ADVERTISEMENT

ನ.1ರೊಳಗೆ ಸಿದ್ಧಸಿರಿ ಇಥೆನಾಲ್‌ ಕಾರ್ಖಾನೆ ಆರಂಭಿಸದಿದ್ದರೆ ಧರಣಿ: ಜಗದೀಶ ಪಾಟೀಲ

ಸಿದ್ಧಸಿರಿ ಇಥೆನಾಲ್‌ ಕಾರ್ಖಾನೆ ಪ್ರಾರಂಭಿಸಲು ರೈತರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 14:35 IST
Last Updated 25 ಅಕ್ಟೋಬರ್ 2024, 14:35 IST
ಜಗದೀಶ್‌ ಪಾಟೀಲ ರಾಜಾಪೂರ
ಜಗದೀಶ್‌ ಪಾಟೀಲ ರಾಜಾಪೂರ   

ಕಲಬುರಗಿ: ‘ನ.1ರೊಳಗೆ ಚಿಂಚೋಳಿಯ ಸಿದ್ಧಸಿರಿ ಇಥೆನಾಲ್‌ ಕಾರ್ಖಾನೆ ಪ್ರಾರಂಭಿಸಬೇಕು. ಇಲ್ಲದಿದ್ದರೆ ನ.4ರಿಂದ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹ ಪ್ರಾರಂಭಿಸಲಾಗುವುದು’ ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷ ಜಗದೀಶ ಪಾಟೀಲ ರಾಜಾಪೂರ ತಿಳಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಬ್ಬು ನುರಿಸುವ ಕಾರ್ಯ ಪ್ರಾರಂಭಿಸಲು ಕಾರ್ಖಾನೆ ಅನುಮತಿ ನೀಡಬೇಕು ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೈಕೋರ್ಟ್‌ ಸ್ಪಷ್ಟ ಆದೇಶ ನೀಡಿದೆ. ಆದರೂ ಮಂಡಳಿ ಅನುಮತಿ ನೀಡದೇ ನ್ಯಾಯಾಲಯದ ಆದೇಶ ಉಲ್ಲಂಘಿಸುತ್ತಿದೆ. ಇದರಿಂದ ಸುಮಾರು 30 ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆದ ಸಾವಿರಾರು ರೈತರು ಮತ್ತು ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಅವರು ಬೇಸರಿಸಿದರು.

ಕಾರ್ಖಾನೆ ಪ್ರಾರಂಭಿಸುವಂತೆ ಮುಖ್ಯಮಂತ್ರಿ, ಸಚಿವರುಗಳಿಗೆ ಮನವಿ ಸಲ್ಲಿಸಿ ನಾವು ರೋಸಿಹೋಗಿದ್ದೇವೆ. ಹೀಗಾಗಿ ರೈತರು ಉಗ್ರ ಹೋರಾಟಕ್ಕೆ ನಿರ್ಧರಿಸಿದ್ದಾರೆ. ನ.4ರಿಂದ ಹಳ್ಳಿ, ಹಳ್ಳಿಗಳಲ್ಲಿ ರೈತರು ಹೋರಾಟಕ್ಕೆ ಇಳಿಯಲಿದ್ದಾರೆ. ನಮ್ಮ ಹೋರಾಟದಲ್ಲಿ ಏನಾದರೂ ಅನಾಹುತಗಳು ಸಂಭವಿಸಿದಲ್ಲಿ ಸರ್ಕಾರವೇ ಹೊಣೆಯಾಗುತ್ತದೆ’ ಎಂದು ಅವರು ಎಚ್ಚರಿಸಿದ್ದಾರೆ.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ಪಾಟೀಲ ಅಂಕಲಗಿ, ಶಾಂತವೀರ ಪಾಟೀಲ ದಸ್ತಾಪೂರ, ಧರ್ಮರಾಜ ಸಾಹು, ಶಾಂತವೀರಪ್ಪ ಕಲಬುರಗಿ ಹೆಬ್ಬಾಳ, ಶರಣು ಬಿಲ್ಲಾಡ, ನಾಗೀಂದ್ರರಾವ ದೇಶಮುಖ, ಶರಣಬಸಪ್ಪ ರಟಕಲ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.