ಕಲಬುರಗಿ: ಕೊರೊನಾ ಸಂದರ್ಭದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಉಂಟಾಗಿದ್ದರಿಂದ ಪಿ.ಎಂ. ಕೇರ್ಸ್ ನಿಧಿಯಲ್ಲಿ ಮಂಜೂರಾಗಿದ್ದ ಆಮ್ಲಜನಕ ಘಟಕಗಳನ್ನು ಇಲ್ಲಿನ ಜಿಮ್ಸ್ ಆವರಣದಲ್ಲಿ ಗುರುವಾರ ವಸತಿ ಸಚಿವ ವಿ.ಸೋಮಣ್ಣ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರು ಸೇವೆಗೆ ಸಮರ್ಪಿಸಿದರು.
ಪಿ.ಎಂ. ಕೇರ್ಸ್ ನಿಧಿಯಿಂದ ಆರಂಭಿಸಲಾದ ಒಂದು ಸಾವಿರ ಎಲ್‌ಪಿಎಂ ಮತ್ತು ಎಲ್ ಅಂಡ್ ಟಿ ಕಂಪನಿಯ ಸಿಎಸ್‌ಆರ್ ನಿಧಿಯಲ್ಲಿ 500 ಎಲ್‌ಪಿಎಂ ಸಾಮರ್ಥ್ಯದ ಘಟಕಗಳ ಗುಂಡಿಯನ್ನು ಒತ್ತುವ ಮೂಲಕ ಸಚಿವದ್ವಯರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸೋಮಣ್ಣ, ‘ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಉಂಟಾದ ಆಮ್ಲಜನಕದ ಕೊರತೆಯನ್ನು ಗಮನದಲ್ಲಿ ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆಸ್ಪತ್ರೆಗಳಲ್ಲಿ ಉತ್ಪಾದನಾ ಘಟಕಗಳ ಸ್ಥಾಪನೆ ಮಾಡಿದೆ. ಈ ಘಟಕಗಳು ಕೇವಲ ಕೊರೊನಾ ಪೀಡಿತರಿಗೆ ಮಾತ್ರವಲ್ಲದೇ ಮುಂದಿನ ದಿನಗಳಲ್ಲಿ ವೈದ್ಯಕೀಯ ಆಕ್ಸಿಜನ್ ಅಗತ್ಯವಾದ ಸಾಮಾನ್ಯ ರೋಗಿಗಳಿಗೂ ಉಪಯೋಗವಾಗಲಿದೆ’ ಎಂದರು.
ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ ಮಾತನಾಡಿ, ‘ಆಮ್ಲಜನಕ ಉತ್ಪಾದನಾ ಘಟಕಗಳ ಆರಂಭದಿಂದ ರೋಗಿಗಳಿಗೆ ಪೂರೈಸಲು ಮತ್ತಷ್ಟು ಸಹಕಾರಿಯಾಗಲಿದೆ. ಆಸ್ಪತ್ರೆಯ ಆವರಣದಲ್ಲೇ ಆಮ್ಲಜನಕ ಉತ್ಪಾದನೆಯಾಗುವುದರಿಂದ ಅಭಾವದ ಭೀತಿ ಇರುವುದಿಲ್ಲ’ ಎಂದು ಹೇಳಿದರು.
ಪಿ.ಎಂ. ಕೇರ್ಸ್ ಅಡಿ ಒಂದು ಸಾವಿರ ಎಲ್‌ಪಿಎಂ ಆಕ್ಸಿಜನ್ ಉತ್ಪಾದನಾ ಘಟಕದ ಯಂತ್ರಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಪೂರೈಸಿದೆ. ಸಿವಿಲ್ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡಿದೆ ಎಂದು ಮಾಹಿತಿ ನೀಡಿದರು.
ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಜಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಫಿಯೋದ್ಧಿನ್, ಜಿಲ್ಲಾ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.