ADVERTISEMENT

ಮೊಟ್ಟೆ ಕೊಟ್ಟರೆ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ ಎಂದ ದಯಾನಂದ ಸ್ವಾಮೀಜಿ

ಅನುದಾನ ತಿರಸ್ಕರಿಸುವುದಕ್ಕೂ ಸಿದ್ಧ; ದಯಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 11:36 IST
Last Updated 14 ಡಿಸೆಂಬರ್ 2021, 11:36 IST
ದಯಾನಂದ ಸ್ವಾಮೀಜಿ
ದಯಾನಂದ ಸ್ವಾಮೀಜಿ   

ಕಲಬುರಗಿ: ‘ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ಕೊಡುವುದನ್ನು ನಿಲ್ಲಿಸದಿದ್ದರೆ ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುವುದನ್ನೇ ನಿಲ್ಲಿಸುತ್ತೇವೆ’ ಎಂದು ಅಖಿಲ ಭಾರತ ಸಸ್ಯಾಹಾರಿಗಳ ಒಕ್ಕೂಟದ ಪ್ರಧಾನ ಸಂಚಾಲಕ ದಯಾನಂದ ಸ್ವಾಮೀಜಿ ಹೇಳಿದರು.

‘ಕೋಳಿ ಫಾರ್ಮ್‌ಗಳ ಮಾಲೀಕರ ಲಾಬಿಗೆ ಮಣಿದ ಸರ್ಕಾರ ಮಕ್ಕಳಿಗೆ ಮೊಟ್ಟೆ ತಿನ್ನಿಸುತ್ತಿದೆ. ಎಲ್ಲರೂ ಒಪ್ಪುವ ಮತ್ತು ಏಕರೂಪದ ಪೌಷ್ಟಿಕ ಆಹಾರ ನೀಡಬೇಕೇ ಹೊರೆತು, ಜ್ಞಾನ ದೇಗುಲದ ಶಾಲೆಗಳನ್ನು ಮಿಲ್ಟ್ರಿ ಹೋಟೆಲ್ ಮಾಡಿ ಮೊಟ್ಟೆ ಕೊಡಬಾರದು’ ಎಂದು ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ನುಡಿದರು.

‘ಸರ್ಕಾರ ತಕ್ಷಣವೇ ಮೊಟ್ಟೆ ನೀಡುವ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲವೇ ರಾಜ್ಯದಾದ್ಯಂತ ಪ್ರತ್ಯೇಕ ಶಾಲೆ ಹಾಗೂ ಅಂಗನವಾಡಿ ತೆರೆಯಬೇಕು. ಒಂದು ವೇಳೆ ಈ ಬೇಡಿಕೆಗೆ ಸ್ಪಂದಿಸದೆ ಇದ್ದಲ್ಲಿ ನಮ್ಮ ಅನುದಾನಿತ ಶಾಲೆಗಳು ಮೊಟ್ಟೆ ವಿತರಣೆಯನ್ನು ಸ್ಥಗಿತಗೊಳಿಸಿ, ಸರ್ಕಾರದ ಅನುದಾನವನ್ನೂ ತಿರಸ್ಕರಸಲಿವೆ. ನಾವೇ ಪ್ರತ್ಯೇಕ ಶಾಲೆಗಳನ್ನು ತೆರೆದು ಮರದ ಕೆಳಗೋ, ಜೋಪಡಿ ಹಾಕಿಕೊಂಡು ತರಗತಿಗಳನ್ನು ನಡೆಸುತ್ತೇವೆ’ ಎಂದರು.

ADVERTISEMENT

‘ಶಾಲೆಯ ಆವರಣದಲ್ಲಿ ಸರ್ಕಾರ ಆಹಾರದ ವಿಷಯವಾಗಿ ಸಸ್ಯಾಹಾರ ಮತ್ತು ಮಾಂಸಾಹಾರ ಎಂಬ ತಾರತಮ್ಯ ಮಾಡಬಾರದು. ಒಂದು ವೇಳೆ ಮಕ್ಕಳಿಗೆ ಮೊಟ್ಟೆ ಕೊಡುವುದು ಅತ್ಯವಶ್ಯವೇ ಇದ್ದರೇ ಪಾರ್ಸಲ್‌ ನೀಡಲಿ. ಅದಕ್ಕೆ ನಮ್ಮ ಅಭ್ಯಂತರ ಇಲ್ಲ. ನಮ್ಮ ಹೋರಾಟ ಶಾಲೆಗಳಲ್ಲಿ ಮೊಟ್ಟೆ ನೀಡುವುದಕ್ಕೆ ಹೊರತು ಮಾಂಸಾಹಾರದ ವಿರುದ್ಧವಲ್ಲ’ ಎಂದು ಒಕ್ಕೂಟದ ಪ್ರಧಾನ ಸಂಘಟಕ ಚನ್ನಬಸವಾನಂದ ಸ್ವಾಮೀಜಿ ಸ್ಪಷ್ಟಪಡಿಸಿದರು.

ಮೊಟ್ಟೆ ಕೊಡುವ ನಿರ್ಧಾರವನ್ನು ಖಂಡಿಸಿ ಬೆಳಗಾವಿಯಲ್ಲಿ ಡಿ.20ರಂದು ಬೆಳಿಗ್ಗೆ 10ಕ್ಕೆ ಸಂತ ಸಮಾವೇಶ, ವಿಧಾನಸೌಧ ಚಲೋ ಚಳವಳಿ ಹಮ್ಮಿಕೊಳ್ಳಲಾಗಿದೆ. ರಾಜ್ಯದ ನೂರಾರು ಮಠಾಧೀಶರು ಇದರಲ್ಲಿ ಭಾಗವಹಿಸುವರು ಎಂದು ಹೇಳಿದರು.

ರಾಷ್ಟ್ರೀಯ ಬಸವ ದಳದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಜಿ.ಶೆಟಗಾರ, ಗೌರವ ಅಧ್ಯಕ್ಷ ಆರ್‌.ಕೆ.ಹೆಗಣೆ, ಉಪಾಧ್ಯಕ್ಷ ಸಿದ್ರಾಮಪ್ಪ ಲದ್ದೆ, ಕಲ್ಯಾಣಕುಮಾರ, ವೀರಣ್ಣಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.