
ಕಾಳಗಿ: ತಾಲ್ಲೂಕಿನ ಮಾಡಬೂಳ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಗೆ ಮಂಗಳವಾರ ಭೇಟಿ ನೀಡಿದ ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ರಾಹುಲ್ ತುಕಾರಾಮ ಪಾಂಡ್ವೆ ಅವರು ಎಸ್ಎಸ್ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ-2 ಅನ್ನು ಪರಿಶೀಲಿಸಿದರು.
ಪರೀಕ್ಷೆಯ ಮೊದಲ ದಿನವಾಗಿದ್ದ ಈ ದಿನ ಕನ್ನಡ ವಿಷಯಕ್ಕೆ ವಿದ್ಯಾರ್ಥಿಗಳು ಉತ್ತರ ಬರೆಯುತ್ತಿದ್ದರು. ಈ ಕೊಠಡಿಯನ್ನು ಪರಿಶೀಲಿಸಿ, ಪರೀಕ್ಷೆ-1ರ ಫಲಿತಾಂಶವೂ ಗಮನಿಸಿದರು.
ಫಲಿತಾಂಶ ಉತ್ತಮ ಪಡಿಸಲು ಈಗಾಗಲೇ ನೀಡಿದ ಮಿಷನ್ 40+ನ್ನು ಸರಿಯಾಗಿ ಅನುಷ್ಠಾನ ಮಾಡಿ ಶಾಲೆಯ ಫಲಿತಾಂಶ ಶೇ 90ರಷ್ಟು ಪಡೆಯಲು ಎಲ್ಲಾ ಶಿಕ್ಷಕರು ಕ್ರಮ ವಹಿಸಬೇಕು’ ಎಂದು ಸೂಚಿಸಿದರು.
ಬಳಿಕ ಚಿತ್ತಾಪುರ ತಾಲ್ಲೂಕಿನ ಗುಂಡಗುರ್ತಿ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ಮುಖ್ಯಶಿಕ್ಷಕಿ ಸಿದ್ದಮ್ಮ ಹೆಬ್ಬಾಳ, ಮುಖ್ಯಶಿಕ್ಷಕ ಮಾಳಪ್ಪ ಪೂಜಾರಿ, ಸಿಆರ್‌ಸಿ ಸಂಯೋಜಕ ಶಿವಲಿಂಗಯ್ಯ ಹಿರೇಮಠ ಇದ್ದರು.
ಇದೇ ದಿನ ಕಾಳಗಿ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿದ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಶಿವಗೊಂಡಪ್ಪ ಕಣ್ಣಿ ಪೂರ್ವಸಿದ್ಧತಾ ಪರೀಕ್ಷೆ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.