ADVERTISEMENT

ಸಾಲ: ಶಿಕ್ಷಣ ಸಂಸ್ಥೆ ಮುಖ್ಯಸ್ಥ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 3:05 IST
Last Updated 26 ಫೆಬ್ರುವರಿ 2021, 3:05 IST
ಶಂಕರ ಬಿರಾದಾರ
ಶಂಕರ ಬಿರಾದಾರ   

ಕಲಬುರ್ಗಿ: ಶಿಕ್ಷಣ ಸಂಸ್ಥೆ ಕಟ್ಟಲು ಸಾಲ ಮಾಡಿಕೊಂಡಿದ್ದ ನಗರದ ರಾಮಮಂದಿರ ಬಳಿಯ ನಿವಾಸಿ ಶಂಕರ ಬಿರಾದಾರ (49) ಎಂಬುವವರು ವಿಷ ಸೇವಿಸಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಿತ್ತಾಪುರ ತಾಲ್ಲೂಕಿನ ಮರಗೋಳ ಗ್ರಾಮದವರಾದ ಶಂಕರ ಬಿರಾದಾರ ಅವರು ಸೇಡಂ ಪಟ್ಟಣದಲ್ಲಿ ವಿಶ್ವಗಂಗಾ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ್ದರು. 2000ರಲ್ಲಿ ವಿಶ್ವಗಂಗಾ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮೂಲಕ ಶೈಕ್ಷಣಿಕ ಕ್ಷೇತ್ರಕ್ಕೆ ಕಾಲಿಟ್ಟ ಅವರು, ಪಟ್ಟಣದಲ್ಲಿ ಮೊದಲ ಬಾರಿಗೆ ಕೈಗಾರಿಕಾ ತರಬೇತಿ ಕೇಂದ್ರ ಆರಂಭಿಸಿದ್ದರು. 2002ರಲ್ಲಿ ಗೌರಮ್ಮ ವೆಂಕಟೇಶ ಐನಾಪೂರ ಪ್ರೌಢಶಾಲೆ, ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿದ್ದರು. ಲಾಕ್‌ಡೌನ್‌ ಸಂದರ್ಭದಲ್ಲಿ ಸಾಕಷ್ಟು ನಷ್ಟಕ್ಕೊಳಗಾಗಿದ್ದ ಅವರಿಗೆ ಸಾಲ ನೀಡಿದ್ದವರು ಸಾಲ ಮರುಪಾವತಿಗಾಗಿ ಒತ್ತಡ ಹೇರುತ್ತಿದ್ದರು. ಇದರಿಂದ ಆತಂಕಕ್ಕೊಳಗಾಗಿದ್ದರು ಎನ್ನಲಾಗಿದೆ.

ಸಾಯುವ ಮುನ್ನ ಮರಣಪತ್ರ ಬರೆದಿಟ್ಟಿರುವ ಬಿರಾದಾರ, ‘ಸಾಲಗಾರರ ಅತಿ ಕಿರುಕುಳದಿಂದ ನಾನು ಆತ್ಮಹತ್ಯೆಗೆ ಕೈ ಹಾಕಿದ್ದೇನೆ. ನನ್ನ ತಂದೆ, ತಾಯಿ, ಹೆಂಡತಿ, ಮುದ್ದಾದ ಎರಡು ಮಕ್ಕಳು ದೇವರಿದ್ದಂತೆ. ನನ್ನ ಎಲ್ಲಾ ಅಣ್ಣ, ತಮ್ಮಂದಿರು ಸಹ ಅತಿ ಒಳ್ಳೆಯವರಿದ್ದಾರೆ. ಕ್ಷಮಿಸಿ’ ಎಂದು ಹೇಳಿದ್ದಾರೆ.

ADVERTISEMENT

ಬುಧವಾರ ರಾತ್ರಿ ಇದ್ದಕ್ಕಿದ್ದಂತೆ ಕಲಬುರ್ಗಿಯ ರಾಮಮಂದಿರ ಬಳಿಯ ಮನೆಯಲ್ಲಿ ನೆಲಕ್ಕುರುಳಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ನಿಧನರಾದರು.‌ ಈ ಕುರಿತು ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.