
ಕಲಬುರಗಿ: ಮೂರು ದಿನಗಳ ಕಲಬುರಗಿ ಪ್ರವಾಸದಲ್ಲಿರುವ ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಎಚ್.ಕೃಷ್ಣ ಅವರು ಗುರುವಾರ ನಗರದ ಅಂಗನವಾಡಿ, ಶಾಲೆ, ವಸತಿ ನಿಲಯಕ್ಕೆ ಹಠಾತ್ ಭೇಟಿ ನೀಡಿ ಅಹಾರ ಪೂರೈಕೆಯ ಗುಣಮಟ್ಟ ಪರಿಶೀಲಿಸಿದರು.
ನಗರದ ಗಾಜಿಪುರ ಬಡಾವಣೆಯ ಅಂಗನವಾಡಿಗೆ ಭೇಟಿ ನೀಡಿದ ಅವರು ‘ಗರ್ಭಿಣಿಯರಿಗೆ ನೀಡಬೇಕಾದ ಮೊಟ್ಟೆ ಯಾಕೆ ವಿತರಿಸಿಲ್ಲ’ ಎಂದು ಪ್ರಶ್ನಿಸಿದರು.
‘ಸರ್ಕಾರ ಗರ್ಭಿಣಿಯರು, ಬಾಣಂತಿಯರಿಗೆ ಶಿಶು ಅಭಿವೃದ್ಧಿ ಯೋಜನೆ ಮೂಲಕ ಪೌಷ್ಟಿಕ ಆಹಾರ ಒದಗಿಸುತ್ತಿದೆ. ಸ್ಥಳೀಯವಾಗಿ ನೀವು ಸರಿಯಾಗಿ ಕೆಲಸ ಮಾಡದೆ ಹೋದರೆ ಅಪೌಷ್ಟಿಕತೆ ನಿರ್ಮೂಲನೆ ಹೇಗೆ ಸಾಧ್ಯ?’ ಎಂದು ಅಂಗನವಾಡಿ ಕಾರ್ಯಕರ್ತೆಯನ್ನು ಕೇಳಿದರು.
ಅಲ್ಲದೇ, ಅಂಗನವಾಡಿ ಕೇಂದ್ರದ ಫಲಾನುಭವಿಯೊಬ್ಬರಿಗೆ ಕರೆ ಮಾಡಿ ‘ಪೌಷ್ಟಿಕ ಆಹಾರ ಸರಿಯಾಗಿ ವಿತರಿಸಲಾಗುತ್ತಿದೆಯೇ?’ ಎಂದೂ ವಿಚಾರಿಸಿದರು.
ಮಹಾತ್ಮ ಬಸವೇಶ್ವರ ನಗರದ ಸರ್ಕಾರಿ ಕೆಪಿಎಸ್ ಶಾಲೆಗೆ ಮಧ್ಯಾಹ್ನದ ವೇಳೆಯಲ್ಲಿ ಭೇಟಿ ನೀಡಿದ ಅಧ್ಯಕ್ಷರು, ಮಕ್ಕಳಿಗೆ ನೀಡಲಾಗುತ್ತಿದ್ದ ಬಿಸಿಯೂಟದ ಗುಣಮಟ್ಟ ಪರಿಶೀಲಿಸಿದರು. ಇದಲ್ಲದೆ ಆದರ್ಶ ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದಾಗ ನಿಗದಿತ ದಾಸ್ತಾನಿಗಿಂತಲೂ ಒಂದೂವರೆ ಕ್ವಿಂಟಲ್ ಹೆಚ್ಚು ಅಕ್ಕಿ ಸಂಗ್ರಹಿಸಿದ್ದು ಕಂಡುಬಂತು. ಅದಕ್ಕೆ ಸಿಬ್ಬಂದಿಯಿಂದ ವಿವರಣೆ ಕೇಳಿದರು.
ಜಾಗೃತಿ ಕಾಲೊನಿಯಲ್ಲಿರುವ ಚೆನ್ನಬಸವೇಶ್ವರ ಪ್ರೌಢ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
ಇದಕ್ಕೂ ಮುನ್ನ ನಗರದ ಲಾಹೋಟಿ ಪೆಟ್ರೋಲ್ ಬಂಕ್‌ಗೆ ಭೇಟಿ ನೀಡಿದ ಅಧ್ಯಕ್ಷರು, ಅಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಸಾಂದ್ರತೆ ಮತ್ತು ಅಗ್ನಿಶಾಮಕ ಸಲಕರಣೆಗಳ ಪರೀಕ್ಷೆ ನಡೆಸಿದರು. ಗ್ರಾಹಕರಿಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಬಂಕ್ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿದರು.
ಅಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಭಾರ ಉಪನಿರ್ದೇಶಕ ಮುನಾವರ ದೌಲಾ, ಸಹಾಯಕ ನಿರ್ದೇಶಕ ಮಲ್ಲಿನಾಥ, ಡಿಎಚ್‌ಒ ಡಾ.ಶರಣಬಸಪ್ಪ ಕ್ಯಾತನಾಳ, ಡಿಡಿಪಿಐ ಸೂರ್ಯಕಾಂತ ಮದಾನೆ, ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ರಫೀಕ್ ಲಾಡಜಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ವಿಜಯಕುಮಾರ ಫುಲಾರೆ ಸೇರಿದಂತೆ ಇತರೆ ಅಧಿಕಾರಿಗಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.