ಕಲಬುರಗಿ: ಜಿಲ್ಲೆಯ ಕಮಲಾಪುರ, ಕಾಳಗಿ, ಚಿತ್ತಾಪುರ ತಾಲ್ಲೂಕಿನ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ನಿರ್ಮಿಸಲಾದ ಗಂಡೋರಿ ನಾಲಾ ನೀರಾವರಿ ಯೋಜನೆಯಡಿ ಕಾಲುವೆಗಳ ದುರಸ್ತಿ ಕಾಮಗಾರಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವುದು ಲೋಕಾಯುಕ್ತ ಸಂಸ್ಥೆ ನಡೆಸಿದ ತನಿಖೆ ವೇಳೆ ದೃಢಟ್ಟಿದೆ.
ಕಾಮಗಾರಿಯಲ್ಲಿನ ಹಲವು ಲೋಪಗಳಿಗೆ, ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ್ದಕ್ಕೆ ಕರ್ನಾಟಕ ನೀರಾವರಿ ನಿಗಮದ ಕಲಬುರಗಿ ವಲಯದ ಮುಖ್ಯ ಎಂಜಿನಿಯರ್ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಮುಖ್ಯ ಕಾರಣ ಎಂದು ತನಿಖಾ ಸಮಿತಿ ಹೇಳಿದೆ.
19 ಪುಟಗಳ ತನಿಖಾ ವರದಿಯ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
‘ಗಂಡೋರಿ ನಾಲಾ ಎಡದಂತೆ ಹಾಗೂ ಬಲದಂಡೆ ಕಾಲುವೆಗಳ ಪಕ್ಕದಲ್ಲಿ ಸರ್ವಿಸ್ ರಸ್ತೆ, ಪರಿವೀಕ್ಷಣಾ ಪಥವನ್ನು ನಿರ್ಮಿಸದೇ ಇದ್ದರೂ ₹8.98 ಕೋಟಿಗೂ ಅಧಿಕ ಮೊತ್ತವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. 2017ರಲ್ಲಿ ₹6.78 ಕೋಟಿ ಅಂದಾಜು ಮೊತ್ತವನ್ನು ಈ ಕಾಮಗಾರಿಗಳಿಗಾಗಿ ನಿಗದಿಪಡಿಸಲಾಗಿತ್ತು. ಅಂದಾಜು ಮೊತ್ತವನ್ನೂ ಮೀರಿ ಹೆಚ್ಚುವರಿಯಾಗಿ ₹2.20 ಕೋಟಿ ಸೇರಿಸಿ ಒಟ್ಟು ₹8.98 ಕೋಟಿ ಹಣವನ್ನು ಪಾವತಿ ಮಾಡಲಾಗಿದೆ’ ಎಂದು ಆರೋಪಿಸಿ ಕಲಬುರಗಿಯ ನಿವಾಸಿ ವಿಶ್ವನಾಥ ತಡಕಲ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಸಂಸ್ಥೆಯು, ಪ್ರಕರಣದ ತನಿಖೆ ನಡೆಸಲು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಯೋಗೇಶ್ ಎಂ. ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಕ ಮಾಡಿತ್ತು.
ಕಾಮಗಾರಿ ನಡೆದ ಕಾಲುವೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಯೋಗೇಶ್ ಹಾಗೂ ಅವರ ತಂಡವು ಅಗತ್ಯ ಪ್ರಮಾಣದಷ್ಟು ಅಳತೆ ಪುಸ್ತಕದಲ್ಲಿ ದಾಖಲಿಸಿರುವಂತೆ ಕೆಲವು ಚೈನೇಜ್‌ನಲ್ಲಿ 3.50 ಮೀಟರ್ ದಪ್ಪದ ಮರುಮ್ ಹಾಕಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಗಂಡೋರಿ ನಾಲಾ ಬಲದಂಡೆ ಕಾಲುವೆಯ ಭದ್ರತೆಗಾಗಿ ಹಾಗೂ ನೀರು ಸೋರದಂತೆ ತಡೆಯಲು ಹಾಕಲಾದ ಸಿಎನ್‌ಎಸ್ ಅಂಶವನ್ನು ಅಳವಡಿಸಿರುವ ಅಳತೆಗಳನ್ನು ದಾಖಲಿಸಿ ಕ್ರಮವಾಗಿ ₹6.49 ಲಕ್ಷ ಹಾಗೂ ₹10.69 ಲಕ್ಷ ಬಿಲ್ ಹೆಚ್ಚುವರಿಯಾಗಿ ಪಾವತಿಸಲಾಗಿದೆ ಎಂದು ತನಿಖಾ ವರದಿಯಲ್ಲಿ ತಿಳಿಸಲಾಗಿದೆ. 2018ರ ಸೆಪ್ಟೆಂಬರ್‌ನಲ್ಲಿ ಅಂದಿನ ಮುಖ್ಯ ಎಂಜಿನಿಯರ್ ಪರಿವೀಕ್ಷಣೆಯ ಬಳಿಕ ನೀಡಿದ ವರದಿಯಲ್ಲಿ ನೀಡಿರುವ ಅಂಶಗಳು ಸೇರಿದಂತೆ ಇತರ ಅಂಶಗಳ ಬಗ್ಗೆ ಮೇಲಧಿಕಾರಿಗಳ ಪರಿವೀಕ್ಷಣಾ ವರದಿಗಳನ್ನು, ಸಕ್ಷಮ ಪ್ರಾಧಿಕಾರದ ಅನುಮೋದನೆಯನ್ನು ಪಡೆಯದೇ ಕಾಮಗಾರಿ ನಡೆಸಲಾಗಿದೆ ಎಂದು ತಿಳಿಸಲಾಗಿದೆ.
ಕಾಲುವೆ ಆಧುನೀಕರಣ ಸಂದರ್ಭದಲ್ಲಿ ನೆಲವನ್ನು ಅಗೆದಾಗ ದೊರೆತ ಮಣ್ಣನ್ನು ಸರ್ವಿಸ್ ರಸ್ತೆ ಹಾಗೂ ಪರಿವೀಕ್ಷಣಾ ಪಥದ ನಿರ್ಮಾಣದಲ್ಲಿ ಬಳಸಿಕೊಂಡು ಉಳಿದ ಪ್ರಮಾಣವನ್ನು ಹೆಚ್ಚುವರಿಯಾಗಿ ಅನುಮೋದನೆ ಪಡೆಯಬಹುದಾಗಿತ್ತು. ಹಾಗೆ ಮಾಡದೇ ಇರುವುದರಿಂದ ಸರ್ಕಾರಕ್ಕೆ ಆರ್ಥಿಕ ನಷ್ಟವುಂಟಾಗಿದೆ ಎಂದು ವರದಿ ಸ್ಪಷ್ಟವಾಗಿ ಗುರುತಿಸಿದೆ.
ರೈತರ ಹೊಲಗಳಿಗೆ ನೀರು ಹರಿಯದಂತೆ ಕಳಪೆ ಕಾಮಗಾರಿ ನಿರ್ವಹಿಸಿದ ಎಂಜಿನಿಯರ್‌ಗಳ ಆಸ್ತಿಗಳನ್ನು ಲೋಕಾಯುಕ್ತರು ಜಪ್ತಿ ಮಾಡಿ ನಷ್ಟ ಭರ್ತಿ ಮಾಡಿಕೊಳ್ಳಬೇಕು. ಆಗ ಮುಖ್ಯ ಎಂಜಿನಿಯರ್ ಆಗಿದ್ದ ಜಗನ್ನಾಥ ಹಾಲಿಂಗೆ ಅವರನ್ನೂ ತನಿಖೆಗೆ ಒಳಪಡಿಸಬೇಕುವಿಶ್ವನಾಥ ತಡಕಲ್ ದೂರುದಾರ
ದಾಖಲೆ ನೀಡದೇ ಸಿಇ ಕಚೇರಿ ಅಸಹಕಾರ!:
ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್ ದಾಖಲೆಗಳು ಬಿಲ್ ಪಾವತಿ ವಿವರ ವರ್ಕ್‌ಸ್ಲಿಪ್ ಸೇರಿದಂತೆ ತಾಂತ್ರಿಕ ಅಂಶಗಳನ್ನೊಳಗೊಂಡ ದಾಖಲೆಗಳನ್ನು ಪೂರ್ಣಪ್ರಮಾಣದಲ್ಲಿ ಒದಗಿಸುವಂತೆ ಹಾಗೂ ಕಾಮಗಾರಿಯನ್ನು ನಿರ್ವಹಿಸಿದ ನೀರಾವರಿ ನಿಗಮದ ಅಧಿಕಾರಿಗಳನ್ನು ಪರಿಶೀಲನೆ ಸಂದರ್ಭದಲ್ಲಿ ನಿಯೋಜಿಸುವಂತೆ ಮುಖ್ಯ ಎಂಜಿನಿಯರ್‌ಗೆ ಹಲವು ಬಾರಿ ಪತ್ರ ಬರೆದು ತಿಳಿಸಿದ್ದರೂ ಅಗತ್ಯ ದಾಖಲೆಗಳನ್ನು ಒದಗಿಸದೇ ಅಸಹಕಾರ ತೋರಿಸಿದ್ದಾರೆ ಎಂದು ತನಿಖಾಧಿಕಾರಿ ಯೋಗೇಶ ಎಂ. ಅವರು ಲೋಕಾಯುಕ್ತರಿಗೆ ಸಲ್ಲಿಸಿದ ತನಿಖಾ ವರದಿಯಲ್ಲಿ ತಿಳಿಸಿದ್ದಾರೆ. ಕಾಮಗಾರಿಯು ಪ್ರಸ್ತುತ ನಿರ್ವಹಣೆಯಲ್ಲಿ ಇದ್ದರೂ ಒಡೆದಿರುವ ಹಾಳಾಗಿರುವ ಮತ್ತು ಪೂರ್ಣಗೊಳಿಸದ ಅಂಶಗಳನ್ನು ಸರಿಪಡಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಿಲ್ಲ. ಗುತ್ತಿಗೆದಾರರು ಕಾಮಗಾರಿಯನ್ನು ಪೂರ್ಣಗೊಳಿಸುವಲ್ಲಿ ವಿಫಲರಾದಾಗ ಶಿಸ್ತು ಕ್ರಮ ಕೈಗೊಳ್ಳದೇ ಇರುವುದರಿಂದ ಸರ್ಕಾರಕ್ಕೆ ಆಗಿರುವ ಆರ್ಥಿಕ ನಷ್ಟಕ್ಕೆ ಮುಖ್ಯ ಎಂಜಿನಿಯರ್ ಕಾರಣ ಎಂದು ವರದಿ ತಿಳಿಸಿದೆ.
ಕಾಮಗಾರಿ ಅವಧಿಯಲ್ಲಿದ್ದ ಅಧಿಕಾರಿಗಳು ಗಂಡೋರಿ ನಾಲಾ ನೀರಾವರಿ ಯೋಜನೆಯ ಬಲದಂಡೆ ಮತ್ತು ಎಡದಂಡೆ ಆಧುನಿಕರಣ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಕೆಎನ್‌ಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಮುಖ್ಯ ಎಂಜಿನಿಯರ್ ಆರ್.ಎಲ್.ವೆಂಕಟೇಶ್ ಮುಖ್ಯ ಎಂಜಿನಿಯರ್ (ಪ್ರಭಾರ) ಸೂರ್ಯಕಾಂತ ಮಾಲೆ ಕಾರ್ಯಪಾಲಕ ಎಂಜಿನಿಯರ್ ಮಲ್ಲಿಕಾರ್ಜುನ ಜಾಕಾ ಎಇಇ ಸೈಯದ್ ಅಲ್ತಾಫ್ ಎಇಇ ಅಣ್ಣಪ್ಪ ಉದಗೀರ ಕಾರ್ಯನಿರ್ವಾಹಕ ಎಂಜಿನಿಯರ್ ಗೋಪಾಲ ರೆಡ್ಡಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.
ಸಿಂಗಲ್ ಟೆಂಡರ್ ₹4.5 ಕೋಟಿ ಹೆಚ್ಚುವರಿ ಮೊತ್ತ
‘ಗಂಡೋರಿ ನಾಲಾ ಆಧುನೀಕರಣ ಕಾಮಗಾರಿಯ ಗುತ್ತಿಗೆಯನ್ನು ರಾಜ್ಯದ ಪ್ರಭಾವಿ ಗುತ್ತಿಗೆದಾರರಾದ ಲಿಂಗಸುಗೂರಿನ ಎನ್.ಡಿ.ವಡ್ಡರ್ ಆ್ಯಂಡ್ ಕಂಪನಿಗೆ ವಹಿಸಲಾಗಿತ್ತು. ನಿಯಮಗಳ ಪ್ರಕಾರ ಒಬ್ಬರೇ ಟೆಂಡರ್ ಹಾಕಿದರೆ ಆ ಟೆಂಡರ್ ಅನುಮೋದಿಸುವಂತಿಲ್ಲ. ಆದರೂ ಪ್ರಭಾವಕ್ಕೆ ಮಣಿದು ಸಿಂಗಲ್ ಟೆಂಡರ್‌ಗೆ ಅನುಮೋದನೆ ನೀಡಲಾಗಿದೆ’ ಎಂದು ಆರೋಪಿಸುತ್ತಾರೆ ದೂರುದಾರ ವಿಶ್ವನಾಥ ತಡಕಲ್. ‘ಅಲ್ಲದೇ ಮೂಲ ಟೆಂಡರ್ ಮೊತ್ತ ₹ 93.08 ಕೋಟಿ ಇತ್ತು. ಹೆಚ್ಚುವರಿಯಾಗಿ ಶೇ 5ರಷ್ಟು ಮೊತ್ತಕ್ಕೆ ಕರ್ನಾಟಕ ನೀರಾವರಿ ನಿಗಮ ಅನುಮೋದನೆ ನೀಡಿದೆ. ಹೀಗಾಗಿ ಟೆಂಡರ್ ಮೊತ್ತ ₹ 97.72 ಕೋಟಿಗೆ ಏರಿಕೆಯಾಗಿದೆ. ಇದರಲ್ಲಿ ಸುಮಾರು ₹4.5 ಕೋಟಿ ಅವ್ಯವಹಾರ ನಡೆದಿದ್ದು ಗುತ್ತಿಗೆ ಸಂಸ್ಥೆಯನ್ನು ಕೂಡಲೇ ಕಪ್ಪು ಪಟ್ಟಿಗೆ ಸೇರಿಸಬೇಕು’ ಎಂದು ಅವರು ಒತ್ತಾಯಿಸುತ್ತಾರೆ. ಗಂಡೋರಿ ನಾಲಾ ಆಧುನೀಕರಣ ಕಾಮಗಾರಿಯಲ್ಲಿ ನಡೆದಿರುವ ಲೋಪಗಳ ಕುರಿತು ‘ಪ್ರಜಾವಾಣಿ’ ಸ್ಥಳಕ್ಕೆ ಭೇಟಿ ನೀಡಿ ಸರಣಿ ವರದಿಗಳನ್ನು ಪ್ರಕಟಿಸಿತ್ತು. ಇದಾದ ಬೆನ್ನಲ್ಲೇ ಲೋಕಾಯುಕ್ತರು ಹಗರಣದ ತನಿಖೆಗೆ ಸೂಚನೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.