ADVERTISEMENT

ಹಲ್ಲೆ: ಮಹಿಳಾ ಠಾಣೆ ಪೊಲೀಸರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 3:16 IST
Last Updated 25 ನವೆಂಬರ್ 2020, 3:16 IST

ಕಲಬುರ್ಗಿ: ನಗರದ ಮಹಿಳಾ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಮತ್ತು ಕಾನ್‌ಸ್ಟೆಬಲ್ ವಿರುದ್ಧ ಇಲ್ಲಿನ ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಯುವಕನ ತಂದೆಗೆ ಥಳಿಸಿದ ಆರೋಪದ ಮೇರೆಗೆ ಪ್ರಕರಣ ದಾಖಲಾಗಿದ್ದು, ವಿಜಯಪುರ ಜಿಲ್ಲೆ ಇಂಡಿ ಪಟ್ಟಣದ ತುಕಾರಾಮ ದೂರು ನೀಡಿದ್ದಾರೆ.

ಯುವತಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆದ ವೇಳೆಯಲ್ಲಿ ಮಹಿಳಾ ಠಾಣೆಯ ಮಹಿಳಾ ಕಾನ್‌ಸ್ಟೆಬಲ್ ಜತೆಗೆ ತುಕಾರಾಮ ಇತರರು ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲದೆ ಎಳೆದಾಡಿ ಹಲ್ಲೆಗೆ ಮುಂದಾಗಿದ್ದಾರೆ ಎಂದು ಇನ್ನೊಂದು ದೂರು ಸಹ ದಾಖಲಾಗಿದೆ.

ಕಲಬುರ್ಗಿಯ ಯುವತಿ, ಇಂಡಿಯ ಯುವಕನ ನಡುವೆ ಪ್ರೀತಿ ಚಿಗುರಿತ್ತು. ಈ ಬಗ್ಗೆ ಯುವತಿ ಪೋಷಕರು ನೀಡಿದ ದೂರಿನ ಅನ್ವಯ ಯುವಕನ ಪೋಷಕರನ್ನು ಕರೆಸಿ ವಿಚಾರಣೆ ನಡೆಸಲಾಗಿತ್ತು. ಪೊಲೀಸ್ ಹೊಡೆತದಿಂದ ಗಾಯಗೊಂಡಿರುವ ತುಕಾರಾಮ ಜಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ರಕ್ಷಣೆ ನೀಡಲು ಒತ್ತಾಯ

ಕಲಬುರ್ಗಿ: ಪ್ರೇಮಿಗಳಿಬ್ಬರು ಮದುವೆಯಾದ ಪ್ರಕರಣದ ನಿಮಿತ್ತ ಯುವತಿಯ ಹೆತ್ತವರು ಕಲಬುರ್ಗಿ ಮಹಿಳಾ ಪೋಲಿಸ್ ಠಾಣೆಗೆ ದೂರನ್ನು ಕೊಟ್ಟಿದ್ದು, ವಿಜಯಪುರ ಜಿಲ್ಲೆಯಲ್ಲಿರುವ ಯುವಕನ ಹೆತ್ತವರನ್ನು ವಿಚಾರಣೆಯ ಹೆಸರಿನಲ್ಲಿ ಕರೆಸಿ ಅವರ ಮೇಲೆ ದೈಹಿಕ ಹಲ್ಲೆ ಮಾಡಿದ್ದಾರೆಂದು ಯುವಕನ ತಾಯಿಯು ದೂರಿದ್ದು, ಪೊಲೀಸರ ಹಲ್ಲೆಯನ್ನು ಸೌಹಾರ್ದ ಭಾರತ ವೇದಿಕೆ ಖಂಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ವೇದಿಕೆ ಸಂಚಾಲಕ ಡಾ.ಕಾಶಿನಾಥ ಅಂಬಲಗಿ, ಪದಾಧಿಕಾರಿಗಳಾದ ಆರ್.ಕೆ. ಹುಡಗಿ, ಡಾ.ಪ್ರಭು ಖಾನಾಪುರೆ, ದತ್ತಾತ್ರೇಯ ಇಕ್ಕಳಕಿ, ಕೆ.ನೀಲಾ, ಮಾರುತಿ ಗೋಖಲೆ, ಅರ್ಜುನ್ ಭದ್ರೆ, ಸುರೇಶ ಮೆಂಗನ್, ಮೆಹರಾಜ್ ಪಟೇಲ್, ಲಕ್ಷ್ಮಿಕಾಂತ ಹುಬಳಿ, ತೀವ್ರ ಹಲ್ಲೆಯ ಕಾರಣವಾಗಿ ತನ್ನ ಪತಿಯು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪತ್ನಿ ಹೇಳಿದ್ದಾರೆ. ಸರ್ಕಾರವು ಲವ್ ಜಿಹಾದ್ ಎಂಬ ನೆಪದಲ್ಲಿ ಬಾಳ ಸಂಗಾತಿಯ ಆಯ್ಕೆಯ ಹಕ್ಕಿಗೆ ಧಕ್ಕೆ ತರುವ ಹುನ್ನಾರ ನಡೆಸುತ್ತಿರುವಾಗ ಪ್ರಜಾಪ್ರಭುತ್ವ ವಿರೋಧಿ ಮನಸುಳ್ಳ ಪೊಲೀಸ್ ಅಧಿಕಾರಿಗಳು ಹೀಗೆ ಹಲ್ಲೆ ಮಾಡುವ ಮೂಲಕ ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತಿರುವುದು ಅತ್ಯಂತ ಅಪಾಯಕಾರಿಯಾದುದು. ಹಲ್ಲೆ ಮಾಡಿದ ಪೋಲಿಸರ ಮೇಲೆ ಕೂಡಲೇ ಕಾನೂನು ಪ್ರಕಾರ ಕ್ರಮ ಕೈಗೊಂಡು ಬಂಧಿಸಬೇಕು. ಮದುವೆಯಾದ ಜೋಡಿಗೆ ಹಾಗೂ ಅವರ ಹೆತ್ತವರಿಗೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.