ಚಿತ್ತಾಪುರ: ‘ಸಾರ್ವಜನಿಕರು ತಮ್ಮ ಆಸ್ತಿಯ ಖಾತಾ ನಕಲಿಗಾಗಿ ಅರ್ಜಿ ಸಲ್ಲಿಸಿದಾಗ ಪುರಸಭೆ ಸಿಬ್ಬಂದಿ ಕ್ರಮಸಂಖ್ಯೆ ಅನುಸಾರ ಖಾತಾ ನಕಲು ನೀಡದೆ ಹಣ ಕೊಡುವ ದಲ್ಲಾಳಿಗಳ ಕೆಲಸಕ್ಕೆ ಮೊದಲ ಆದ್ಯತೆ ನೀಡುತ್ತಿದ್ದಾರೆ’ ಎಂದು ಪುರಸಭೆ ಸದಸ್ಯ ನಾಗರಾಜ ಭಂಕಲಗಿ ಅವರು ಆಡಳಿತ ವ್ಯವಸ್ಥೆಯ ವಿರುದ್ಧ ಗಂಭೀರ ಆರೋಪ ಮಾಡಿದರು.
ಸ್ಥಳೀಯ ಪುರಸಭೆ ಸಭಾಂಗಣದಲ್ಲಿ ಶನಿವಾರ ಜರುಗಿದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷೆ ಅನ್ನಪೂರ್ಣ ನಾಗು ಕಲ್ಲಕ್ ಅವರು, ‘ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಮಹಾನಂದ ಮತ್ತು ವಿಜಯಕುಮಾರ ಅವರು ಭ್ರಷ್ಟಾಚಾರದಲ್ಲಿ ತೊಡಗಿರುವ ಕುರಿತು ದೂರುಗಳು ಬಂದಿವೆ. ಅವರು ನಿರ್ವಹಿಸುತ್ತಿರುವ ಕೆಲಸದಿಂದ ಬಿಡುಗಡೆ ಮಾಡಬೇಕು’ ಎಂದು ಸಭೆಯಲ್ಲಿ ಸೂಚಿಸಿದರು. ಅದಕ್ಕೆ ಧ್ವನಿಗೂಡಿಸಿದ ಸದಸ್ಯ ನಾಗರಾಜ ಅವರು, ‘ಅಧ್ಯಕ್ಷರು ಹೇಳಿರುವುದು ಸರಿಯಿದೆ. ಮೊದಲು ಬಂದ ಅರ್ಜಿ ಬಿಟ್ಟು ನಂತರ ಬಂದ ಅರ್ಜಿಗಳ ವಿಲೇವಾರಿ ಮಾಡುತ್ತಿದ್ದಾರೆ. ಅವರನ್ನು ಕೆಲಸದಿಂದ ತೆಗೆದು ಬೇರೆಯವರಿಗೆ ವಹಿಸಿ’ ಎಂದು ಒತ್ತಾಯಿಸಿದರು.
ತಪ್ಪಾಗಿ ದಾಖಲಿಸಿದ ಸಭೆ ನಡವಳಿ: ತರಕಾರಿ ಮಾರುಕಟ್ಟೆಯಲ್ಲಿ ನಿರ್ಮಿಸಿರುವ ಫುಟ್‌ಪಾತ್ ರಸ್ತೆ ತೆರವು ಮಾಡಿ ರಸ್ತೆ ವಿಸ್ತೀರ್ಣ ಮಾಡಬೇಕು ಎಂದು ಕಳೆದ ಮೇ 15ರಂದು ನಡೆದ ಸಾಮಾನ್ಯ ಸಭೆಯಲ್ಲಿ ಹೇಳಲಾಗಿತ್ತು. ಆದರೆ, ಸಭೆಯ ನಡವಳಿಯಲ್ಲಿ ಫುಟ್‌ಪಾತ್ ರಸ್ತೆ ತೆರವು ಮಾಡುವ ಬದಲಾಗಿ ವಾಹನಗಳ ತೆರವು ಅಂತ ನಡವಳಿಯಲ್ಲಿ ದಾಖಲಿಸಿದ್ದೀರಿ. ಇದು ತಪ್ಪು ಎಂದು ಸದಸ್ಯ ಶ್ರೀನಿವಾಸರೆಡ್ಡಿ ಪಾಲಪ್ ಹಾಗೂ ಸದಸ್ಯೆ ಶೀಲಾ ಕಾಶಿ ಅವರು ಸಭೆಯಲ್ಲಿ ಆಕ್ಷೇಪ ವ್ಯಕ್ತ ಮಾಡಿದರು.
ವಿದ್ಯುತ್ ಕಾಮಗಾರಿ ಗುತ್ತಿಗೆದಾರ ಕಪ್ಪು ಪಟ್ಟಿಗೆ ಸೇರಿಸಿ: ‘ನಮ್ಮ ವಾರ್ಡಿನಲ್ಲಿ ವಿದ್ಯುತ್ ಕೇಬಲ್ ಅಳವಡಿಸಲು ₹3 ಲಕ್ಷ ಅನುದಾನ ಒದಗಿಸಲಾಗಿದೆ. ಟೆಂಡರಿನಲ್ಲಿ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರ ಒಂದು ವರ್ಷದಿಂದ ಕೆಲಸ ಮಾಡುತ್ತಿಲ್ಲ. ಫೋನ್ ಕರೆ ಸ್ವೀಕರಿಸುತ್ತಿಲ್ಲ. ಸದಸ್ಯರ ಮಾತಿಗೆ ಬೆಲೆ ಇಲ್ಲವೇ? ನೀವೇನು ಮಾಡುತ್ತಿದ್ದೀರಿ?’ ಎಂದು ಸದಸ್ಯ ಪಾಶಾಮಿಯ್ಯಾ ಖುರೇಷಿ ಅವರು ಮುಖ್ಯಾಧಿಕಾರಿ ವಿರುದ್ಧ ಆಕ್ರೋಶ ಹೊರ ಹಾಕಿದಾಗ, ಅವರನ್ನು ಬೆಂಬಲಿಸಿ ಮಾತನಾಡಿದ ಸದಸ್ಯ ಚಂದ್ರಶೇಖರ ಕಾಶಿ ಅವರು, ‘ಕಾಮಗಾರಿ ಮಾಡದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ. ಬೇರೊಬ್ಬರಿಗೆ ಕೆಲಸ ವಹಿಸಿ’ ಎಂದು ಸೂಚಿಸಿದರು.
ಹಳೆ ವಾಹನ ಹರಾಜು ಮಾಡದ್ದಕ್ಕೆ ಆಕ್ರೋಶ: ‘ಪುರಸಭೆಯಲ್ಲಿನ ಹಳೆ ವಾಹನಗಳನ್ನು ಹರಾಜು ಮಾಡಬೇಕು ಎಂದು ನಾನು ಅಧ್ಯಕ್ಷನಾಗಿದ್ದಾಗ ಮೂರು ವರ್ಷಗಳ ಹಿಂದೆಯೇ ಹೇಳಿದ್ದೆ. ಆರ್.ಟಿ.ಒ ಅವರಿಗೆ ಪತ್ರ ಬರೆದಿದ್ದು ಏನಾಯಿತು? ಹರಾಜು ಏಕೆ ಮಾಡುತ್ತಿಲ್ಲ? ಪುರಸಭೆ ಬರೆಯುವ ಪತ್ರಕ್ಕೆ ಆರ್.ಟಿ.ಒ ಕಚೇರಿಯಲ್ಲಿ ಕಿಮ್ಮತ್ತಿಲ್ಲವೇ?’ ಎಂದು ಸದಸ್ಯ ಚಂದ್ರಶೇಖರ ಕಾಶಿ ಅವರು ಕೇಳಿದಾಗ, ‘ಆರ್.ಟಿ.ಒ ಅವರು ಬಂದು ವಾಹನ ಪರಿಶೀಲಿಸಿ ಅನುಮತಿ ನೀಡಬೇಕು’ ಎಂದು ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ತಿಳಿಸಿದರು.
‘ತಹಶೀಲ್ದಾರ್ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಜನರ ತೆರಿಗೆ ಹಣ ಏಕೆ ಕೊಡುತ್ತಿದ್ದೀರಿ. ಹಣ ಕೊಡುವುದು ಬಂದ್ ಮಾಡಿ’ ಎಂದು ಸದಸ್ಯರಾದ ಚಂದ್ರಶೇಖರ ಕಾಶಿ, ನಾಗರಾಜ ಭಂಕಲಗಿ, ರಸೂಲ್ ಮುಸ್ತಫಾ, ಜಗದೀಶ ಚವಾಣ್ ಹೇಳಿದರು.
ಸಭೆಯಲ್ಲಿ ಸದಸ್ಯರಾದ ಮಲ್ಲಿಕಾರ್ಜುನ ಕಾಳಗಿ, ವಿನೋದ ಗುತ್ತೇದಾರ್, ಪ್ರಭು ಗಂಗಾಣಿ, ರಮೇಶ ಬಮ್ಮನಳ್ಳಿ, ಶಾಮ್ ಮೇದಾ, ಸುಮಂಗಲಾ, ಶಿವರಾಜ, ಸಂತೋಷ, ಬೇಬಿ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.