ಕಲಬುರಗಿ: ‘ಭೋವಿ ಸಮಾಜಕ್ಕೆ ಶಿಕ್ಷಣವೇ ಮೊದಲ ಆದ್ಯತೆಯಾಗಬೇಕು. ಶಿಕ್ಷಣದ ಮೂಲಕ ಅಧಿಕಾರವಂತರಾಗಬೇಕು. ಶಿಕ್ಷಣವಂತರೇ ರಾಜಕಾರಣಿಗಳಾಗಬೇಕು. ಇದೆಲ್ಲದರ ಜೊತೆಗೆ ಸಮುದಾಯಕ್ಕೆ ಸಮಯ ಕೊಡಬೇಕು’ ಎಂದು ಬಾಗಲಕೋಟೆ–ಚಿತ್ರದುರ್ಗ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಲಹೆ ನೀಡಿದರು.
ನಗರದ ಉತ್ಸವ ಫಂಕ್ಷನ್‌ಹಾಲ್‌ನಲ್ಲಿ ಭಾನುವಾರ ಸಿದ್ಧರಾಮೇಶ್ವರ ಸರ್ಕಾರಿ, ಅರೆ ಸರ್ಕಾರಿ ಮತ್ತು ನಿವೃತ್ತ ನೌಕರರ ಸಂಘ ಹಾಗೂ ಜಿಲ್ಲಾ ಭೋವಿ (ವಡ್ಡರ) ಸಮಾಜದ ಆಶ್ರಯದಲ್ಲಿ ಸಮಾಜದ ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ರಾಜ್ಯದ ಜನಸಂಖ್ಯೆ 6.80 ಕೋಟಿ ಇದೆ. ಒಟ್ಟು ಜನಸಂಖ್ಯೆಯ ಶೇ 1ರಷ್ಟು ಕೂಡ ಸರ್ಕಾರಿ ನೌಕರಿಗಳಿಲ್ಲ. ಹಾಗಾಗಿ, ಸರ್ಕಾರಿ ನೌಕರಿನೇ ಬೇಕು ಎನ್ನುವ ಆಲೋಚನೆಯಿಂದ ಹೊರಬಂದು ಸರ್ಕಾರವನ್ನು ನಡೆಸುವ ಹಾಗೆ, ಹೆಚ್ಚು ತೆರಿಗೆ ಕಟ್ಟುವ ಹಾಗೆ ಬೆಳೆಯಬೇಕು. ಖಾಸಗಿ ಕಂಪನಿಯನ್ನು ಕಟ್ಟಿ ನೂರು ಜನಕ್ಕೆ ನೀವೇ ಉದ್ಯೋಗ ಕೊಡಿ’ ಎಂದರು.
ವಿಧಾನ ಪರಿಷತ್ ವಿರೋಧ ಪಕ್ಷದ ಉಪನಾಯಕ ಸುನೀಲ ವಲ್ಲ್ಯಾಪುರೆ ಮಾತನಾಡಿ, ‘ಸಂವಿಧಾನದಲ್ಲಿ ಇಲ್ಲದಿದ್ದರೂ ಸರ್ಕಾರ ಮತಬ್ಯಾಂಕ್‌ಗಾಗಿ ಎ, ಬಿ, ಸಿ ವರ್ಗಗಳನ್ನು ಮಾಡಿ ಮೀಸಲಾತಿ ನೀಡಿದೆ. ಸಮುದಾಯದ ಜನ ಎಚ್ಚೆತ್ತುಕೊಳ್ಳಬೇಕು. ಸಿ ವರ್ಗದಲ್ಲಿ 59 ಜಾತಿಗಳಿದ್ದು, ಮಕ್ಕಳನ್ನು ಸ್ಪರ್ಧಾ ಜಗತ್ತಿಗೆ ಅಣಿ ಮಾಡಬೇಕು’ ಎಂದರು.
ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ‘ಜೀವನದಲ್ಲಿ ಶಿಕ್ಷಣವೇ ಮುಖ್ಯ. ವಿದ್ಯಾರ್ಥಿಗಳ ಸಾಧನೆ ಮುಂದುವರಿಯಲಿ. ಸರ್ಕಾರಿ ನೌಕರರು ನಿಷ್ಠಾವಂತರಾಗಿ ಕೆಲಸ ಮಾಡುತ್ತಿದ್ದಾರೆ. ಸಮಾಜದ ಜೊತೆಗೆ ನಾನು ಸದಾ ಇರುತ್ತೇನೆ’ ಎಂದು ಹೇಳಿದರು.
ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ ಮಾತನಾಡಿ, ‘ಮಕ್ಕಳ ಸಾಧನೆ ಅದು ಕುಟುಂಬದ, ಶಿಕ್ಷಕರ, ವಿದ್ಯಾ ಸಂಸ್ಥೆಗಳ ಸಾಧನೆಯೂ ಹೌದು. ನಾನು 1ನೇ ತರಗತಿಯಿಂದ ಪಿಎಚ್.ಡಿ ವರೆಗೆ ಸರ್ಕಾರಿ ಶಾಲೆ–ಕಾಲೇಜುಗಳಲ್ಲೇ ಓದಿದ್ದೇನೆ. ಶಿಸ್ತಿನಿಂದ ಗುರಿಯನ್ನು ಕೇಂದ್ರೀಕರಿಸಿ ಸಾಗಿದರೆ ಐಎಎಸ್, ಐಪಿಎಸ್ ಪರೀಕ್ಷೆ ಪಾಸಾಗಲು ಕೋಚಿಂಗ್ ಸಹ ಬೇಕಿಲ್ಲ’ ಎಂದರು.
ರಸ್ತೆ ಸಾರಿಗೆ ಇಲಾಖೆಯ ಜಂಟಿ ಆಯುಕ್ತ ಸಿದ್ದಪ್ಪ ಕಲ್ಹೇರಿ ಮಾತನಾಡಿದರು. ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮ ದಂಡಗುಲಕರ್ ಅಧ್ಯಕ್ಷತೆ ವಹಿಸಿದ್ದರು.
ಸಮಾಜದ ವೈದ್ಯರು, ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಎಂಜಿನಿಯರಿಂಗ್ ಪ್ರತಿಭಾವಂತ ವಿದ್ಯಾರ್ಥಿಗಳು, ನೂತನ, ನಿವೃತ್ತ ಹಾಗೂ ಪದೋನ್ನತಿ ಹೊಂದಿದ ನೌಕರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪಾಲಿಕೆ ಸದಸ್ಯೆ ಹೊನ್ನಮ್ಮ ಬಾಬು ಹಾಗರಗಾ, ಶಹಾಬಾದ್ ನಗರಸಭೆ ಅಧ್ಯಕ್ಷೆ ಚಂಪಾಬಾಯಿ ರಾಜು ಮೇಸ್ತ್ರಿ, ಪ್ರಮುಖರಾದ ಲಿಂಗಣ್ಣ ದೇವಕರ್, ರಾಮಯ್ಯ ಪೂಜಾರಿ, ಈರಣ್ಣ ರಾವೂರಕರ್, ತಿಪ್ಪಣ್ಣ ಒಡೆಯರಾಜ, ಮಲ್ಲಿಕಾರ್ಜುನ ಕುಸ್ತಿ, ರಾಜು ಮೇಸ್ತ್ರಿ, ರಾಮು ನಂದೂರ, ಪ್ರೊ.ಸುಲೋಚನಾ ಮುದಗಲ್, ಬಸವರಾಜ ಶಹಾಬಾದಕರ್, ರಾಜು ಎಂಪುರೆ, ಮಾಣಿಕರಾವ ವಾಡೇಕರ್ ಇದ್ದರು.
ನೌಕರರ ಸಂಘದ ಅಧ್ಯಕ್ಷ ಶರಣಪ್ಪ ಗುಂಡಗುರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮಣ ಆಲಕುಂಟೆ ಸ್ವಾಗತಿಸಿದರು. ಹಣಮಂತ ಜಾಧವ ನಿರೂಪಿಸಿದರು.
ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗವೇ ಬೇಕು ಎಂಬ ಮನೋಭಾವದಿಂದ ಹೊರಬರಬೇಕು. ಖಾಸಗಿ ರಂಗ ಬಲಿಷ್ಠವಾಗಿ ಬೆಳೆಯುತ್ತಿದ್ದು ಅಲ್ಲೂ ಬದುಕನ್ನು ಕಟ್ಟಿಕೊಳ್ಳುವ ಪ್ರಯತ್ನ ಮಾಡಬೇಕುಸಿದ್ದಪ್ಪ ಕಲ್ಹೇರಿ ರಸ್ತೆ ಸಾರಿಗೆ ಇಲಾಖೆಯ ಜಂಟಿ ಆಯುಕ್ತ
ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ಹುದ್ದೆಗಳಿಗೆ ಮಾತ್ರ ಅರ್ಜಿ ಹಾಕುತ್ತಾರೆ. ಕೇಂದ್ರ ಸರ್ಕಾರವೂ ಸಾಕಷ್ಟು ನೇಮಕಾತಿ ಮಾಡಿಕೊಳ್ಳುತ್ತದೆ. ಅವುಗಳಿಗೂ ಅರ್ಜಿ ಹಾಕುವ ಜೊತೆಗೆ ಶೇ 100ರಷ್ಟು ಶ್ರಮ ಹಾಕಬೇಕುಶರಣಪ್ಪ ಗುಂಡಗುರ್ತಿ ಅಧ್ಯಕ್ಷ ಸಿದ್ಧರಾಮೇಶ್ವರ ಸರ್ಕಾರಿ ಅರೆ ಸರ್ಕಾರಿ ಮತ್ತು ನಿವೃತ್ತ ನೌಕರರ ಸಂಘ
ರೋಗಿಯ ಚಿಕಿತ್ಸೆಗೆ ಮಿಡಿದ ಹೃದಯಗಳು ಪಾರ್ಶ್ವವಾಯುನಿಂದ ಬಳಲುತ್ತಿರುವ ಯಾದಗಿರಿ ಜಿಲ್ಲೆಯ ಕೆಂಭಾವಿಯ ಶಂಕರಪ್ಪ ಗಿಡ್ಡಯ್ಯ ಅವರ ಚಿಕಿತ್ಸೆಗೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬರೂ ಧನಸಹಾಯ ಮಾಡಿ ಹೃದಯ ಶ್ರೀಮಂತಿಕೆಯನ್ನು ಪ್ರದರ್ಶಿಸಿದರು. ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳ ಕರೆಯ ಮೇರೆಗೆ ಜನರಿಂದ ಸಂಗ್ರಹವಾದ ಒಟ್ಟು ₹ 21490 ಹಣವನ್ನು ಶಂಕರಪ್ಪ ಅವರ ಪತ್ನಿ ಮಲ್ಲಮ್ಮ ಅವರಿಗೆ ನೀಡಲಾಯಿತು. ಶಾಸಕ ಬಸವರಾಜ ಮತ್ತಿಮಡು ಅವರು ಕೂಡ ವೇದಿಕೆಯಲ್ಲೇ ವೈಯಕ್ತಿಕವಾಗಿ ₹ 20 ಸಾವಿರ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.