
ಕಲಬುರಗಿ: ‘ಯಾವುದೇ ದೇಶ ನಿರ್ನಾಮ ಮಾಡಲು ಬಾಂಬ್ ಹಾಕುವ ಅಗತ್ಯವಿಲ್ಲ. ಆ ದೇಶದ ಶೈಕ್ಷಣಿಕ ವ್ಯವಸ್ಥೆ ಹಾಳಾದರೆ, ಆ ದೇಶ ಸ್ವಯಂ ಅವನತಿ ಹೊಂದುತ್ತದೆ ಎಂಬ ಮಾತಿದೆ. ಸದ್ಯ ನಮ್ಮ ದೇಶವೂ ಇದೇ ಸ್ಥಿತಿಯಲ್ಲಿದೆ’ ಎಂದು ನಿವೃತ್ತ ಪ್ರಾಧ್ಯಾಪಕ ಆರ್.ಕೆ.ಹುಡಗಿ ಅಭಿಪ್ರಾಯಪಟ್ಟರು.
ಶರಣಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ, ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ ಹಾಗೂ ಬೆಂಗಳೂರಿನ ಅಜೀಂ ಪ್ರೇಮಜಿ ವಿಶ್ವವಿದ್ಯಾಲಯ ಸಹಯೋಗದಲ್ಲಿ ನಗರದ ಶರಣಬಸವ ವಿ.ವಿ ಆವರಣದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ: ಸವಾಲುಗಳು ಮತ್ತು ಅವಕಾಶಗಳು’ ವಿಚಾರ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದ ಪ್ರಾಥಮಿಕ, ಪ್ರೌಢ ಹಾಗೂ ಉನ್ನತ ಶಿಕ್ಷಣದ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಹಾಳು ಮಾಡಲಾಗುತ್ತಿದೆ. ಒಂದು ವರ್ಗಕ್ಕೆ ಮಾತ್ರವೇ ಉತ್ತಮ ಶಿಕ್ಷಣ ದೊರೆಯುತ್ತಿದ್ದು, ಉಳಿದವರಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ’ ಎಂದರು.
‘ದೇಶದ ಭವಿಷ್ಯದ ಸತ್ಪ್ರಜೆಗಳನ್ನು ನಿರ್ಮಿಸುವ ಹೊಣೆ ಎಲ್ಲರಿಗಿಂತಲೂ ಶಿಕ್ಷಕರ ಮೇಲೆ ಹೆಚ್ಚಿದೆ. ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ. ಪ್ರಾಮಾಣಿಕವಾಗಿ ಶ್ರಮಪಟ್ಟರೆ ಎಲ್ಲವೂ ಸಾಧ್ಯ. ಅಂಥ ತಾಕತ್ತು, ಧೈರ್ಯ, ಹಿಕ್ಮತ್ತು, ಹುರುಪು ಶಿಕ್ಷಕರು, ಭಾವಿ ಶಿಕ್ಷಕರು ರೂಢಿಸಿಕೊಳ್ಳಬೇಕು’ ಎಂದರು.
‘ನಮ್ಮ ದೃಷ್ಟಿಕೋನ ಬದಲಿಸದ ಹೊರತು ಸಾಧನೆ ಅಸಾಧ್ಯ. ಬರೀ ದೃಷ್ಟಿಕೋನ ಬದಲಾದರೆ ಸಾಲದು, ಅದರೊಂದಿಗೆ ಅದಮ್ಯ ಛಲವೂ ಬೇಕು. ನಮ್ಮ ಹಣೆಬರಹವನ್ನು ನಾವೇ ಬರೆಸುವಂಥ ಹಟ ಅಗತ್ಯ. ಅಂದರೆ, ನಮ್ಮ ವರ್ತಮಾನ, ಭವಿಷ್ಯ ನಾವೇ ನಿರ್ಧರಿಸುವ, ನಿಯಂತ್ರಿಸುವ, ನಿರೂಪಿಸುವ, ನಿರ್ದೇಶಿಸುವ ಶಕ್ತಿ, ಸಾಮರ್ಥ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಇಂಥ ಹಟಮಾರಿಗಳಾದಾಗ ಮಾತ್ರವೇ ನಮ್ಮ ದೇಶದ ಶಿಕ್ಷಣದ ಹಣೆಬರಹವನ್ನು ಸುಧಾರಿಸಲು ಸಾಧ್ಯ’ ಎಂದು ಪ್ರತಿಪಾದಿಸಿದರು.
ಶರಣಬಸವ ವಿವಿ ಕುಲಪತಿ ಪ್ರೊ.ಅನಿಲ್‌ಕುಮಾರ್ ಬಿಡವೆ ಮಾತನಾಡಿ, ‘ಶೈಕ್ಷಣಿಕ ಕ್ಷೇತ್ರವು ಒಂದೆಡೆ ಶಿಕ್ಷಕರ ಕೊರತೆಯಿಂದ ಬಳಲುತ್ತಿದೆ. ಮತ್ತೊಂದೆಡೆ ಬಿಇಡಿ, ಎಂಇಡಿ ಓದಿದವರೂ ನಿರುದ್ಯೋಗಿಗಳಾಗಿದ್ದಾರೆ. ಭಾವಿ ಶಿಕ್ಷಕರು ಆಳ ಜ್ಞಾನ, ಬಹುಶಿಸ್ತೀಯ ಕೌಶಲ ರೂಢಿಸಿಕೊಳ್ಳುವುದು ಇದಕ್ಕಿರುವ ಪರಿಹಾರ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿಟಿಇ ಪ್ರಾಚಾರ್ಯ ವಿಜಯಕುಮಾರ ಜಿ.ಎಂ. ಮಾತನಾಡಿದರು. ಶರಣಬಸವ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯೆ ಸಾವಿತ್ರಿ ಇ.ಬಿಳಗಿ ವಂದಿಸಿದರು. ತನುಜಾ ಎಸ್.ಮನ್ನೂರ ನಿರೂಪಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಕನ್ನಡ ಉಪಕ್ರಮಗಳ ಸಹ ನಿರ್ದೇಶಕ ಎಸ್.ವಿ.ಮಂಜುನಾಥ ‘ನಮ್ಮ ಸಮಾಜ ಜ್ಞಾನಾಧಾರಿತ ಸಮಾಜವಾಗಿ ಬೆಳೆಯಬೇಕಿದ್ದು ಅನುವಾದ ಸಂಪದವು ಅದಕ್ಕೆ ಪೂರಕವಾಗಿ ಸಂಪನ್ಮೂಲ ಒದಗಿಸಲಿದೆ. ಈ ಸಂಪದಕ್ಕೆ ಸಮಾಜದ ವಿಭಿನ್ನ ಹಿನ್ನೆಲೆ ಕ್ಷೇತ್ರಗಳ ನೂರಾರು ವ್ಯಕ್ತಿಗಳು ಕೊಡುಗೆ ನೀಡಿದ್ದಾರೆ. ರಾಜ್ಯದ ವಿವಿಧೆಡೆಯ ತಜ್ಞರ ಪರಿಣತರ 8–10 ವರ್ಷಗಳ ಶ್ರಮದ ಫಲವಿದು. ಇದೊಂದು ಸಮಾಜದ ಆಸ್ತಿ. ಇದನ್ನು ಮರಳಿ ಸಮಾಜಕ್ಕೆ ನೀಡುವ ಪ್ರಯತ್ನಗಳು ಕಾರ್ಯಾಗಾರಗಳ ಮೂಲಕ ನಡೆಯುತ್ತಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.