ಕಲಬುರಗಿ ತಾಲ್ಲೂಕಿನ ಸೋಮನಾಥಹಳ್ಳಿಯ ಹರಿಜನವಾಡಾದ ಮನೆಯಲ್ಲಿ ನೀರು ಆವರಿಸಿದ್ದರಿಂದ ಮಂಚದ ಮೇಲೆ ಕುಳಿತಿದ್ದ ವೃದ್ಧೆ. ನಂತರ ಎಸ್‌ಡಿಆರ್‌ಎಫ್‌ನವರು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದರು
ಪ್ರಜಾವಾಣಿ ಚಿತ್ರ
ಕಲಬುರಗಿ: ಭೀಮಾ ನದಿಯ ಪ್ರವಾಹ ತಮ್ಮ ಮನೆಬಾಗಿಲಿಗೆ ಬರುತ್ತದೆ ಎಂಬುದು ಗೊತ್ತಿದ್ದರೂ ತಾಲ್ಲೂಕಿನ ಸೋಮನಾಥಹಳ್ಳಿಯ ಹರಿಜನವಾಡಾದ 12 ಮನೆಗಳ ಸದಸ್ಯರು ಮನೆಯ ಮೇಲ್ಭಾಗದಲ್ಲಿಯೇ ಶನಿವಾರ ಮಧ್ಯಾಹ್ನದವರೆಗೆ ಕಾದು ಕುಳಿತಿದ್ದರು.
ಇದಕ್ಕೆ ತಾಲ್ಲೂಕು ಆಡಳಿತ ಸಕಾಲಕ್ಕೆ ಸ್ಥಳಾಂತರಗೊಳಿಸಲಿಲ್ಲ ಎಂಬ ಮುನಿಸೂ ಕಾರಣವಲ್ಲ. ಶುಕ್ರವಾರವೇ ತಹಶೀಲ್ದಾರ್ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿಗೆ ಗ್ರಾಮಕ್ಕೆ ತೆರಳಿ ಪ್ರವಾಹ ಬರುವ ಮುನ್ನೆಚ್ಚರಿಕೆ ನೀಡಿದ್ದರೂ ಅವರು ಮಾತ್ರ ಕದಲಿರಲಿಲ್ಲ.
ತಮಗೆ ಮನೆಗಳನ್ನು ಕಟ್ಟಿಕೊಟ್ಟು ಶಾಶ್ವತವಾಗಿ ಸ್ಥಳಾಂತರಿಸಬೇಕು ಎಂಬ ಬೇಡಿಕೆ ತಕ್ಷಣಕ್ಕೆ ಈಡೇರದೇ ಇರುವುದೇ ಕಾರಣವಾಗಿತ್ತು. ಶುಕ್ರವಾರ ಸಂಜೆಯಿಂದಲೇ ಮನೆಯ ಬಳಿ ಬಂದ ನೀರು ಶನಿವಾರ ಬೆಳಿಗ್ಗೆ ಹೊತ್ತಿಗೆ ಮನೆ ಹೊಕ್ಕಿತ್ತಲ್ಲದೇ ಅಲ್ಲಿನ ಮನೆಗಳನ್ನು ದ್ವೀಪಗಳಂತೆ ಒಂಟಿಯಾಗಿಸಿ ಸುತ್ತುವರೆದಿತ್ತು. ಊಟಕ್ಕೆ ತಂದಿಟ್ಟ ಜೋಳ, ಗೋಧಿಯ ಸಂಗ್ರಹವೂ ಅಲ್ಲಿಯೇ ಇತ್ತು. ಕೆಲ ಹೊತ್ತಿನ ಬಳಿಕ ಮನೆಯ ಮೇಲ್ಭಾಗಕ್ಕೆ ಸಾಗಿಸಿದರು.
ಮಧ್ಯಾಹ್ನದ ಬಳಿಕ ರಾಜ್ಯ ವಿಪತ್ತು ಸ್ಪಂದನಾ ಪಡೆ, ಅಗ್ನಿಶಾಮಕ ದಳದವರು ಬೋಟ್‌ನೊಂದಿಗೆ ಬಂದ ಬಳಿಕವಷ್ಟೇ ಅವರು ಅಲ್ಲಿಂದ ಕದಲುವ ಮನಸ್ಸು ಮಾಡಿದರು. ತಮ್ಮ ಮನೆಗಳಿಂದ ದಡಕ್ಕೆ ಬಂದು ತಲುಪಿದ್ದರೂ ಹರಿಜನವಾಡಾದ ನಿವಾಸಿ ಚಂದ್ರಕಲಾ ಅವರ ಸಿಟ್ಟೇನೂ ಕಡಿಮೆಯಾಗಿರಲಿಲ್ಲ. ಪ್ರತಿ ಬಾರಿಯೂ ಇದೇ ಆಗುತ್ತದೆ. ನಮಗೆ ಶಾಶ್ವತ ಪರಿಹಾರ ಮಾತ್ರ ಸಿಗುತ್ತಿಲ್ಲ. ಏನಾದರೂ ಆಗಲಿ ಎಂದು ನಮ್ಮ ಸಾಮಾನು ಸರಂಜಾಮು ಅಲ್ಲಿಯೇ ಬಿಟ್ಟು ಬಂದಿದ್ದೇವೆ ಎಂದು ಬೇಸರ ಹೊರಹಾಕುತ್ತಾ ಕಾಳಜಿ ಕೇಂದ್ರದತ್ತ ತೆರಳಿದರು.
ಎರಡನೇ ಬಾರಿ ದೋಣಿ ಮೂಲಕ ಬಂದ ವೃದ್ಧೆ ಈರಮ್ಮ ಸಹ ಹೊಳಿ ತುಂಬಿ ಬಂದಾಗ ಬೋಟು ತಗೊಂಡು ಬಂದು ನಮ್ಮನ್ನ ಕಳಿಸಿ ಹೋಗಿ ಬಿಡ್ತಾರ. ಮತ್ತ ಹೊಳಿ ಬರುವವರೆಗೂ ಮಾತಾಡಿಸೂದ ಇಲ್ಲ ಎಂದು ಧುಮುಗುಟ್ಟುತ್ತಾ ಹೋದರು. ಅವರ ಧ್ವನಿ, ನಡವಳಿಕೆಯಲ್ಲಿ ಹತಾಶೆ, ಆಕ್ರೋಶ, ಅಸಹಾಯಕತೆ ಎಲ್ಲವೂ ಇತ್ತು.
ನೀರು ಬರುತ್ತಿದ್ದಂತೆಯೇ ನಾಲ್ಕು ದೊಡ್ಡ ಹಾವುಗಳು ಅಲ್ಲಿನ ಮನೆಯೊಂದರಲ್ಲಿ ಹೊಕ್ಕಿದ್ದವು. ತಿಪ್ಪೆಯ ಗೊಬ್ಬರವು ನೀರಲ್ಲಿ ತೇಲುತ್ತಿತ್ತು. ಪ್ರವಾಹದ ನೀರು ಕಡಿಮೆಯಾದರೂ ಆ ಮನೆಗಳು ಮೊದಲಿನಂತಾಗಲೂ ಕೆಲವು ದಿನಗಳೇ ಹಿಡಿಯಲಿವೆ ಎಂದು ಗ್ರಾಮಸ್ಥರು ಮಾತನಾಡಿಕೊಂಡರು.
ಮಾದಿಗರ ಓಣಿಗೆ ಹೊಂದಿಕೊಂಡಂತೆ ಇರುವ ದರ್ಗಾಹ ಮಧ್ಯಾಹ್ನದ ಹೊತ್ತಿಗೆ ಜಲಾವೃತವಾಯಿತು.
ಸೋಮನಾಥಹಳ್ಳಿಯಲ್ಲಿ ಶನಿವಾರ 27 ಜನರನ್ನು ದೋಣಿಯ ಮೂಲಕ ರಕ್ಷಿಸಲಾಗಿದೆ. ಗ್ರಾಮದಲ್ಲಿ ತೆರೆದ ಕಾಳಜಿ ಕೇಂದ್ರದಲ್ಲಿ ಒಟ್ಟಾರೆ 41 ಜನರಿಗೆ ತಾತ್ಕಾಲಿಕವಾಗಿ ವಾಸ್ತವ್ಯ ಮಾಡಿದ್ದಾರೆಮುನಾವರ್ ದೌಲಾ ನೋಡಲ್ ಅಧಿಕಾರಿ ವಿಪತ್ತು ನಿರ್ವಹಣೆ
ಯಾವ ಕ್ಷಣದಲ್ಲಿ ಬೇಕಾದರೂ ಮನೆಗೆ ನುಗ್ಗಬಹುದು. ಪ್ರತಿ ಬಾರಿ ಭೀಮಾ ನದಿಗೆ ಪ್ರವಾಹ ಬಂದಾಗಲೂ ನಮ್ಮದು ಇದೇ ಪರಿಸ್ಥಿತಿಯಾಗಿದೆ. ಸರ್ಕಾರ ಸ್ಥಳಾಂತರ ಮಾಡಬೇಕುಸಾತವ್ವ ಸೋಮನಾಥಹಳ್ಳಿ ಗ್ರಾಮಸ್ಥೆ
ಅಣವಾರದಲ್ಲಿ 145.5 ಮಿಮೀ ಮಳೆ
ಜಿಲ್ಲೆಯಲ್ಲಿ ಕುಂಭದ್ರೋಣ ಮಳೆ ಮುಂದುವರಿದಿದ್ದು ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಜಿಲ್ಲೆಯಲ್ಲಿ ವಾಡಿಕೆಯಂತೆ 8 ಮಿಮೀ ಮಳೆಯಾಗಬೇಕಿತ್ತು ಆದರೆ ಸರಾಸರಿ 55 ಮಿ.ಮೀ ಮಳೆಯಾಗಿದೆ. ಇದು ವಾಡಿಕೆಗಿಂತಲೂ ಶೇ 609ರಷ್ಟು ಅಧಿಕವಾಗಿದೆ. ಚಿಂಚೋಳಿ ತಾಲ್ಲೂಕಿನ ಅಣವಾರದಲ್ಲಿ ಗರಿಷ್ಠ 145.5 ಮಿ.ಮೀ ಮಳೆ ದಾಖಲಾಗಿದೆ. ಚಿತ್ತಾಪುರ ತಾಲ್ಲೂಕಿನ ಹೆಬ್ಬಾಳದಲ್ಲಿ 100.5 ಮಿ.ಮೀ ಚಿಂಚೋಳಿ ಪಟ್ಟಣದಲ್ಲಿ 99.8 ಮಿ.ಮೀ ಪೋಲಕಪಳ್ಳಿಯಲ್ಲಿ 99.5 ಮಿ.ಮೀ ಸೇಡಂ ತಾಲ್ಲೂಕಿನ ಕುರುಕುಂಟಾದಲ್ಲಿ 98.5ಮಿಮೀ ಚಿತ್ತಾಪುರ ತಾಲ್ಲೂಕಿನ ಚಿಮ್ಮಾ ಇದಲಾಯಿಯಲ್ಲಿ 96.2 ಮಿ.ಮೀ ಸೇರಿದಂತೆ ಜಿಲ್ಲೆಯ 40 ಗ್ರಾಮಗಳಲ್ಲಿ 50 ಮಿ.ಮೀಗೂ ಅಧಿಕ ಮಳೆಯಾದ ಬಗ್ಗೆ ಹವಾಮಾನ ಇಲಾಖೆ ವರದಿ ಹೇಳಿದೆ. ಜಿಲ್ಲೆಯಲ್ಲಿ ಸೆ.1ರಿಂದ ಸೆ.27ರ ತನಕ ವಾಡಿಕೆಯಂತೆ 159 ಮಿಮೀ ಮಳೆಯಾಗಬೇಕಿತ್ತು. ಆದರೆ ವಾಸ್ತವವಾಗಿ ಜಿಲ್ಲೆಯಲ್ಲಿ ಶೇ 71ರಷ್ಟು ಹೆಚ್ಚುವರಿಯೊಂದಿಗೆ 271 ಮಿ.ಮೀ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.