ADVERTISEMENT

ವಸತಿ ಹಗರಣದ ನ್ಯಾಯಾಂಗ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 14:54 IST
Last Updated 21 ಜೂನ್ 2025, 14:54 IST
ಸುಭಾಷ ಗುತ್ತೇದಾರ
ಸುಭಾಷ ಗುತ್ತೇದಾರ   

ಕಲಬುರಗಿ: ‘ರಾಜೀವ ಗಾಂಧಿ ವಸತಿ ನಿಗಮದಿಂದ ಮನೆಗಳ ಹಂಚಿಕೆಯಲ್ಲಿ ನಡೆದಿರುವ ಭ್ರಷ್ಟಾಚಾರ ಆರೋಪದ ಕುರಿತು ಸರ್ಕಾರ ಕರ್ನಾಟಕ ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು. ಅವ್ಯವಹಾರದ ತನಿಖೆ ನಡೆಸುವಂತೆ ಬಿ.ಆರ್‌.ಪಾಟೀಲರೂ ಒತ್ತಾಯಿಸಬೇಕು. ಇಲ್ಲವೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ಆಳಂದ ಮಾಜಿ ಶಾಸಕ ಸುಭಾಷ ಗುತ್ತೇದಾರ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ 224 ಶಾಸಕರ ಪೈಕಿ ಆಳಂದ ಶಾಸಕ ಬಿ.ಆರ್‌.ಪಾಟೀಲ ಅತಿ ಭ್ರಷ್ಟರು. ಅವರು ಹೇಳೋದೊಂದು ನಡೆಯೋದೊಂದು, ಮಾಡೋದೊಂದು. ತಮಗೆ ಪಾಲು ಸಿಕ್ಕಿಲ್ಲವೆಂದು ಬಿ.ಆರ್‌.ಪಾಟೀಲ ಸತ್ಯಸಂಧನ ವೇಷಧರಿಸಿ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಸಚಿವ ಸ್ಥಾನ ಪಡೆಯಲು ಸರ್ಕಾರವನ್ನು ಹೀಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಆಳಂದ ಕ್ಷೇತ್ರದಲ್ಲಿ ಬಿ.ಆರ್‌.ಪಾಟೀಲ ನಾಮಕಾವಾಸ್ತೆ ಶಾಸಕರಾಗಿದ್ದಾರೆ. ಎಲ್ಲ ಕ್ಷೇತ್ರಗಳಿಗೆ ತಮ್ಮ ಆಪ್ತರನ್ನು ನೇಮಿಸಿದ್ದಾರೆ. ಅವರೆಲ್ಲ ಪ್ರತಿಯೊಂದು ಕಾಮಗಾರಿಗೂ ಕಮಿಷನ್‌ ಮಾತನಾಡಿ, ಅದನ್ನು ಅವರ ಅಣ್ಣನ ಮಗ, ಕೆಎಂಎಫ್‌ ಕಲಬುರಗಿ ಒಕ್ಕೂಟದ ಅಧ್ಯಕ್ಷ ಆರ್‌.ಕೆ.ಪಾಟೀಲ ಅವರಿಗೆ ಸಲ್ಲಿಸುತ್ತಾರೆ’ ಎಂದು ಗಂಭೀರ ಆರೋಪ ಮಾಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.