ADVERTISEMENT

ಯೋಜನೆ ಜಾರಿಯಲ್ಲಿ ತಪ್ಪಾದರೆ ಜೈಲು ಶಿಕ್ಷೆ; ಎಂ. ಶಿವಣ್ಣ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 3:59 IST
Last Updated 30 ಸೆಪ್ಟೆಂಬರ್ 2022, 3:59 IST
ಕಲಬುರಗಿ ನಗರದಲ್ಲಿ ಗುರುವಾರ ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಎಂ. ಶಿವಣ್ಣ (ಕೋಟೆ), ಕೆ.ಪಿ.ವೆಂಕಟೇಶ, ಮಲ್ಲಿಕಾರ್ಜುನ ಕೆ.ಬಿ., ಗೀತಾ ರಾಜು ವಾಡೇಕರ್, ಚಂದ್ರಕಲಾ, ಪಿ.ಶುಭಾ ಇದ್ದರು
ಕಲಬುರಗಿ ನಗರದಲ್ಲಿ ಗುರುವಾರ ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಎಂ. ಶಿವಣ್ಣ (ಕೋಟೆ), ಕೆ.ಪಿ.ವೆಂಕಟೇಶ, ಮಲ್ಲಿಕಾರ್ಜುನ ಕೆ.ಬಿ., ಗೀತಾ ರಾಜು ವಾಡೇಕರ್, ಚಂದ್ರಕಲಾ, ಪಿ.ಶುಭಾ ಇದ್ದರು   

ಕಲಬುರಗಿ: ‘ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಪದ್ಧತಿ ನಿರ್ಮೂಲನೆ ಮಾಡುವಲ್ಲಿ ಸಫಾಯಿ ಕರ್ಮ
ಚಾರಿಗಳಿಗಾಗಿ ಮೀಸಲಾದ ಯೋಜನೆಗಳ ಜಾರಿಯಲ್ಲಿ ಅಧಿಕಾರಿಗಳು ತಪ್ಪು ಎಸಗಿದ್ದು ಕಂಡುಬಂದಲ್ಲಿ ಜೈಲು ಶಿಕ್ಷೆಗೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದುಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ. ಶಿವಣ್ಣ (ಕೋಟೆ) ಎಚ್ಚರಿಸಿದರು.

ನಗರದ ಡಾ. ಎಸ್‌.ಎಂ ಪಂಡಿತ್ ರಂಗ
ಮಂದಿರದಲ್ಲಿ ಗುರುವಾರ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಹಾಗೂ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಫಾಯಿ ಕರ್ಮಚಾರಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು
ಮಾತನಾಡಿದರು.

‘ಸಫಾಯಿ ಕರ್ಮಚಾರಿಗಳಿಗೆ ಗೌರವಯುತ ಜೀವನ ಕಲ್ಪಿಸುವ ಉದ್ದೇಶದಿಂದ ಆಯೋಗದ ಅಧ್ಯಕ್ಷರಿಗೆ ಸಚಿವ ಸಂಪುಟದ ಸ್ಥಾನಮಾನ ನೀಡಿ, ಒಬ್ಬ ನ್ಯಾಯಾಧೀಶರಿಗೆ ಇರುವಷ್ಟು ಅಧಿಕಾರವನ್ನು ಕೊಡಲಾಗಿದೆ’ ಎಂದರು.

ADVERTISEMENT

‘ಪೌರಕಾರ್ಮಿಕರನ್ನು ಗುತ್ತಿಗೆದಾರರು ಮತ್ತು ಅಧಿಕಾರಿಗಳು ಗೌರವದಿಂದ ಕಾಣಬೇಕು. ಅವರಿಗಾಗಿ ಜಾರಿಯಾದ ಪನರ್‌ವಸತಿ, ಶೈಕ್ಷಣಿಕ, ಆರ್ಥಿಕ ಸೌಕರ್ಯಗಳು ಸಮರ್ಪಕವಾಗಿ ಲಭ್ಯವಾಗಬೇಕು. ಒಂದು ವೇಳೆ ಅಧಿಕಾರಿಗಳು ತಪ್ಪು ಮಾಡಿದರೆ, ಆಯೋಗದ ಮುಂದೆ ಕರೆಯಿಸಿ ವಿಚಾರಣೆ ಮಾಡಿ ಜೈಲಿಗೆ ಕಳುಹಿಸಲಾಗುವುದು’ ಎಂದು ಎಚ್ಚರಿಸಿದರು.

‘ಪೌರ ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯಗಳು ಸಿಗುತ್ತಿಲ್ಲ, ಅವರು ಮುಖ್ಯವಾಹಿನಿಗೆ ಬರುತ್ತಿಲ್ಲ ಎಂಬ ಉದ್ದೇಶದಿಂದ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಸಫಾಯಿ ಕರ್ಮಚಾರಿಗಳ ಮಕ್ಕಳು ಸಹ ಕೆಎಎಸ್‌, ಐಎಎಸ್ ಪರೀಕ್ಷೆಗಳನ್ನು ಬರೆದು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಶಿಕ್ಷಣ ಪಡೆದು ಸಮಾಜದಲ್ಲಿ ಮುಂದೆ ಬರಬೇಕು’ ಎಂದು ಸಲಹೆ ನೀಡಿದರು.

ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಕೆ.ಪಿ.ವೆಂಕಟೇಶ ಮಾತನಾಡಿ, ‘ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ, ಒಳ್ಳೆಯ ಸ್ಥಾನ ಸಿಗುವಂತೆ ಮಾಡಬೇಕು. ನಿಗಮದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದರು.

ಎಸ್ಸೆಸ್ಸೆಲ್ಸಿಯಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಸನ್ಮಾನಿಸಲಾಯಿತು. ಕಾಲೇಜು ವಿದ್ಯಾರ್ಥಿಗಳಿಗೆ ಟ್ಯಾಬ್‌ ಮತ್ತು ಐವರು ಪೌರಕಾರ್ಮಿಕರಿಗೆ ವಾಹನ ವಿತರಿಸಿಲಾಯಿತು.

ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಕೆ.ಬಿ., ಆಯೋಗದ ಸದಸ್ಯೆ ಗೀತಾ ರಾಜು ವಾಡೇಕರ್, ಕಾರ್ಯದರ್ಶಿ ಚಂದ್ರಕಲಾ, ಪಾಲಿಕೆ ಉಪ ಆಯುಕ್ತ ಪ್ರಕಾಶ್ ರಜಪೂತ, ಯೋಜನಾ ನಿರ್ದೇಶಕ ಶರಣಬಸಪ್ಪ ಬೆಣ್ಣೂರು, ಜಿ.ಪಂ. ಉಪ ಕಾರ್ಯದರ್ಶಿ ಬಿ.ಎಸ್ ರಾಠೋಡ, ಜಿಲ್ಲಾ ಸಫಾಯಿ ಕರ್ಮಚಾರಿಗಳ ಸಲಹಾ ಸಮಿತಿ ಸದಸ್ಯೆ ನರ್ಮದಾ ಹಠವಾಲ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭಾ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.