ADVERTISEMENT

ಕಲಬುರಗಿ: ಪಾಯದ ಗುಂಡಿಯಲ್ಲಿ ಮುಳುಗಿ ನಾಲ್ವರು ಬಾಲಕರ ಸಾವು

ಪೋಷಕರ ಆಕ್ರಂದನ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ, ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2021, 7:34 IST
Last Updated 4 ನವೆಂಬರ್ 2021, 7:34 IST
ಕಲಬುರಗಿಯ ಶಹಾಬಜಾರ್‌ನ ಬಂಡಿ ಲಕ್ಕಮ್ಮ ದೇವಸ್ಥಾನದ ಬಳಿ ಕಟ್ಟಡ ನಿರ್ಮಾಣಕ್ಕೆ ತೋಡಿದ್ದ ಪಾಯದ ಗುಂಡಿಯಲ್ಲಿ ಮುಳುಗಿ ಮೃತಪಟ್ಟ ಬಾಲಕ ಆಕಾಶನ ಪೋಷಕರು ಮತ್ತು ಸಂಬಂಧಿಗಳ ಆಕ್ರಂದನ
ಕಲಬುರಗಿಯ ಶಹಾಬಜಾರ್‌ನ ಬಂಡಿ ಲಕ್ಕಮ್ಮ ದೇವಸ್ಥಾನದ ಬಳಿ ಕಟ್ಟಡ ನಿರ್ಮಾಣಕ್ಕೆ ತೋಡಿದ್ದ ಪಾಯದ ಗುಂಡಿಯಲ್ಲಿ ಮುಳುಗಿ ಮೃತಪಟ್ಟ ಬಾಲಕ ಆಕಾಶನ ಪೋಷಕರು ಮತ್ತು ಸಂಬಂಧಿಗಳ ಆಕ್ರಂದನ   

ಕಲಬುರಗಿ: ನಗರದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪಾಯದ ಗುಂಡಿಯಲ್ಲಿಯ ನೀರಿನಲ್ಲಿ ಮುಳುಗಿ ನಾಲ್ವರು ಬಾಲಕರು ಬುಧವಾರ ಮೃತಪಟ್ಟಿದ್ದಾರೆ.

ನಗರದ ಬ್ರಹ್ಮಪುರದ ಅಪ್ಪರ್‌ಲೇನ್ ಪ್ರದೇಶದ ನಿವಾಸಿಗಳಾದ ವಿಘ್ನೇಶ್ ರಾಜು (12), ಪ್ರಶಾಂತ್ ಅಂಬಣ್ಣ (12), ದರ್ಶನ್ ನಾಗರಾಜ (10) ಮತ್ತು ನೆಹರೂ ನಗರದ ಆಕಾಶ (10) ಮೃತರು.

‘ಮಹಾಲಕ್ಷ್ಮಿ ಲೇಔಟ್‌ನ ವಿವೇಕಾನಂದ ಕಾಲೇಜಿನ ಹಿಂಭಾಗದ ನಿವೇಶನದಲ್ಲಿರುವ ಪಾಯದ ಗುಂಡಿಯಲ್ಲಿಯ ನೀರಿನಲ್ಲಿ ವಿಘ್ನೇಶ್ ರಾಜು, ಪ್ರಶಾಂತ ಮತ್ತು ದರ್ಶನ್ ಆಟವಾಡಲು ಹೋಗಿದ್ದರು. ಈಜು ಬಾರದ ಕಾರಣ ಮೂವರೂ ಮುಳುಗಿದ್ದಾರೆ. ಸ್ಥಳೀಯರುಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅವರು ಬರುವಷ್ಟರಲ್ಲಿ ಮಕ್ಕಳು ಮೃತಪಟ್ಟಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ನಗರದಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಗೆ ಪಾಯದ ಗುಂಡಿಯಲ್ಲಿ ನೀರು ತುಂಬಿತ್ತು. ಮಕ್ಕಳು ಆಟವಾಡಲು ಹೋಗಿದ್ದ ವೇಳೆ ಅವರನ್ನು ನಿವೇಶನದ ಭದ್ರತಾ ಸಿಬ್ಬಂದಿ ಹೆದರಿಸಿ ಕಳಿಸಿದ್ದರು. ಆ ನಂತರ ಗುಂಡಿಯಲ್ಲಿನ ನೀರನ್ನು ಹೊರ ಹಾಕಲು ಮೋಟರ್ ಚಾಲೂ ಮಾಡಿ ಚಹಾ ಕುಡಿಯಲು ಹೋಗಿದ್ದರು. ಈ ವೇಳೆ ಮತ್ತೆ ಬಂದ ಮಕ್ಕಳು ನೀರಿನಲ್ಲಿ ಆಟವಾಡಲು ಆರಂಭಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಈಜಲು ಬಾರದ ಕಾರಣ ಮುಳುಗಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಜಿಮ್ಸ್‌ ಆಸ್ಪತ್ರೆ ಯಲ್ಲಿ ಮರ ಣೋತ್ತರ ಪರೀಕ್ಷೆ ನಡೆಸಿ, ಮೃತದೇಹಗಳನ್ನು ಪೋಷ ಕರಿಗೆ ಹಸ್ತಾಂತರಿಸಲಾಯಿತು.

ಕಟ್ಟಡ ನಿರ್ಮಾಣ ಸ್ಥಳದಲ್ಲಿ ಮುಂಜಾಗ್ರತಾ ಕ್ರಮ ಗಳನ್ನು ಕೈಗೊಳ್ಳದ ನಿವೇ ಶನದ ಮಾಲೀಕರ ವಿರುದ್ಧ ಐಪಿಸಿ ಸೆಕ್ಷನ್ 304 (ಎ) ಅಡಿ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೋಷಕರ ಆಕ್ರಂದನ: ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಮೃತ ಬಾಲಕರ ಪೋಷಕರು, ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.

‘ಆಟವಾಡಲು ಹೋಗಿದ್ದ ಮಕ್ಕಳು ವಾಪಸ್ ಶವವಾಗಿ ಬಂದಿದ್ದಾರೆ. ದೀಪಾವಳಿ ಸಂಭ್ರಮದಲ್ಲಿದ್ದ ಕುಟುಂಬಗಳಲ್ಲಿ ದುಃಖ ಆವರಿಸಿದೆ. ಭವಿಷ್ಯದ ಆಶಾಕಿರಣಗಳು ಬಾಡಿವೆ’ ಎಂದು ಮೃತ ಬಾಲಕರ ಸಂಬಂಧಿ ಸಂತೋಷ ದುಃಖ ವ್ಯಕ್ತಪಡಿಸಿದರು.

ಮತ್ತೊಂದು ಪ್ರಕರಣ: ಶಹಾಬಜಾರ್‌ ಜಿಡಿಎ ಲೇಔಟ್‌ನಲ್ಲಿನ ಬಂಡಿ ಲಕ್ಕಮ್ಮ ದೇವಸ್ಥಾನದ ಬಳಿ ಕಟ್ಟಡ ನಿರ್ಮಾಣಕ್ಕೆ ತೋಡಿದ್ದ ಗುಂಡಿಯಲ್ಲಿ ಬಿದ್ದು ನೆಹರೂ ನಗರದ ಆಕಾಶ (10) ಎಂಬ ಬಾಲಕ ಬುಧವಾರ ಸಂಜೆ ಮೃತಪಟ್ಟಿದ್ದಾನೆ.

ಮಹಾನಗರ ಪಾಲಿಕೆಯಿಂದ ಕಟ್ಟಡ ನಿರ್ಮಾಣಕ್ಕೆ 20 ಅಡಿ ಆಳದ ಪಾಯ ತೋಡಲಾಗಿತ್ತು.

ಸ್ನೇಹಿತರೊಂದಿಗೆ ಭಾಗ್ಯವಂತಿ ಜಾತ್ರೆಗೆ ಹೋಗಿದ್ದ ಬಾಲಕ ಗುಂಡಿಯಲ್ಲಿ ಈಜಲು ಇಳಿದಿದ್ದಾನೆ.

ಈಜು ಬಾರದೆ ಮುಳುಗಿ ಮೃತಪಟ್ಟಿದ್ದಾನೆ.

ಸ್ಥಳೀಯರು ಬಾಲಕನ ಮೃತದೇಹವನ್ನು ಹೊರತೆಗೆದ್ದಾರೆ. ಆಕಾಶನ ತಂದೆ ಮಲ್ಲಿಕಾರ್ಜುನ ಅವರು ಕ್ಷೌರಿಕರಾಗಿದ್ದು, ತಾಯಿ ಮಹಾದೇವಿ ಅವರು ಮನೆಗೆಲಸ ಮಾಡುತ್ತಾರೆ.

ಈ ಸಂಬಂಧ ಇಲ್ಲಿನ ಚೌಕ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.