ADVERTISEMENT

ಗುಲಬರ್ಗಾ ವಿವಿಯ 250 ಎಕರೆ ಮೇಲೆ ಕಣ್ಣು

‘ಎನ್‌ಒಸಿ’ ಕೊಡುವಂತೆ ಭಾರಿ ಒತ್ತಡ: ಇಕ್ಕಟ್ಟಿನಲ್ಲಿ ಆಡಳಿತ ಮಂಡಳಿ

ಮಲ್ಲಿಕಾರ್ಜುನ ನಾಲವಾರ
Published 23 ಏಪ್ರಿಲ್ 2025, 4:52 IST
Last Updated 23 ಏಪ್ರಿಲ್ 2025, 4:52 IST
 ಗುಲಬರ್ಗಾ ವಿಶ್ವವಿದ್ಯಾಲಯದ ಜ್ಞಾನಗಂಗಾ ಕ್ಯಾಂಪಸ್‌
 ಗುಲಬರ್ಗಾ ವಿಶ್ವವಿದ್ಯಾಲಯದ ಜ್ಞಾನಗಂಗಾ ಕ್ಯಾಂಪಸ್‌   

ಕಲಬುರಗಿ: ವಿಮಾನ ನಿಲ್ದಾಣದ ರಸ್ತೆಯಲ್ಲಿರುವ ಗುಲಬರ್ಗಾ ವಿಶ್ವವಿದ್ಯಾಲಯದ ‘ಜ್ಞಾನಗಂಗಾ’ ಕ್ಯಾಂಪಸ್‌ನ ನೂರಾರು ಎಕರೆ ಜಾಗದ ಮೇಲೆ ಸರ್ಕಾರದ ಹತ್ತಾರು ಇಲಾಖೆ, ಮಂಡಳಿ, ಸರ್ಕಾರಿ ಸ್ವಾಮ್ಯದ ಸಂಘ– ಸಂಸ್ಥೆಗಳ ಕಣ್ಣುಬಿದ್ದಿದೆ.

ಸ್ಪೋರ್ಟ್ ಸಿಟಿ ಮತ್ತು ಸ್ಪೋರ್ಟ್ ಹಬ್‌ ನಿರ್ಮಾಣ ಸೇರಿದಂತೆ ಇತರೆ ಕಚೇರಿಗಳ ಕಟ್ಟಡಗಳಿಗಾಗಿ ಸೇಡಂ ರಸ್ತೆ ಬದಿಯ 70 ಎಕರೆಗೆ ತ್ವರಿತವಾಗಿ ನಿರಾಕ್ಷೇಪಣೆ ಪ್ರಮಾಣಪತ್ರ (ಎನ್‌ಒಸಿ) ಕೊಡುವಂತೆ ವಿವಿಯ ಆಡಳಿತ ಮಂಡಳಿಯ ಮೇಲೆ ಹಿರಿಯ ಅಧಿಕಾರಿಗಳ ಭಾರಿ ಒತ್ತಡ ಬರುತ್ತಿದೆ. ಕೆಲ ಜನಪ್ರತಿನಿಧಿಗಳೂ ಎನ್‌ಒಸಿಗೆ ತಾಕೀತು ಮಾಡುತ್ತಿದ್ದು, ಕೆಲವು ಸಿಂಡಿಕೇಟ್ ಸದಸ್ಯರೂ ಇದಕ್ಕೆ ಧ್ವನಿಗೂಡಿಸುತ್ತಿದ್ದಾರೆ ಎಂದು ವಿವಿಯ ಆಡಳಿತ ಮಂಡಳಿ ಆತಂಕ ವ್ಯಕ್ತಪಡಿಸಿದೆ.

ವಿವಿಯು ಈಗಾಗಲೇ ಇಎಸ್‌ಐ ಆಸ್ಪತ್ರೆಗೆ 50 ಎಕರೆ, ಜಿಟಿಟಿಸಿಯ ಬಹುಕೌಶಲ ಅಭಿವೃದ್ಧಿ ಕೇಂದ್ರಕ್ಕೆ 20 ಎಕರೆ, ಪಂಡಿತ್ ದೀನದಯಾಳ್ ಉಪಾಧ್ಯಾಯ ವಸತಿ ನಿಲಯ ಸೇರಿ ನಾನಾ ಉದ್ದೇಶಕ್ಕೆ ಜಾಗವನ್ನು ನೀಡಿದೆ. ಮತ್ತಷ್ಟು ಸ್ಥಳಕ್ಕಾಗಿ ಬೇಡಿಕೆಗಳ ಮಹಾಪುರವೇ ಹರಿದು ಬರುತ್ತಿದೆ.

ADVERTISEMENT

ವಿವಿಯ ಜಾಗದ ಬೇಡಿಕೆಯು ಹೀಗೆಯೇ ಮುಂದುವರಿದರೆ ಹಸಿರು ಸಂಪತ್ತಿನ ಶೈಕ್ಷಣಿಕ ಕ್ಯಾಂಪಸ್‌ ಕಾಂಕ್ರೀಟ್ ಕಾಡಾಗಿ ಪರಿವರ್ತನೆಗೊಳ್ಳಲಿದೆ. ಕಲಿಕಾ ಚಟುವಟಿಕೆಗಳು ಮರೆಯಾಗಲಿವೆ ಎಂಬ ಆತಂಕ ಶಿಕ್ಷಣ ತಜ್ಞರದ್ದು.

ಯಾರಿಂದ, ಎಷ್ಟು ಎಕರೆಗೆ ಬೇಡಿಕೆ?: ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ 70 ಎಕರೆ, ಸ್ಪೋರ್ಟ್ ಸಿಟಿ ಮತ್ತು ಸ್ಪೋರ್ಟ್ ಹಬ್‌ಗೆ 50 ಎಕರೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 25 ಎಕರೆ, ಕಲ್ಯಾಣ ಕರ್ನಾಟಕ ಮಾನವ ಅಭಿವೃದ್ಧಿ, ಕೃಷಿ ಮತ್ತು ಸಾಂಸ್ಕೃತಿಕ ಸಂಘ ಮತ್ತು ಎಂಜಿನಿಯರಿಂಗ್ ಕಾಲೇಜಿಗೆ ತಲಾ 20 ಎಕರೆ, ಅಗ್ನಿಶಾಮಕ ಠಾಣೆ ಹಾಗೂ ವಿಜ್ಞಾನೇಶ್ವರ ಕಾನೂನು ಕಾಲೇಜಿಗೆ ತಲಾ 15 ಎಕರೆ, ಗಾಂಧಿ ಭವನಕ್ಕೆ 10 ಎಕರೆ, ವಚನ ಮಂಟಪ, ಪೊಲೀಸ್ ಠಾಣೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿವಿಗೆ ತಲಾ 5 ಎಕರೆ, ಸ್ಯಾಟ್‌ಲೈಟ್ ಬಸ್ ನಿಲ್ದಾಣಕ್ಕೆ 3ರಿಂದ 5 ಎಕರೆ, ಜಿಲ್ಲಾ ಪಂಚಾಯಿತಿ ಕಚೇರಿ ನಿರ್ಮಾಣಕ್ಕೆ 3 ಎಕರೆ ಸೇರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೂ ಒಳಗೊಂಡು 250ಕ್ಕೂ ಹೆಚ್ಚು ಎಕರೆ ಕೊಡುವಂತೆ ಬೇಡಿಕೆಗಳ ಪತ್ರಗಳು ಬರುತ್ತಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡರು.

ನಿರಾಕರಣೆಯ ಪ್ರತ್ಯುತ್ತರ: ‘ಜ್ಞಾನಗಂಗಾ ಕ್ಯಾಂಪಸ್‌ನ ಜಾಗವು ಶೈಕ್ಷಣಿಕ ಉದ್ದೇಶಕ್ಕಾಗಿ ಮೀಸಲಿಡಲಾಗಿದೆ. ಸರ್ಕಾರಿ ಕಚೇರಿಗಳು, ಕ್ರೀಡಾಂಗಣ, ಅಗ್ನಿಶಾಮಕ, ಬಸ್ ನಿಲ್ದಾಣದಂತಹ ಸಾರ್ವಜನಿಕರ ಓಡಾಟಕ್ಕೆ ಕೊಟ್ಟರೆ ವಿದ್ಯಾರ್ಥಿಗಳ ಶೈಕ್ಷಣಿಕ ಪರಿಸರ ಹಾಳಾಗುತ್ತದೆ. ಮುಂದಿನ ದಿನಗಳಲ್ಲಿ ಶೈಕ್ಷಣಿಕ ವಿಭಾಗಗಳನ್ನು ವಿಸ್ತರಣೆ ಮಾಡಲು ಇದರಿಂದ ಅಡ್ಡಿಯಾಗುತ್ತದೆ. ಹೀಗಾಗಿ, ಶೈಕ್ಷಣಿಕ ಉದ್ದೇಶಕ್ಕಾಗಿ ಇರುವ ಜಾಗವನ್ನು ಕೊಡಲು ಬರುವುದಿಲ್ಲ ಎಂದು ಪ್ರತ್ಯುತ್ತರ ಬರೆಯಲಾಗಿದೆ. ಆದರೂ ಅಧಿಕಾರಿಗಳ ಮತ್ತು ಪ್ರಭಾವಿಗಳ ಒತ್ತಡ ನಿಲ್ಲುತ್ತಿಲ್ಲ. ಜ್ಞಾನಗಂಗಾ ಕ್ಯಾಂಪಸ್ ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವಿವಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾಲ್ಕು ವರ್ಷಗಳ ಹಿಂದೆಯೇ ಯಾವುದೇ ಕಾರಣಕ್ಕೂ ಶೈಕ್ಷಣಿಕ ಅಲ್ಲದ ಚಟುವಟಿಕೆಗಳಿಗೆ ವಿವಿಯ ಜಾಗವನ್ನು ಕೊಡಬಾರದು ಎಂಬ ನಿರ್ಣಯವನ್ನು ಸಿಂಡಿಕೇಟ್‌ ಸಭೆಯಲ್ಲಿ ತೆಗೆದುಕೊಳ್ಳಲಾಗಿತ್ತು. ಪ್ರಸ್ತುತ ಇರುವ ಕೆಲವು ಸದಸ್ಯರು ಅಧಿಕಾರಿ ಮತ್ತು ರಾಜಕಾರಣಿಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಜಾಗ ಕೊಡುವಂತೆ ದುಂಬಾಲು ಬಿದ್ದಿದ್ದಾರೆ. ಜಾಗ ಕೊಡಲು ನಿಮ್ಮದು ಏನು ಗಂಟು ಹೋಗುತ್ತೆ? ಮುಂದೆ ಏನಾದರೂ ಆಗಲಿ, ಈಗ ಕೊಡುವಂತೆ ಹೆದರಿಸುತ್ತಿದ್ದಾರೆ’ ಎಂದು ಅಲವತ್ತುಕೊಂಡರು.

- ‘ಜಾಗ ಉಳಿಸಿಕೊಳ್ಳಲು ಶಕ್ತಿ ಮೀರಿ ಪ್ರಯತ್ನ’

‘ವಿಶ್ವವಿದ್ಯಾಲಯದ ಜಾಗವನ್ನು ಕೊಡುವಂತೆ ಸಾಕಷ್ಟು ಬೇಡಿಕೆಗಳು ಬರುತ್ತಿವೆ. ಜತೆಗೆ ಶೈಕ್ಷಣಿಕ ಬಿಟ್ಟು ಅನ್ಯ ಕಾರ್ಯಕ್ಕೆ ನೀಡದಂತೆ ಕೆಲವು ಸಂಘಟನೆಗಳು ಮನವಿ ಮಾಡುತ್ತಿವೆ. ಎಲ್ಲ ಬಗೆಯ ಒತ್ತಡವನ್ನು ಮೀರಿ ಕ್ಯಾಂಪಸ್‌ನ ಜಾಗವನ್ನು ಉಳಿಸಿಕೊಳ್ಳಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ’ ಎಂದು ಗುಲಬರ್ಗಾ ವಿವಿ ಪ್ರಭಾರ ಕುಲಪತಿ ಪ್ರೊ.ಜಿ. ಶ್ರೀರಾಮುಲು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಸ್ಪೋರ್ಟ್ ಸಿಟಿ ನಿರ್ಮಾಣಕ್ಕೆ ಸೇಡಂ ರಸ್ತೆ ಬದಿಯ ಜಾಗ ಕೇಳುತ್ತಿದ್ದಾರೆ. ಈ ಭಾಗದಲ್ಲಿ ಸಾಕಷ್ಟು ಗಿಡ–ಮರಗಳು ಕೊಳವೆ ಬಾವಿಗಳು ತೆರೆದ ಬಾವಿಗಳಿವೆ. ದಶಕಗಳಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಸ್ಯ ಉದ್ಯಾನ ಅಭಿವೃದ್ಧಿಪಡಿಸಲಗಿದೆ. ಈಗ ಜಾಗ ಬಿಟ್ಟುಕೊಟ್ಟರೆ ವಿವಿಯ ಸಂಪತ್ತಿಗೆ ಧಕ್ಕೆ ಆಗುವ ಆತಂಕವಿದೆ. ಕೊಡಲು ಆಗುವುದಿಲ್ಲ ಎಂದರೂ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿ ಹೋಗಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.