ ಉಸ್ತುವಾರಿ ಕೋಶದ ಶರಣಶಿರಸಗಿ ಕೇಂದ್ರವು ಮಾಹಿತಿ ನೀಡಿದೆ.
ಕಂಪನದ ತೀವ್ರತೆಗೆ ಗಡಿಕೇಶ್ವಾರದಲ್ಲಿ ಐದು, ಕಾಳಗಿ ತಾಲ್ಲೂಕಿನ ಒಂದು ಗ್ರಾಮದಲ್ಲಿ ಒಂದು ಮನೆಯ ಗೋಡೆ ಕುಸಿದಿದ್ದಾಗಿ ಮನೆ ಮಾಲೀಕರು ಮಾಹಿತಿ ನೀಡಿದ್ದಾರೆ.
‘ಈ ಹಿಂದೆ ಸಂಭವಿಸಿದ ಎಲ್ಲ ಕಂಪನಗಳಿಗಿಂತಲೂ ಸೋಮವಾರ ಹೆಚ್ಚು ತೀವ್ರತೆ ಇತ್ತು. ನಾವೆಲ್ಲ ರಾತ್ರಿ ಊಟ ಮಾಡಿ ಮಲಗಲು ತಯಾರಾಗಿದ್ದೆವು. ಊರ ಹೊರಗಿನಿಂದ ಏಕಾಏಕಿ ಧನ್...ಧನ್... ಎಂಬ ಶಬ್ದ ಕೇಳಿಬಂತು. ಅದರ ಬೆನ್ನಲ್ಲೇ ಭೂಮಿ ನಡುಗಿತು. ಚಲಿಸುತ್ತಿರುವ ರೈಲಿನಲ್ಲಿ ಅಲುಗಾಡಿದಂತಹ ಅನುಭವವಾಯಿತು. ಕಳೆದ ಹಲವು ವರ್ಷಗಳಿಂದಲೂ ಈ ಭಾಗದಲ್ಲಿ ಭೂಮಿ ಕಂಪಿಸಿದೆ. ಆದರೆ, ಈ ಬಾರಿ ಪದೇಪದೇ ಆಗುತ್ತಿರುವುದು ಆತಂಕಕ್ಕೆ ದೂಡಿದೆ’ ಎಂದು ಹಲವು ಓದುಗರು ‘ಪ್ರಜಾವಾಣಿ’ಗೆ ಕರೆ ಮಾಡಿ ಮಾಹಿತಿ ನೀಡಿದರು.
ಇದರ ತರಂಗಗಳುಜಿಲ್ಲೆಯ ಬಹುಪಾಲು ಕಡೆ ಹರಡಿವೆ. ಚಿಂಚೋಳಿ, ಕಾಳಗಿ, ಕಮಲಾಪುರ ಹಾಗೂ ಸೇಡಂ ತಾಲ್ಲೂಕುಗಳಲ್ಲೂ ಭೂಮಿ ಹೆಚ್ಚು ನಡುಗಿತು. ಒಂದು ನಿಮಿಷದ ಅವಧಿಯಲ್ಲಿ 5ರಿಂದ 10 ಸೆಕೆಂಡ್‌ಗಳವರೆಗೆ ಈ ಕಂಪನ ಅನುಭವಕ್ಕೆ ಬಂತು. ಮನೆಯಲ್ಲಿ ಬೆಚ್ಚಗೆ ಮಲಗಿದ್ದ ಜನ ಏಕಾಏಕಿ ಚೀರಾಡುತ್ತ ಹೊರಗೆ ಓಡಿಬಂದರು. ಇಡೀ ರಾತ್ರಿಯನ್ನು ಮನೆಯ ಅಂಗಳದಲ್ಲಿ, ದೇವಸ್ಥಾನಗಳಲ್ಲೇ ಮಲಗಿ ಕಳೆದರು.
ಯಾವತ್ತು ಎಷ್ಟು ಕಂಪನ?
ಅಕ್ಟೋಬರ್ 7ರಂದು ರಾತ್ರಿ 12.44ರ ಸುಮಾರಿಗೆ ಚಿಂಚೋಳಿ, ಕಾಳಗಿಯ ಕೆಲವು ಕಡೆ ಭೂಮಿ ಕಂಪಿಸಿತ್ತು. ಇದು ರಿಕ್ಟರ್ ಮಾಪನದಲ್ಲಿ 2.6 ರಷ್ಟು ದಾಖಲಾಗಿತ್ತು. ಅ. 8ರಂದು ತಡರಾತ್ರಿ ಬೆಳಿಗ್ಗೆ 5.37ಕ್ಕೆ (3.4 ರಿಕ್ಟರ್) ಗಡಿಕೇಶ್ವಾರ, ತೇಗಲತಿಪ್ಪಿ, ಹಲಚೇರಾ ಮೊದಲಾದ ಕಡೆ ಅನುಭವಕ್ಕೆ ಬಂತು. ಅ. 9ರಂದು ನಸುಕಿನ 5.37ಕ್ಕೆ ಹಾಗೂ ಅ. 10ರಂದು ಬೆಳಿಗ್ಗೆ 6.05 ಗಂಟೆಗೆ ಕೂಡ ಕೆಲವು ಹಳ್ಳಿಗಳಲ್ಲಿ ಭೂಮಿ ಕಂಪಿಸಿತು. ಭಾನುವಾರ ಬೆಳಿಗ್ಗೆ ಸಂಭವಿಸಿದ ಭೂಕಂಪನವು ರಿಕ್ಟರ್ ಮಾಪಕದಲ್ಲಿ 3.0 ರಷ್ಟು ತೀವ್ರತೆ ದಾಖಲಾಗಿದೆ. ಇದರ ಕೇಂದ್ರ ಬಿಂದು ಕಾಳಗಿ ತಾಲ್ಲೂಕಿನ ಕೊಡದೂರಿನಿಂದ ಈಶಾನ್ಯ ದಿಕ್ಕಿನಲ್ಲಿ 2.1 ಕಿ.ಮೀ ಅಂತರದಲ್ಲಿತ್ತು’ ಎಂದು ಭೂಗರ್ಭಶಾಸ್ತ್ರಜ್ಞರು ಖಚಿತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.