ADVERTISEMENT

ಕೆಕೆಆರ್‌ಟಿಸಿ ಬಸ್‌ಗಳಲ್ಲಿ ಸ್ಮಾರ್ಟ್ ‘ಇಟಿಎಂ’

ಮಲ್ಲಿಕಾರ್ಜುನ ನಾಲವಾರ
Published 16 ಮೇ 2025, 6:33 IST
Last Updated 16 ಮೇ 2025, 6:33 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (ಕೆಕೆಆರ್‌ಟಿಸಿ) ಯುಪಿಐ ಆಧಾರಿತ ಕ್ಯೂಆರ್‌ಕೋಡ್ ಸ್ಕ್ಯಾನಿಂಗ್ ಮಾಡಿ ಟಿಕೆಟ್ ದರ ಪಾವತಿಸುವ ‘ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟಿಂಗ್ ಮಷಿನ್‌ಗಳ’ (ಇಟಿಎಂ) ಸೇವೆಯನ್ನು ಆರಂಭಿಸಲಿದೆ.

ಕೆಕೆಆರ್‌ಟಿಸಿ ಬಸ್‌ಗಳಲ್ಲಿ ಪ್ರಸ್ತುತ ಬಳಕೆಯಲ್ಲಿರುವ ಬಿಲ್ಲಿಂಗ್ ಮಷಿನ್‌ಗಳ ಅವಧಿ ಮುಕ್ತಾಯವಾಗಿದೆ. ಅವುಗಳಿಗೆ ಪರ್ಯಾಯವಾಗಿ ಇಟಿಎಂಗಳ ಬಳಕೆಗೆ ಮುಂದಾಗಿದೆ. ಕೆಎಸ್‌ಆರ್‌ಟಿಸಿ, ವಾಯವ್ಯ ಕರ್ನಾಟಕ ಸಾರಿಗೆ ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಇಟಿಎಂಗಳ ಬಳಕೆಯಲ್ಲಿವೆ. ಕೆಕೆಆರ್‌ಟಿಸಿಯು ಅದೇ ಹಾದಿಯಲ್ಲಿ ಸಾಗುತ್ತಿದ್ದು, ಅವುಗಳಿಗೂ ಒಂದು ಹೆಜ್ಜೆ ಮುಂದೆ ಹೋಗಿ ಸುಧಾರಿತ ಫೀಚರ್‌ಗಳನ್ನು ಮಷಿನ್‌ನಲ್ಲಿ ಅಳವಡಿಸುತ್ತಿದೆ.

ಕೆಕೆಆರ್‌ಟಿಸಿಯಲ್ಲಿ 4,650ಕ್ಕೂ ಹೆಚ್ಚು ಬಸ್‌ಗಳಿವೆ. 6,500 ಮಷಿನ್‌ಗಳ ಟೆಂಡರ್ ಆಗಿದ್ದು, ವರ್ಕ್ ಆರ್ಡರ್ ಸಹ ಮಂಜೂರಾಗಿದೆ. ಅರ್ಧದಷ್ಟು ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವ ಕಾರ್ಯವೂ ಮುಕ್ತಾಯವಾಗಿದೆ. ರೂಟ್ ಮ್ಯಾಪ್, ಟಿಕೆಟ್‌ಗಳ ದರ, ಮಾಸಿಕ, ವಿದ್ಯಾರ್ಥಿಗಳ ಪಾಸ್‌ನಂತಹ ಡಾಟಾ ಭರ್ತಿಯ ಕೆಲಸ ನಡೆಯುತ್ತಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ADVERTISEMENT

ಆ್ಯಂಡ್ರಾಯ್ಡ್ ತಂತ್ರಾಂಶ ಆಧಾರಿತ ಇಟಿ ಮಷಿನ್‌ನಲ್ಲಿ ಡಿಜಿಟಲ್ ಪಾವತಿ, ಡ್ಯಾಷ್‌ ಬೋರ್ಡ್ ಇರಲಿದೆ. ಎಲ್ಲ ಬಗೆಯ ಪಾಸ್‌ಗಳು, ಒಂದು ವೇಳೆ ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಕಾರ್ಡ್‌ಗಳು ಜಾರಿಗೊಳಿಸಿದರೆ ಆ ಕಾರ್ಡ್‌ಗಳೂ ಸಂಯೋಜನೆ ಆಗುವಂತಹ ಫೀಚ್‌ಗಳನ್ನು ಅಳವಡಿಸಲಾಗುತ್ತಿದೆ. ನಿರ್ವಾಹಕ ಮಷಿನ್‌ನಲ್ಲಿ ಪ್ರಯಾಣಿಕರು ಹೇಳುವ ಸ್ಥಳ ದಾಖಲಿಸುತ್ತಿದ್ದಂತೆ ಕ್ಯೂಆರ್‌ಕೋಡ್ ಪ್ರದರ್ಶನವಾಗುತ್ತದೆ. ಪ್ರಯಾಣಿಕರು ಸಂಸ್ಥೆ ನೀಡುವ ಆ್ಯಂಡ್ರಾಯ್ಡ್ ಆ್ಯಪ್ ಬಳಸಿ ಡಿಜಿಟಲ್ ಪಾವತಿ ಮಾಡಿ ತಮ್ಮ ಟಿಕೆಟ್ ಪಡೆಯಬಹುದು ಎಂದರು.

ಟಚ್‌ ಸ್ಕ್ರೀನ್, ವೈರ್‌ಲೆಸ್ ಸಂವಹನ, ವೇಗದ ಪ್ರಕ್ರಿಯೆ ವ್ಯವಸ್ಥೆಗಳನ್ನು ಸ್ಮಾರ್ಟ್ ಇಟಿಎಂ ಹೊಂದಿದೆ. ಸುಲಭವಾಗಿ ಟಿಕೆಟ್ ನೀಡುವಂತೆ ಯಂತ್ರವನ್ನು ವಿನ್ಯಾಸಗೊಳಿಸಲಾಗಿದೆ. ಪ್ರಯಾಣಿಕರಿಗೆ 30 ಸೆಕೆಂಡ್‌ಗಳಲ್ಲಿ ಅವರ ಟಿಕೆಟ್ ಕೈಸೇರಲಿದೆ. ಜತೆಗೆ ಪ್ರತಿಯೊಂದು ಟಿಕೆಟ್‌ನ ಮಾಹಿತಿಯೂ ಸಂಗ್ರಹವಾಗಿರಲಿದೆ ಎಂದು ತಿಳಿಸಿದರು.

₹ 18 ಕೋಟಿ ಖರ್ಚು, ₹ 450 ಬಾಡಿಗೆ: ಸ್ಮಾರ್ಟ್ ಇಟಿಎಂಗಳಿಗಾಗಿ ಕೆಕೆಆರ್‌ಟಿಸಿಯು ₹ 18 ಕೋಟಿ ಖರ್ಚು ಮಾಡುತ್ತಿದೆ. ಪ್ರತಿಯೊಂದು ಮಷಿನ್‌ನ ಮಾಸಿಕ ಬಾಡಿಗೆ ದರ ₹ 450 ಇರಲಿದೆ. ಇದರಲ್ಲಿ ಸಿಮ್ ಕಾರ್ಡ್, ವೆಬ್‌ ಅಪ್ಲಿಕೇಷನ್, ಪ್ರಯಾಣಿಕರ ಬಳಕೆಯ ಆ್ಯಪ್, ಟಿಕೆಟ್ ಡಾಟಾ ಸಂಗ್ರಹದ ರಿಮೋಟ್ ಸರ್ವರ್, ಕ್ಲೌಡ್ ಸೇವೆಯೂ ಒಳಗೊಂಡಿರಲಿದೆ. ಸಾರಿಗೆಯ ಅನ್ಯ ಸಂಸ್ಥೆಗಳಿಗೆ ಹೋಲಿಕೆ ಮಾಡಿದರೆ ₹ 200ರಷ್ಟು ಕಡಿಮೆ ಬಾಡಿಗೆ ಇದ್ದು, ಐದು ವರ್ಷಗಳವರೆಗೂ ಬಾಳಿಕೆ ಬರಲಿದೆ.

ಹೊಸ ಇಟಿಎಂನಿಂದ ಪ್ರಯಾಣಿಕರು ಮತ್ತು ನಿರ್ವಾಹಕರಿಗೆ ಚಿಲ್ಲರೆ ಸಮಸ್ಯೆ ತಪ್ಪಲಿದೆ. ಎರಡ್ಮೂರು ರೂಪಾಯಿಗಾಗಿ ನಡೆಯುವ ವಾಗ್ವಾದಗಳಿಗೂ ಪೂರ್ಣವಿರಾಮ ಬೀಳಲಿದೆ.

ಸಂಗ್ರಹ ಚಿತ್ರ
ಮಷಿನ್‌ಗಳಲ್ಲಿ ಡಾಟಾ ಭರ್ತಿ ಕಾರ್ಯ ನಡೆಯುತ್ತಿದ್ದು, ಅದು ಪೂರ್ಣಗೊಂಡ ಬಳಿಕ ಕಂಡಕ್ಟರ್‌ಗಳಿಗೆ ತರಬೇತಿ ನೀಡಿ ಆಯ್ದ ಮಾರ್ಗಗಳಲ್ಲಿ ಪ್ರಾಯೋಗಿಕವಾಗಿ ಬಳಸಲಾಗುವುದು
ವಿ.ಎಚ್. ಸಂತೋಷಕುಮಾರ ಕೆಕೆಆರ್‌ಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ
‘ಡಿಜಿಟಲ್‌ ಪೇಮೆಂಟ್‌ಗೆ ಅನುಕೂಲ’
‘ಒಂದೆರಡು ತಿಂಗಳಲ್ಲಿ ಸ್ಮಾರ್ಟ್ ಇಟಿಎಂ ಬಳಕೆ ಕಾರ್ಯರೂಪಕ್ಕೆ ಬರಲಿದೆ. ಕ್ಯೂಆರ್‌ಕೋಡ್‌ನಿಂದ ಡಿಜಿಟಲ್ ಪೇಮೆಂಟ್‌ಗೆ ಹೆಚ್ಚು ಅನುಕೂಲವಾಗಲಿದೆ’ ಎಂದು ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. ‘ನಮ್ಮ ಭಾಗದಲ್ಲಿ ಕಡಿಮೆ ಡಿಜಿಟಲ್ ಪಾವತಿ ಬಳಕೆದಾರರು ಇದ್ದರೂ ಇಟಿಎಂ ಅನ್ನು ಎಲ್ಲ ಬಸ್‌ಗಳಲ್ಲಿ ಜಾರಿಗೆ ತರುತ್ತೇವೆ. ಸ್ಮಾರ್ಟ್‌ ಯಂತ್ರಗಳನ್ನು ಬಳಕೆಗೆ ತರುವ ಚಿಂತನೆ ಬಹಳ ದಿನಗಳಿಂದ ಇತ್ತು. ಆದರೆ ಪ್ರಸ್ತುತ ಬಳಕೆಯಲ್ಲಿರುವ ಬಿಲ್ಲಿಂಗ್ ಮಷಿನ್‌ಗಳ ಅವಧಿ ಮುಗಿಯುವವರೆಗು ಬರುವುದಿಲ್ಲ ಎಂದರು. ಹೀಗಾಗಿ ಸ್ವಲ್ಪ ವಿಳಂಬವಾಗಿದೆ. ಉತ್ತಮ ಫೀಚರ್‌ಗಳೊಂದಿಗೆ ಪ್ರಯಾಣಿಕ ಸ್ನೇಹಿ ಇಟಿಎಂಗಳು ಸೇವೆಗೆ ಲಭ್ಯವಾಗಲಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.