ಕಲಬುರಗಿ: ‘ಈಶಾನ್ಯ ಕರ್ನಾಟಕ ಪದವೀಧರ ಮತಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅಮರನಾಥ್ ಪಾಟೀಲ ಅವರು ಶೈಕ್ಷಣಿಕ ವಿದ್ಯಾರ್ಹತೆ ಬಗ್ಗೆ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ’ ಎಂದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಶರಣ ಐಟಿ ಆರೋಪಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಕುರಿತು ಚುನಾವಣಾ ಆಯೋಗದ ಅಧಿಕಾರಿಗೆ ದೂರು ನೀಡಿದರೂ ಸಹ ಬಿಜೆಪಿ ಅಭ್ಯರ್ಥಿಯ ನಾಮಪತ್ರ ಸ್ವೀಕಾರ ಮಾಡಿದ್ದಾರೆ. ಮೊದಲ ಬಾರಿ ಸ್ಪರ್ಧಿಸಿದಾಗ ಬಿ.ಕಾಂ ಕೊನೆಯ ವರ್ಷ ಎಂದು ಅಫಿಡೇವಿಟ್‌ನಲ್ಲಿ ಸಲ್ಲಿಸಿದ್ದಾರೆ. ಈಗ ಬಿ.ಕಾಂ ಪದವಿ ಮುಗಿದಿದೆ ಎಂದು ಅಫಿಡೇವಿಟ್ ಸಲ್ಲಿಸಿದ್ದಾರೆ’ ಎಂದು ದೂರಿದರು.
ಇದೇ ವೇಳೆ ತಮ್ಮ ಪ್ರಣಾಳಿಕೆ ಬಗ್ಗೆ ಮಾಹಿತಿ ಹಂಚಿಕೊಂಡ ಅವರು, ‘ಕೈಗಾರಿಕಾ ಅಭಿವೃದ್ಧಿಗೆ ಒತ್ತು ನೀಡಿ ನಿರುದ್ಯೋಗ ಹೋಗಲಾಡಿಸುವುದು. ಶಿಕ್ಷಣ ವ್ಯವಸ್ಥೆ ಸುಧಾರಣೆ, ಪಾರದರ್ಶಕ ಶಿಕ್ಷಕರ ವರ್ಗಾವಣೆ ನೀತಿ ಜಾರಿ ಮಾಡಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿನ ಹುದ್ದೆಗಳ ನೇಮಕಕ್ಕೆ ಪ್ರಯತ್ನ ಮಾಡಲಾಗುವುದು. ಇಲ್ಲಿನ ಲಕ್ಷಾಂತರ ಜನರು ಕೆಲಸ ಅರಿಸಿ ಬೇರೆಕಡೆ ಹೋಗುತ್ತಿದ್ದಾರೆ. ಇಲ್ಲಿಯೇ ಐಟಿ ಕಂಪನಿಗಳ ಸ್ಥಾಪನೆಗೆ ಒತ್ತು ನೀಡುವುದು, 371 (ಜೆ) ಅಭಿವೃದ್ಧಿ ಕೋಶ ಸ್ಥಾಪನೆ, ಕಿರಿಯ ವಕೀಲರ ಅಕಾಡೆಮಿ ಸ್ಥಾಪನೆ ಮಾಡಲು ಆದ್ಯತೆ ನೀಡಲಾಗುವುದು’ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸುಭಾಷ್ ಕಪಾಟೆ, ಸಂಜೀವಕ ಕರೆಕಲ್ಲ, ಶರಣಕುಮಾರ್ ಕುಂಬಾರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.