ADVERTISEMENT

ಕಲಬುರಗಿ: ಬಿಸಿಲ ನಾಡಿನಲ್ಲೊಂದು ವನಸಂಪತ್ತು

ನರೇಗಾ ಯೋಜನೆಯಡಿ ನೆಟ್ಟಿದ್ದ 68 ಸಾವಿರ ಸಸಿಗಳು ಇಂದು ಹೆಮ್ಮರ

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 23:36 IST
Last Updated 4 ಜೂನ್ 2023, 23:36 IST
ಕಲಬುರಗಿ ತಾಲ್ಲೂಕಿನ ನದಿಸಿಣ್ಣೂರ, ಫಿರೋಜಾಬಾದ್ ಬಳಿಯಲ್ಲಿ ಜವಳಿ ಪಾರ್ಕ್ ನಿರ್ಮಣವಾಗುವ ಸ್ಥಳದಲ್ಲಿ ನರೇಗಾ ಯೋಜನೆಯಡಿ ಬೆಳೆದ ಮರಗಳನ್ನು ಸದಾಶಿವ ಹೈದ್ರಾ ವೀಕ್ಷಿಸಿದರು
–ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಕಲಬುರಗಿ ತಾಲ್ಲೂಕಿನ ನದಿಸಿಣ್ಣೂರ, ಫಿರೋಜಾಬಾದ್ ಬಳಿಯಲ್ಲಿ ಜವಳಿ ಪಾರ್ಕ್ ನಿರ್ಮಣವಾಗುವ ಸ್ಥಳದಲ್ಲಿ ನರೇಗಾ ಯೋಜನೆಯಡಿ ಬೆಳೆದ ಮರಗಳನ್ನು ಸದಾಶಿವ ಹೈದ್ರಾ ವೀಕ್ಷಿಸಿದರು –ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್   

ಮನೋಜಕುಮಾರ್ ಗುದ್ದಿ

ಕಲಬುರಗಿ: ಬೇಸಿಗೆಯು ವಿಪರೀತವಾದ ದಿನಗಳಲ್ಲಿ 40ರಿಂದ 45 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವ ಕಲಬುರಗಿ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ (ನರೇಗಾ) ನೆಟ್ಟಿದ್ದ 68 ಸಾವಿರಕ್ಕೂ ಅಧಿಕ ಸಸಿಗಳು ಇಂದು ಹೆಮ್ಮರವಾಗಿ ತಂಪು ನೀಡುತ್ತಿವೆ. ಆ ಮೂಲಕ ಯೋಜನೆಯ ಆಶಯ ಈಡೇರಿದಂತಾಗಿದೆ.

ಕಲಬುರಗಿಯಿಂದ ಜೇವರ್ಗಿಗೆ ಹೋಗುವ ಹೆದ್ದಾರಿಯ ಎಡಬದಿಯಲ್ಲಿ ಹೊನ್ನಕಿರಣಗಿ ದಾಟಿ ಫಿರೋಜಾಬಾದ್ ಗ್ರಾಮ ಸಮೀಪಿಸುತ್ತಿದ್ದಂತೆಯೇ ಸಾಲಾಗಿ ಬೆಳೆದು ನಿಂತ ಬೇವು, ಹೊಂಗೆ, ಅರಳಿ, ಬಸರಿ, ಬಸವನ ಪಾದ, ಬಿದಿರು, ಗೊಬ್ಬರಗಿಡ, ತಪಸಿ, ನೆಲ್ಲಿ, ನೇರಳೆ ಹಣ್ಣು, ಮಾವು, ನುಗ್ಗೆ, ಸೀತಾಫಲಗಳು ಕಣ್ಮನ ಸೆಳೆಯುತ್ತವೆ. ಅಲ್ಲಿ ನಿಂತಷ್ಟು ಹೊತ್ತೂ ಕಲಬುರಗಿ ಜಿಲ್ಲೆಯಲ್ಲಿ ಇದ್ದೇವೆಯೋ ಇಲ್ಲವೋ ಎನ್ನುವಷ್ಟು ತಂಪು ವಾತಾವರಣ ಅಲ್ಲಿ ನಿರ್ಮಾಣವಾಗಿದೆ.

ADVERTISEMENT

ಇದೆಲ್ಲವೂ ಸಾಧ್ಯವಾಗಿದ್ದು ಅಂದಿನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಅನಿರುದ್ಧ ಶ್ರವಣ್ ಪಿ. (ಈಗ ಕೆಕೆಆರ್‌ಡಿಬಿ ಕಾರ್ಯದರ್ಶಿ), ಹೊನ್ನಕಿರಣಗಿ, ನದಿ ಸಿಣ್ಣೂರ ಗ್ರಾಮ ಪಂಚಾಯಿತಿಗಳ ಪಿಡಿಒಗಳ ಶ್ರಮದಿಂದ. ಇನ್ನೊಬ್ಬ ಮುಖ್ಯ ವ್ಯಕ್ತಿಯೂ ತಮ್ಮ ಆಸಕ್ತಿಯಿಂದ ಈ ಕಾಡನ್ನು ಬೆಳೆಸುವಲ್ಲಿ ಶ್ರಮಿಸಿದ್ದಾರೆ. ಅವರೇ ಹೊನ್ನಕಿರಣಗಿಯ ನರೇಗಾ ಕ್ಷೇತ್ರ ಸಹಾಯಕ ಸದಾಶಿವ ಹೈದ್ರಾ. 2012–13ರಲ್ಲಿ ಕರ್ನಾಟಕ ಇಂಧನ ನಿಗಮಕ್ಕೆ (ಕೆಪಿಸಿ) ಸೇರಿದ 1,500 ಎಕರೆ ಜಾಗ ಪಾಳು ಬಿದ್ದಿತ್ತು. ಅದನ್ನು ನಂತರ ನವೀಕರಿಸಬಹುದಾದ ಇಂಧನ ಮೂಲಗಳ ಅಭಿವೃದ್ಧಿ ನಿಗಮದ ಮೂಲಕ ಸೌರ ವಿದ್ಯುತ್ ಉತ್ಪಾದನೆಗಾಗಿ ಬಳಸುವ ಪ್ರಸ್ತಾವ ಇತ್ತು. ಇದೀಗ 1,000 ಎಕರೆಯನ್ನು ಕೈಮಗ್ಗ ಮತ್ತು ಜವಳಿ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಇಲ್ಲಿ ಕೇಂದ್ರ ಸರ್ಕಾರ ಘೋಷಿಸಿದಂತೆ ಜವಳಿ ಪಾರ್ಕ್ ತಲೆ ಎತ್ತಲಿದೆ.

ಈ ಪ್ರದೇಶದ 16 ಎಕರೆ ಸುತ್ತಳತೆಯಲ್ಲಿ ನರೇಗಾ ಯೋಜನೆಯಡಿ ಸಸಿಗಳನ್ನು ನೆಡಬೇಕು ಎಂಬ ಚಿಂತನೆಯನ್ನು ಅನಿರುದ್ಧ ಶ್ರವಣ್ ಅವರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದ ಗ್ರಾಮದ ಕೂಲಿಕಾರರಲ್ಲಿ ಬಿತ್ತಿದರು. ಅದಕ್ಕೆ ತಗಲುವ ವೆಚ್ಚವನ್ನು ಯೋಜನೆಯ ನಿಧಿಯಿಂದ ಭರಿಸಲಾಗುವುದು ಎಂದು ಭರವಸೆ ತುಂಬಿದರು. ಇಷ್ಟು ಹೇಳಿದ್ದೇ ತಡ ಒಂದು ಹಂತದಲ್ಲಿ ಸುಮಾರು 1,100 ನರೇಗಾ ಕಾರ್ಮಿಕರು ಸಸಿಗಳು ಹಾಗೂ ಬೀಜಗಳನ್ನು ನೆಡಲು ಗುಂಡಿಗಳನ್ನು ತೋಡಿದರು. ಪ್ರತಿ ವರ್ಷದ ಬೇಸಿಗೆಯಲ್ಲಿ ಸದಾಶಿವ ಹೈದ್ರಾ ಅವರು ಟ್ರ್ಯಾಕ್ಟರ್ ಮೂಲಕ ಸಸಿಗಳಿಗೆ ನೀರು ಹರಿಸಿ ಪೋಷಿಸಿದರು.

ಒಂದು ಹಂತದಲ್ಲಿ ತಮ್ಮ ಜೇಬಿನಿಂದಲೇ ಹಣ ಹಾಕಿಯೂ ಸಸಿಗಳನ್ನು ಜೋಪಾನ ಮಾಡಿದ್ದಾರೆ. ಸಸಿಗಳಿಗೆ ನೀರು ಹಾಕುವ ಸಂದರ್ಭದಲ್ಲಿ ಅಕ್ಕಪಕ್ಕದ ಹೊಲದವರು ಟ್ರ್ಯಾಕ್ಟರ್ ಕೊಂಡೊಯ್ಯಲು ಅಡ್ಡಿಪಡಿಸಿದ ಘಟನೆಯೂ ನಡೆಯಿತು. ಇದೆಲ್ಲವನ್ನೂ ಮೀರಿ ಇಂದು 68 ಸಾವಿರ ಮರಗಳು ಎದ್ದು ನಿಂತಿವೆ. ತಾವು ಸಿಇಒ ಆಗಿದ್ದಾಗ ಸಾಧ್ಯವಾದ ಈ ಸಾರ್ಥಕ ಕೆಲಸವನ್ನು ನೋಡಿ ಕಣ್ತುಂಬಿಕೊಳ್ಳಲು ಅನಿರುದ್ಧ ಶ್ರವಣ್ ಅವರು ಆಗಾಗ ಇಲ್ಲಿಗೆ ಭೇಟಿ ಕೊಡುತ್ತಾರೆ. ಜಿಲ್ಲೆಯ ಬೇರೆಡೆ ತಾಪಮಾನ ಹೆಚ್ಚಾಗಿದ್ದರೆ, ಮರಗಳನ್ನು ನೆಟ್ಟಿರುವ ಪ್ರದೇಶದಲ್ಲಿ ತಾಪಮಾನ ಅಳೆದರೆ ಒಂದೆರಡು ಡಿಗ್ರಿ ಸೆಲ್ಸಿಯಸ್ ಕಡಿಮೆ ದಾಖಲಾಗುತ್ತದೆ. ಇದಕ್ಕಿಂತ ಹೆಚ್ಚಿನ ನೆಮ್ಮೆದಿ ಇನ್ನೇನು ಬೇಕು ಎನ್ನುತ್ತಾರೆ ಸದಾಶಿವ ಹೈದ್ರಾ.

ಕಲಬುರಗಿ ತಾಲ್ಲೂಕಿನ ನದಿಸಿಣ್ಣೂರ ಫಿರೋಜಾಬಾದ್ ಬಳಿಯಲ್ಲಿ ಜವಳಿ ಪಾರ್ಕ್ ನಿರ್ಮಣವಾಗುವ ಸ್ಥಳದಲ್ಲಿ ನರೇಗಾ ಯೋಜನೆಯಡಿ ಬೆಳೆದ ಮರಗಳನ್ನು ಸದಾಶಿವ ಹೈದ್ರಾ ವೀಕ್ಷಿಸಿದರು –ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಕಲಬುರಗಿ ತಾಲ್ಲೂಕಿನ ನದಿಸಿಣ್ಣೂರ ಫಿರೋಜಾಬಾದ್ ಬಳಿಯಲ್ಲಿ ಜವಳಿ ಪಾರ್ಕ್ ನಿರ್ಮಾಣವಾಗುವ ಸ್ಥಳದಲ್ಲಿ ನರೇಗಾ ಯೋಜನೆಯಡಿ ಬೆಳೆಸಲಾದ ಮರಗಳು –ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.