ADVERTISEMENT

ಕಲಬುರಗಿ | ವಾಜಪೇಯಿ ಬಡಾವಣೆ ನಿವೇಶನ ಖರೀದಿದಾರರಿಗೆ ಸಂಕಷ್ಟ

ಸುಪ್ರೀಂ ಮೆಟ್ಟಿಲೇರಿದ್ದ ರೈತರು: ನಿವೇಶನ ಮೌಲ್ಯದ ಮೊತ್ತ ಹೆಚ್ಚುವರಿ ಎರಡು ಪಟ್ಟು ಪಾವತಿಗೆ ಕುಡಾ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 0:48 IST
Last Updated 21 ಜುಲೈ 2024, 0:48 IST
ವೀರಭದ್ರ ಸಿಂಪಿ
ವೀರಭದ್ರ ಸಿಂಪಿ   

ಕಲಬುರಗಿ: ನಗರದ ಜೇವರ್ಗಿ ರಸ್ತೆಯಲ್ಲಿ ಸುಮಾರು 153 ಎಕರೆ ವಿಸ್ತೀರ್ಣದಲ್ಲಿ ಅಭಿವೃದ್ಧಿಪಡಿಸಿದ 2028 ನಿವೇಶನಗಳನ್ನು ಖರೀದಿಸಿದವರಿಗೆ ಇದೀಗ ಸಂಕಷ್ಟ ಎದುರಾಗಿದೆ. 2015ರಲ್ಲಿ ಹಂಚಿಕೆ ಮಾಡಿದ ಸಂದರ್ಭದಲ್ಲಿ ನಿಗದಿ ಮಾಡಿದ್ದ ದರಕ್ಕಿಂತ ಎರಡು ಪಟ್ಟು ಹೆಚ್ಚುವರಿ ಹಣ ಪಾವತಿಸುವಂತೆ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರವು ನಿವೇಶನ ಹಂಚಿಕೆಯಾದವರಿಗೆ ನೋಟಿಸ್‌ ನೀಡಲಾರಂಭಿಸಿದೆ.

2007ರಲ್ಲಿ ನಗರಾಭಿವೃದ್ಧಿ ಪ್ರಾಧಿಕಾರವು ಈ ವಸತಿ ಬಡಾವಣೆಯನ್ನು ನಿರ್ಮಿಸಲು ಅಧಿಸೂಚನೆ ಹೊರಡಿಸಿತ್ತು. ಈ ಸಂದರ್ಭದಲ್ಲಿ ರೈತರನ್ನು ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಆಗ ಪ್ರತಿ ಎಕರೆಗೆ ₹ 1.98 ಲಕ್ಷ ಮೊತ್ತ ನೀಡುವುದಾಗಿ ಪ್ರಾಧಿಕಾರ ಒಪ್ಪಂದ ಮಾಡಿಕೊಂಡಿತ್ತು. ಇದನ್ನು ಪ್ರಶ್ನಿಸಿ ರೈತರು ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಪ್ರತಿ ಚದರ ಅಡಿಗೆ ₹ 62ರಂತೆ ಪರಿಹಾರ ನೀಡಬೇಕು ಎಂದು ಸೂಚನೆ ನೀಡಿತ್ತು. ತೀರ್ಪು ಪ್ರಶ್ನಿಸಿ ಪ್ರಾಧಿಕಾರವು ಹೈಕೋರ್ಟ್ ಮೆಟ್ಟಿಲೇರಿತ್ತು. ಆಗ ಪ್ರತಿ ಚದರ ಅಡಿಗೆ ₹ 195 ನೀಡುವಂತೆ ಆದೇಶ ಹೊರಡಿಸಿತ್ತು. ನಂತರ ಸುಪ್ರೀಂಕೋರ್ಟ್ ಪ್ರತಿ ಚದರ ಅಡಿಗೆ ₹ 130 ನಿಗದಿ ಮಾಡಿ ಕಳೆದ ಫೆಬ್ರುವರಿಯಲ್ಲಿ ಆದೇಶ ಹೊರಡಿಸಿತ್ತು.

ರೈತರಿಗೆ ಭೂಪರಿಹಾರವನ್ನು ನೀಡಬೇಕಿರುವುದರಿಂದ ಎಲ್ಲ ನಿವೇಶನದಾರರು ಒಪ್ಪಿದ ಮೌಲ್ಯಕ್ಕಿಂತ ಹೆಚ್ಚಿನ ಹಣ ಪಾವತಿಸುವಂತೆ ಸೂಚಿಸಿ ನೋಟಿಸ್ ನೀಡಲಾರಂಭಿಸಿದೆ.

ADVERTISEMENT
2015ರಲ್ಲಿ 30x40 ನಿವೇಶನದ ಮೌಲ್ಯ ₹ 5 ಲಕ್ಷಕ್ಕಿಂತ ಕಡಿಮೆ ಇತ್ತು. ಇದೀಗ ₹ 15 ಲಕ್ಷ ಎಂದು ಹೇಳಿದರೆ ಹೇಗೆ? ಇದೇ ಹಣದಲ್ಲಿ ಆಗ 40x60 ಅಳತೆಯ ನಿವೇಶನ ಸಿಗುತ್ತಿತ್ತು. ಪ್ರಾಧಿಕಾರ ಹೆಚ್ಚಿನ ಹೊರೆ ಹಾಕಬಾರದು.
ವೀರಭದ್ರ ಸಿಂಪಿ, ನಿವೇಶನ ಪಡೆದವರು

ಈ ಕುರಿತು ಗೋಳು ವಾಜಪೇಯಿ ಬಡಾವಣೆಯಲ್ಲಿ ನಿವೇಶನ ಪಡೆದಿರುವ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೀರಭದ್ರ ಸಿಂ‍ಪಿ, ‘ಆ ಸಮಯದಲ್ಲಿ 30x40 ಅಳತೆಯ ನಿವೇಶನಕ್ಕೆ ₹ 5.20 ಲಕ್ಷ ನಿಗದಿ ಮಾಡಿ ಆರಂಭಿಕವಾಗಿ ಪ್ರಾಧಿಕಾರ ₹ 52 ಸಾವಿರ ಕಟ್ಟಿಸಿಕೊಂಡಿತ್ತು. ಬ್ಯಾಂಕ್ ಸಾಲ ಮಾಡಿ ಉಳಿದ ಹಣವನ್ನು ಪಾವತಿ ಮಾಡಿದ್ದೇವೆ. ಇದೀಗ ಹೆಚ್ಚುವರಿಯಾಗಿ ₹10 ಲಕ್ಷ ಪಾವತಿಸುವಂತೆ ಹೇಳುತ್ತಿದ್ದಾರೆ. ಪ್ರಾಧಿಕಾರದ ನಿವೇಶನಕ್ಕೆ ಅರ್ಜಿ ಹಾಕುವವರು ಬಡ, ಮಧ್ಯಮ ವರ್ಗದವರೇ ಇರುತ್ತಾರೆ. ಆದ್ದರಿಂದ ಹೆಚ್ಚುವರಿ ಮೊತ್ತವನ್ನು ಪ್ರಾಧಿಕಾರದವರೇ ಪಾವತಿಸಬೇಕು’ ಎಂದು ಒತ್ತಾಯಿಸಿದರು.

‘ಹೆಚ್ಚುವರಿ ಮೊತ್ತ ಪಾವತಿಸಲೇಬೇಕು’

ಕೋಟನೂರು (ಡಿ) ಗ್ರಾಮದ ವಾಜಪೇಯಿ ವಸತಿ ಬಡಾವಣೆ ನಿರ್ಮಾಣಕ್ಕೆ ಭೂಮಿ ನೀಡಿದ ರೈತರಿಗೆ ಹೆಚ್ಚಿನ ಪರಿಹಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿರುವುದರಿಂದ ಹೆಚ್ಚುವರಿ ಹಣವನ್ನು ನಿವೇಶನ ಪಡೆದವರು ಪಾವತಿಸಬೇಕಾಗುತ್ತದೆ. ಈ ಬಗ್ಗೆ ನಿವೇಶನ ಹಂಚಿಕೆ ಸಂದರ್ಭದಲ್ಲಿ ನೀಡಲಾದ ಹಂಚಿಕೆ ಪತ್ರದಲ್ಲಿಯೇ ಷರತ್ತು ವಿಧಿಸಲಾಗುತ್ತದೆ. ಅದನ್ನು ಒಪ್ಪಿ ಅವರು ಸಹಿ ಮಾಡಿರುತ್ತಾರೆ. ಹಲವರಿಗೆ ಹೆಚ್ಚುವರಿ ಮೊತ್ತ ಪಾವತಿಗೆ ನೋಟಿಸ್ ಕಳುಹಿಸಲಾಗಿದೆ. ಮೂರ್ನಾಲ್ಕು ಜನ ಪಾವತಿ ಮಾಡಿದ್ದಾರೆ. ಹೆಚ್ಚಿನ ದರ ಆಗುತ್ತದೆ ಎನ್ನುವವರು ತಮ್ಮ ನಿವೇಶನವನ್ನು ಮರಳಿಸಲು ಅವಕಾಶವಿದೆ. – ಗಂಗಾಧರ ಮಳಗಿ ಆಯುಕ್ತ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.