ಕಲಬುರಗಿ: ‘ಉದ್ಯೋಗ ಸೃಷ್ಟಿ, ಉದ್ಯೋಗ ಅರ್ಹತೆ ಮತ್ತು ಸಾಮಾಜಿಕ ಭದ್ರತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರದ ಕಾರ್ಮಿಕರ ಭವಿಷ್ಯನಿಧಿ ಸಂಘಟನೆಯು ಆಗಸ್ಟ್ 1ರಿಂದ ಉದ್ಯೋಗ ಆಧಾರಿತ ಪ್ರೋತ್ಸಾಹಕ ಯೋಜನೆಯನ್ನು ಜಾರಿಗೆ ತರುತ್ತಿದೆ’ ಎಂದು ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತ ಎಂ. ಸುಬ್ರಹ್ಮಣ್ಯಂ ತಿಳಿಸಿದರು.
‘ಮೊದಲ ಬಾರಿಗೆ ಕೆಲಸ ಮಾಡುವವರು ಹಾಗೂ ಉದ್ಯೋಗದಾತರನ್ನು ಕೇಂದ್ರೀಕೃತವಾಗಿ ಇರಿಸಿಕೊಂಡು ಕೇಂದ್ರ ಸರ್ಕಾರವು ಜಾರಿಗೆ ತರುತ್ತಿದೆ. ಮೊದಲ ಬಾರಿಯ ಉದ್ಯೋಗಿಗಳಿಗೆ ಒಂದು ತಿಂಗಳ ಇಪಿಎಫ್ ವೇತನವನ್ನು ಗರಿಷ್ಠ ₹ 15 ಸಾವಿರ ಎರಡು ಕಂತುಗಳಲ್ಲಿ ನೀಡಲಾಗುವುದು. ₹ 1 ಲಕ್ಷ ವೇತನ ಹೊಂದಿರುವವರು ಇದಕ್ಕೆ ಅರ್ಹರು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಮೊದಲ ಕಂತು 6 ತಿಂಗಳ ನಂತರ ಹಾಗೂ ಎರಡನೇ ಕಂತನ್ನು 12 ತಿಂಗಳ ಬಳಿಕ ಮತ್ತು ಉದ್ಯೋಗಿ ಆರ್ಥಿಕ ಸಾಕ್ಷರತಾ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ನಂತರ ಪಾವತಿಸಲಾಗುವುದು. ಪ್ರೋತ್ಸಾಹ ಧನವನ್ನು ಡಿಬಿಟಿ ಮೂಲಕ ನೀಡಲಾಗುವುದು’ ಎಂದರು.
ಉದ್ಯೋಗದಾತರಿಗೆ ಹೆಚ್ಚುವರಿ ಉದ್ಯೋಗ ಸೃಷ್ಟಿಗಾಗಿ ಎರಡು ವರ್ಷಗಳವರೆಗೆ ಪ್ರೋತ್ಸಾಹ ಧನವನ್ನು ನೀಡಲಾಗುವುದು. ಕನಿಷ್ಠ 6 ತಿಂಗಳು ನಿರಂತರ ಉದ್ಯೋಗ ಹೊಂದಿರುವ ಗರಿಷ್ಠ ₹ 1 ಲಕ್ಷ ವರೆಗಿನ ವೇತನ ಇರುವ ಪ್ರತಿ ಹೆಚ್ಚುವರಿ ಉದ್ಯೋಗಿಗೆ ಸರ್ಕಾರವು 2 ವರ್ಷಗಳ ವರೆಗೆ ₹ 3,000 ಪ್ರೋತ್ಸಾಹ ಧನ ಕೊಡಲಿದೆ. ಉದ್ಯೋಗದಾತರ ಪ್ಯಾನ್ ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳಿಗೆ ಪಾವತಿ ಆಗಲಿದೆ. ಉತ್ಪಾದನಾ ವಲಯಕ್ಕೆ ಪ್ರೋತ್ಸಾಹ ಧನವನ್ನು 3 ಮತ್ತು 4ನೇ ವರ್ಷಗಳಿಗೆ ವಿಸ್ತರಿಸಲಾಗುವುದು’ ಎಂದು ಮಾಹಿತಿ ನೀಡಿದರು.
‘ಈ ಯೋಜನೆಯು 2025ರ ಆಗಸ್ಟ್ 1ರಿಂದ 2027ರ ಜುಲೈ 1ರ ನಡುವೆ ಸೃಷ್ಟಿಯಾದ ಉದ್ಯೋಗಗಳಿಗೆ ಅನ್ವಯವಾಗಲಿದೆ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಹಾಯಕ ಆಯುಕ್ತ ಭರತ್ ಮೀನಾ, ಜಿಲ್ಲಾ ನೋಡಲ್ ಅಧಿಕಾರಿ ಬಸವರಾಜ ಹೆಳವರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.