ADVERTISEMENT

ಭೀಮಾ ತೀರದಲ್ಲಿ ಅಣಕು ಪ್ರದರ್ಶನ: ನದಿ ಪ್ರವಾಹದಲ್ಲಿ ಸಿಲುಕಿದ್ದವರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 5:21 IST
Last Updated 14 ಆಗಸ್ಟ್ 2024, 5:21 IST
<div class="paragraphs"><p>ಕಲಬುರಗಿ ತಾಲ್ಲೂಕಿನ ಭೀಮಾ ನದಿ ತೀರದ ಸರಡಗಿ ಗ್ರಾಮದಲ್ಲಿ ಮಂಗಳವಾರ ನಡೆದ ಅಣಕು ಪ್ರದರ್ಶನದಲ್ಲಿ ನೀರಿನಲ್ಲಿ ಮುಳುಗಿದ್ದ ವ್ಯಕ್ತಿಯನ್ನು ಎಸ್‌ಡಿಆರ್‌ಎಫ್‌ ಸಿಬ್ಬಂದಿ ಹೊತ್ತು ತಂದ&nbsp;ಪ್ರಾತ್ಯಕ್ಷಿಕೆ ದೃಶ್ಯ </p></div>

ಕಲಬುರಗಿ ತಾಲ್ಲೂಕಿನ ಭೀಮಾ ನದಿ ತೀರದ ಸರಡಗಿ ಗ್ರಾಮದಲ್ಲಿ ಮಂಗಳವಾರ ನಡೆದ ಅಣಕು ಪ್ರದರ್ಶನದಲ್ಲಿ ನೀರಿನಲ್ಲಿ ಮುಳುಗಿದ್ದ ವ್ಯಕ್ತಿಯನ್ನು ಎಸ್‌ಡಿಆರ್‌ಎಫ್‌ ಸಿಬ್ಬಂದಿ ಹೊತ್ತು ತಂದ ಪ್ರಾತ್ಯಕ್ಷಿಕೆ ದೃಶ್ಯ

   

-ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್‌

ಕಲಬುರಗಿ: ಏಕಾಏಕಿ ಸೃಷ್ಟಿಯಾದ ಪ್ರವಾಹದಲ್ಲಿ ಸಿಲುಕಿ ಜೀವ ಉಳಿಸಿಕೊಳ್ಳಲು ನಾಲ್ವರು ಪರದಾಡುತ್ತಿದ್ದರು. ನೀರಿನಲ್ಲಿ ಮುಳುಗೇಳುತ್ತಾ ಸಹಾಯಕ್ಕಾಗಿ ಅಂಗಲಾಚುತ್ತಿದ್ದರು. ರಾಜ್ಯ ವಿಪತ್ತು ಸ್ಪಂದನಾ ದಳದ (ಎಸ್‌ಡಿಆರ್‌ಎಫ್‌) ಸಿಬ್ಬಂದಿ ನೀರಿಗೆ ಧುಮುಕಿ ಅಪಾಯದಲ್ಲಿದ್ದ ನಾಲ್ವರನ್ನು ರಕ್ಷಿಸಿದರು.

ADVERTISEMENT

ಇದು ತಾಲ್ಲೂಕಿನ ಭೀಮಾ ನದಿ ತೀರದ ಸರಡಗಿ ಗ್ರಾಮದಲ್ಲಿ ಕಂಡುಬಂದ ದೃಶ್ಯ. ಪ್ರವಾಹ ಸಂದರ್ಭದಲ್ಲಿ ಜನರನ್ನು ಹೇಗೆ ರಕ್ಷಣೆ ಮಾಡಬೇಕು ಎಂಬುದನ್ನು ಮಂಗಳವಾರ ಅಣಕು ಕಾರ್ಯಾಚರಣೆಯ ಮೂಲಕ ತೋರಿಸಿಕೊಡಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಂದಾಯ, ಅಗ್ನಿಶಾಮಕದಳ, ರಾಷ್ಟ್ರೀಯ ವಿಪತ್ತು ಸ್ಪಂದನಾ ದಳ (ಎನ್‌ಡಿಆರ್‌ಎಫ್), ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಪ್ರವಾಹದ ವಿಪತ್ತಿನ ದೃಶ್ಯಗಳನ್ನು ಸೃಷ್ಟಿಸಿ, ಜನ ಹಾಗೂ ಜಾನುವಾರು ರಕ್ಷಣೆಯ ಪ್ರಾತ್ಯಕ್ಷಿಕೆಯನ್ನು ಯಶಸ್ವಿಯಾಗಿ ನಡೆಸಿದರು.

ನದಿಯಲ್ಲಿ ಸಿಲುಕಿದವರನ್ನು ರಕ್ಷಿಸಿ ನೀರಿನಿಂದ ಹೊರ ತಂದು ಪ್ರಥಮ ಚಿಕಿತ್ಸೆ ಕೊಡಿಸುವುದು, ನದಿಯಲ್ಲಿ ಮುಳುಗುತ್ತಿದ್ದವರನ್ನು ಲೈಪ್ ಜಾಕೆಟ್ ಎಸೆದು ಹೊರ ತರುವುದು, ನದಿಯ ಪ್ರವಾಹಕ್ಕೆ ಸಿಲುಕಿ ಗಾಯಗೊಂಡವರನ್ನು ಸ್ಟ್ರೆಚರ್‌ನಲ್ಲಿ ಹಾಕಿಕೊಂಡು ಚಿಕಿತ್ಸೆ ಕೊಡಿಸುವಂತಹ ಅಣಕು ಪ್ರದರ್ಶನಗಳು ನಡೆದವು.

ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುವ ವ್ಯಕ್ತಿಗಳು ಮುಳುಗುತ್ತಿರುವ ಸಮಯದಲ್ಲಿ ಎಸ್‌ಡಿಆರ್‌ಎಫ್‌ ಸಿಬ್ಬಂದಿ ಒಬಿಎಂ ದೋಣಿಯಲ್ಲಿ ರಕ್ಷಣೆ ಮಾಡಿ, ನದಿ ದಡದಿಂದ ಎತ್ತಿಕೊಂಡು ಹೊರ ಬರುತ್ತಿದ್ದ ಪ್ರಾತ್ಯಕ್ಷಿಕೆ ಗಮನ ಸೆಳೆಯಿತು.

ನೂರಾರು ಸಿಬ್ಬಂದಿ ಬಳಕೆ: ಎಂಟು ಒಬಿಎಂ ಬೋಟ್‌ಗಳು, ವಾಹನದೊಂದಿಗೆ ಅಗ್ನಿಶಾಮಕ ದಳದ 6 ಮಂದಿ ಸಿಬ್ಬಂದಿ, ಎಸ್‌ಡಿಆರ್‌ಎಫ್‌ 60 ಮಂದಿ ಹಾಗೂ ಎನ್‌ಡಿಆರ್‌ಎಫ್ ಸುಮಾರು 30 ಜನ ಸಿಬ್ಬಂದಿ ಪ್ರಾತ್ಯಕ್ಷಿಯಲ್ಲಿ ತೊಡಗಿಸಿಕೊಂಡಿದ್ದರು. ಅವರೊಂದಿಗೆ ಆರೋಗ್ಯ ಇಲಾಖೆ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರೂ ಇದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಈಶಾನ್ಯ ವಲಯ ಐಜಿಪಿ, ಪ್ರಭಾರ‌ ಪೊಲೀಸ್ ಕಮಿಷನರ್ ಅಜಯ್ ಹಿಲೋರಿ, ಎಸ್‌ಡಿಆರ್‌ಎಫ್ ಡೆಪ್ಯೂಟಿ ಕಮಾಂಡಂಟ್ ಗುರುನಾಥ ಎಸ್‌. ಅವರು ಎಸ್‌ಡಿಆರ್‌ಎಫ್‌ ತಂಡದೊಂದಿಗೆ ಬೋಟ್ ಏರಿ ನದಿಯ ಆಚೆ ದಡದಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಣೆ ಮಾಡುವ ಅಣಕು ಪ್ರದರ್ಶನ ನಡೆಸಿದರು.

ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್, ಡಿಎಚ್ಒ ಡಾ.ರತಿಕಾಂತ ಸ್ವಾಮಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಮಾರುತಿ ಕಾಂಬಳೆ, ಕಾಂಗ್ರೆಸ್ ಮುಖಂಡ ಅರುಣ್ ಕುಮಾರ್ ಪಾಟೀಲ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಮೂರು ದಿನ ತಯಾರಿ; 30 ನಿಮಿಷದಲ್ಲಿ ಮುಕ್ತಾಯ

ಪ್ರವಾಹದ ಸಂದರ್ಭದಲ್ಲಿ ಕೈಗೊಳ್ಳಬೇಕಾಗಿರುವ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ನಿರ್ವಹಣೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮತ್ತು ಪ್ರಾತ್ಯಕ್ಷಿಕೆ 30 ನಿಮಿಷಗಳಲ್ಲಿ ಕೊನೆಗೊಂಡು ಒಂದೊಂದೆ ರಕ್ಷಣಾ ಸಾಮಗ್ರಿಗಳು ಪ್ಯಾಕ್‌ ಮಾಡಲಾಯಿತು. ಸಚಿವರು ಅಧಿಕಾರಿಗಳು ಒಬಿಎಂ ದೋಣಿ ಹತ್ತಿ ಆಚೆ ದಡದಲ್ಲಿದ್ದವರನ್ನು 10 ನಿಮಿಷದಲ್ಲಿ ಕರೆತಂದು ಅಲ್ಲಿಂದ ಹೊರಟು ಹೋದರು. ಅವರ ಹಿಂದೆಯೇ ಹಲವರು ಕಾಲ್ಕಿತ್ತರು. ಆ ಬಳಿಕ 20 ನಿಮಿಷಗಳ ಕಾಲ ಅಣಕು ಪ್ರದರ್ಶನ ನಡೆಯಿತು. ನದಿ ದಡದಲ್ಲಿನ ಚೀರಾಟ ಕೇಳಿ ಕೆಲ ಗ್ರಾಮಸ್ಥರು ದಡಕ್ಕೆ ಬರುವಷ್ಟರಲ್ಲಿ ಒಬಿಎಂ ಬೋಟ್ ಅಗ್ನಿಶಾಮಕದ ವಾಹನದ ಮೇಲಿಡಲಾಗಿತ್ತು. ‘ಅಣಕು ಪ್ರದರ್ಶನ ನಡೆಯುವ ನದಿ ದಡದಲ್ಲಿ ಮೂರು ದಿನಗಳಿಂದ ತಯಾರಿ ಕೆಲಸ ಮಾಡಿದ್ದೇವೆ. ಕುಡಿಯುವ ನೀರು ಊಟದ ವ್ಯವಸ್ಥೆಯೂ ಮಾಡಲಾಗಿತ್ತು’ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದರು.

ಕಲಬುರಗಿ ತಾಲ್ಲೂಕಿನ ಭೀಮಾ ನದಿ ತೀರದ ಸರಡಗಿ ಗ್ರಾಮದಲ್ಲಿ ಮಂಗಳವಾರ ನಡೆದ ವಿಪತ್ತು ನಿರ್ವಹಣೆಯ ಅಣಕು ಪ್ರದರ್ಶನದಲ್ಲಿ ನೀರಿನಲ್ಲಿ ಮುಳುಗಿದ್ದ ವ್ಯಕ್ತಿಯನ್ನು ಎಸ್‌ಡಿಆರ್‌ಎಫ್‌ ಸಿಬ್ಬಂದಿ ಸ್ಟ್ರೆಚರ್‌ನಲ್ಲಿ ಹೊತ್ತೊಯ್ದ ಪ್ರಾತ್ಯಕ್ಷಿಕೆ ದೃಶ್ಯ

ಕಲಬುರಗಿ ತಾಲ್ಲೂಕಿನ ಭೀಮಾ ನದಿ ತೀರದ ಸರಡಗಿ ಗ್ರಾಮದಲ್ಲಿ ಮಂಗಳವಾರ ನಡೆದ ವಿಪತ್ತು ನಿರ್ವಹಣೆಯ ಅಣಕು ಪ್ರದರ್ಶನದಲ್ಲಿ ನೀರಿನಲ್ಲಿ ಮುಳುಗಿದ್ದ ವ್ಯಕ್ತಿಯನ್ನು ಎಸ್‌ಡಿಆರ್‌ಎಫ್‌ ಸಿಬ್ಬಂದಿ ರಕ್ಷಿಸಿದ ಪ್ರಾತ್ಯಕ್ಷಿಕೆ ದೃಶ್ಯ

ಕಲಬುರಗಿ ತಾಲ್ಲೂಕಿನ ಭೀಮಾ ನದಿ ತೀರದ ಸರಡಗಿ ಗ್ರಾಮದಲ್ಲಿ ಮಂಗಳವಾರ ನಡೆದ ವಿಪತ್ತು ನಿರ್ವಹಣೆಯ ಅಣಕು ಪ್ರದರ್ಶನದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.