ADVERTISEMENT

ಆಳಂದ: ವಿವಿಧಡೆ ಜಿ.ಪಂ ಸಿಇಒ ಭೇಟಿ 

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 4:52 IST
Last Updated 13 ಸೆಪ್ಟೆಂಬರ್ 2025, 4:52 IST
ಆಳಂದ ತಾಲ್ಲೂಕಿನ ಜೀರಹಳ್ಳಿ-ಖಾನಾಪುರ ಗ್ರಾಮಗಳಲ್ಲಿ ಧಾರಾಕಾರ ಮಳೆಗೆ ಹಾನಿಯಾದ ಸೇತುವೆ, ರಸ್ತೆಗಳನ್ನು ಜಿ.ಪಂ ಸಿಇಒ ಭಂವರ್ ಸಿಂಗ್‌ ಮೀನಾ ಹಾಗೂ ಅಧಿಕಾರಿಗಳು ಪರಿಶೀಲನೆ ನಡೆಸಿದರು
ಆಳಂದ ತಾಲ್ಲೂಕಿನ ಜೀರಹಳ್ಳಿ-ಖಾನಾಪುರ ಗ್ರಾಮಗಳಲ್ಲಿ ಧಾರಾಕಾರ ಮಳೆಗೆ ಹಾನಿಯಾದ ಸೇತುವೆ, ರಸ್ತೆಗಳನ್ನು ಜಿ.ಪಂ ಸಿಇಒ ಭಂವರ್ ಸಿಂಗ್‌ ಮೀನಾ ಹಾಗೂ ಅಧಿಕಾರಿಗಳು ಪರಿಶೀಲನೆ ನಡೆಸಿದರು   

ಆಳಂದ: ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಶುಕ್ರವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್‌ ಸಿಂಗ್‌ ಮೀನಾ, ಪಶು ಸಂಗೋಪನಾ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಸಂಜಯ ರೆಡ್ಡಿ ಭೇಟಿ ನೀಡಿ ಹಾಳಾದ ರಸ್ತೆ, ಸೇತುವೆ, ಮೃತಪಟ್ಟ ಜಾನುವಾರುಗಳ ಮಾಲೀಕರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆಳಂದ, ಖಜೂರಿ ವಲಯದ ಹಲವು ಗ್ರಾಮಗಳಲ್ಲಿನ ಮುಖ್ಯ ರಸ್ತೆ ಹಾಳಾಗಿ ಸಂಚಾರಕ್ಕೆ ಅಡ್ಡಿಯಾಗಿದ್ದು, ತಾಲ್ಲೂಕಿನ ಜೀರಹಳ್ಳಿ, ಖಾನಾಪುರ ಗ್ರಾಮದಲ್ಲಿ ಆರು ಜಾನುವಾರುಗಳು ಹಳ್ಳದ ರಭಸ ಹಾಗೂ ಸಿಡಿಲು ಬಡಿದು ಸಾವನ್ನಪ್ಪಿವೆ. ಶಕಾಪುರದ ರೈತ ಮಹಿಳೆ ಜನಬಾಯಿ ಕಾಳೆ ಅವರ ಕೋಳಿ ಶೆಡ್‌ನಲ್ಲಿರುವ 2 ಸಾವಿರಕ್ಕೂ ಅಧಿಕ ಕೋಳಿ ಅಸುನೀಗಿವೆ. ಈ ಸ್ಥಳಕ್ಕೆ ಸಿಇಒ ಭಂವರ್‌ ಸಿಂಗ್‌ ಮೀನಾ, ಸಂಜಯ ರೆಡ್ಡಿ ಅವರು ಭೇಟಿ ನೀಡಿ ಪರಿಶೀಲಿಸಿದರು.

ರೈತರು ತಮ್ಮ ಸಂಕಷ್ಟ ಹೇಳಿ ಸೂಕ್ತ ಪರಿಹಾರಕ್ಕೆ ಮನವಿ ಮಾಡಿದರು. ರಾಷ್ಟ್ರೀಯ ಪ್ರಾಕೃತಿಕ ವಿಪತ್ತು ನಿಧಿಯಿಂದ ಜಾನುವಾರುಗಳ ಅಕಾಲಿಕ ಸಾವಿಗೆ ಪರಿಹಾರ ದೊರೆಯಲಿದೆ ಎಂದು ಸಿಇಒ ತಿಳಿಸಿದರು.

ADVERTISEMENT

ಜೀರಹಳ್ಳಿ, ಶಕಾಪುರ, ಖಾನಾಪುರ ಮಧ್ಯದ ಮೂರು ಸೇತುವೆಗಳು ಹಾಳಾಗಿರುವುದನ್ನು, ಪಡಸಾವಳಿ, ಚಿಂಚೋಳ್ಳಿ, ಮಟಕಿ, ಜೀರಹಳ್ಳಿ ರಸ್ತೆ ಕಿತ್ತು ಹೋಗಿರುವುದನ್ನು ವೀಕ್ಷಿಸಿದರು.

ಸತತ ಮಳೆಯಿಂದ ಕೃಷಿ ಚಟುವಟಿಕೆ ಸ್ಥಗಿತಗೊಂಡಿದ್ದು ರಾಶಿ ಕಾರ್ಯಕ್ಕೆ ಅಡ್ಡಿಯಾಗಿದೆ. ಜಿಡಗಾ -ಜಮಗಾ ಗ್ರಾಮದ ವ್ಯಾಪ್ತಿಯಲ್ಲಿನ ತೋಟಗಾರಿಕೆ, ತರಕಾರಿ ಬೆಳೆಗೆ ಹಾನಿಯಾಗಿದೆ. ಅಮರ್ಜಾ ಅಣೆಕಟ್ಟೆ ಸುತ್ತಲಿನ ಹಳ್ಳದ ವ್ಯಾಪ್ತಿಯಲ್ಲಿನ ಹೊಲ–ಗದ್ದೆಗಳಲ್ಲಿನ ಕಬ್ಬು, ತೊಗರಿ ಬೆಳೆ ಜಲಾವೃತ್ತಗೊಂಡಿವೆ.

ನೆರೆಯ ಮಹಾರಾಷ್ಟ್ರದ ಗಡಿಯಲ್ಲಿ ಅಧಿಕ ಮಳೆಯಿಂದ ಮುಂಜಾಗೃತಾ ಕ್ರಮವಾಗಿ ಅಮರ್ಜಾ ಅಣೆಕಟ್ಟೆಯ ನಾಲ್ಕು ಗೇಟ್‌ಗಳ ಮೂಲಕ ಎರಡು ದಿನಗಳಿಂದ ನೀರು ಬಿಡಲಾಗುತ್ತಿದೆ.

15 ಸಾವಿರ ಹೆಕ್ಟೇರ್‌ ಬೆಳೆ ಹಾನಿ: ತಾಲ್ಲೂಕಿನಲ್ಲಿ ಸುರಿದ ಧಾರಾಕಾರ ಮಳೆಗೆ ಪ್ರಾಥಮಿಕ ವರದಿ ಹಿನ್ನಲೆಯಲ್ಲಿ ಅಂದಾಜು 15 ಸಾವಿರ ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಸೋಮವಾರದಿಂದ ಬೆಳೆ ಹಾನಿ ಸಮೀಕ್ಷೆ ಕೈಗೊಳ್ಳಲಾಗುವುದು ಎಂದು ಕೃಷಿ ಅಧಿಕಾರಿ ಬನಸಿದ್ದ ಬಿರಾದಾರ ತಿಳಿಸಿದರು.

ತಾಲ್ಲೂಕಿನ ಸಾವಳೇಶ್ವರ, ಸರಸಂಬಾ, ಹಿರೋಳ್ಳಿ ಗ್ರಾಮದ ಸುತ್ತ 130ಕ್ಕೂ ಹೆಚ್ಚು ಮಿಮೀ ಮಳೆ ದಾಖಲಾಗಿದೆ. ನೆರೆಯ ವಾಗ್ದರಿ, ಕೇಸರ ಜವಳಗಾ, ಆಲೂರು, ಕಂಟೇಕೂರ್‌, ಕಸಗಿ ಹಾಗೂ ಖಜೂರಿ ವಲಯದಲ್ಲಿ ಹೆಚ್ಚಿನ ಮಳೆಯಿಂದ ಬೆಳೆ ಹಾನಿ, ರಸ್ತೆಗಳು ಹಾನಿಯಾಗಿವೆ.

ಆಳಂದ ತಾಲ್ಲೂಕಿನ ಜೀರಹಳ್ಳಿ-ಖಾನಾಪುರ ಗ್ರಾಮಗಳಲ್ಲಿ ಧಾರಾಕಾರ ಮಳೆಗೆ ಹಾನಿಯಾದ ಸೇತುವೆ ಸಂಪರ್ಕ ರಸ್ತೆಗಳನ್ನು ಜಿಪಂ ಸಿಇಒ ಭಂವರ್ ಸಿಂಗ್‌ ಮೀನಾ ಹಾಗೂ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.