ಸೈದಾಪುರ: ‘ಇಂದಿನ ಮಕ್ಕಳಲ್ಲಿ ಬುದ್ಧಿಶಕ್ತಿಯ ಕೊರತೆಯಿಲ್ಲ. ಆದರೆ, ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ತಮ್ಮ ಮಕ್ಕಳಿಗೆ ಮನೆಯಲ್ಲಿಯೇ ಉತ್ತಮ ಸಂಸ್ಕಾರ ನೀಡಬೇಕು’ ಎಂದು ಹಾರಿಕಾ ಮಂಜುನಾಥ ಅಭಿಪ್ರಾಯಪಟ್ಟರು.
ಪಟ್ಟಣದ ಸಿದ್ದಚೇತನಾಶ್ರಮದ ಸಿದ್ಧಾರೂಢ ಮಠದಲ್ಲಿ ಹಮ್ಮಿಕೊಂಡಿರುವ ಶ್ರಾವಣ ಮಾಸದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ನಮ್ಮ ದೇಶದ ಆತ್ಮವೇ ಆಧ್ಯಾತ್ಮಕತೆಯ ಸಂಸ್ಕೃತಿ. ಈ ದಿವ್ಯ ಪರಂಪರೆಯನ್ನು ಪ್ರತಿಯೊಬ್ಬರೂ ಅರಿಯಬೇಕಾಗಿದೆ. ಭಾರತದ ಜ್ಞಾನ ಪರಂಪರೆಯು ಜಗತ್ತಿನ ಬೇರಾವ ದೇಶದಲ್ಲಿ ಕಾಣಲು ಸಾಧ್ಯವಿಲ್ಲ. ಇಂದು ಕಣ್ಣಿಗೆ ಕಾಣುವ ಆಯ್ಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕಾಗಿ ಲಕ್ಷಾಂತರ ಕರ ಸೇವಕರ ಬಲಿದಾನವಾಗಿದೆ. ಅಂತಹ ನಾಡಿನಲ್ಲಿ ಜನಿಸಿದ ನಾವುಗಳು ನಮ್ಮ ಮನೆಮನೆಯಲ್ಲಿ ರಾಮ ಜನಿಸಬೇಕು. ಅಂದಾಗ ರಾಮರಾಜ್ಯವಾಗುತ್ತದೆ’ ಎಂದರು.
‘ತಾಯಂದಿರು ಮಕ್ಕಳಿಗೆ ಮಹಾನ್ ಗ್ರಂಥಗಳಾದ ರಾಮಯಣ, ಮಹಾಭಾರತ ಮತ್ತು ಭಗವದ್ಗೀತೆ ಸೇರಿದಂತೆ ನಮ್ಮ ಪೂರ್ವಜರು ಕೊಟ್ಟಿರುವ ವಚನ, ಶ್ಲೋಕಗಳನ್ನು ತಿಳಿಸಬೇಕು. ಕನಿಷ್ಠ ಪ್ರತಿದಿನ ಭಜನೆ ಮಾಡುವುದನ್ನು ಕಲಿಸಬೇಕು. ಇದರಿಂದಾಗಿ ನಮ್ಮ ಮನೆ ವಿಭಜನೆಯಾಗುವುದಿಲ್ಲ. ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಮಾನವ ಸಮಾಜಕ್ಕೆ ಉತ್ತಮ ಪ್ರಜೆಯನ್ನು ನೀಡಬೇಕು’ ಎಂದರು.
ಸಾನ್ನಿಧ್ಯ ವಹಿಸಿದ್ದ ಸಿದ್ಧಾರೂಢ ಮಠದ ಪೀಠಾಧಿಪತಿ ಸೋಮೇಶ್ವರಾನಂದ ಸ್ವಾಮೀಜಿ ಮಾತನಾಡಿ, ‘ಪ್ರತಿ ಮನೆಯು ಸಂಸ್ಕಾರ ನೀಡುವ ಕೇಂದ್ರಗಳಾಗಬೇಕು. ಆಗ ಪ್ರತಿ ಮನೆಯಿಂದ ಹಾರಿಕಾಳಂತಹ ಪುತ್ರಿ ಜನಿಸುತ್ತಾಳೆ’ ಎಂದು ಹೇಳಿದರು.
ಈ ವೇಳೆ ಸುಭಾಷ್ ಶೇಠ ದೋಕಾ, ಬಿ.ಬಿ. ಹೆಬ್ಬಾಳೆ, ವಿಶ್ವನಾಥರೆಡ್ಡಿ ಚಿಗಾನೂರು, ಮಲ್ಲುಗೌಡ ಸೈದಾಪುರ, ಬಾಲಪ್ಪ ವಿಶ್ವಕರ್ಮ, ವೀರರೆಡ್ಡಿಗೌಡ ಬಾಲಛೇಡ್, ದೇವು ಘಂಟಿ, ಚೈನರಾಮ್, ತಾಯಪ್ಪ ಚಿಗಿರಿ, ದೇವು ಕಲಾಲ್ ಸೇರಿದಂತೆ ಹೆಗ್ಗಣಗೇರಾ, ನೀಲಹಳ್ಳಿ, ರಾಂಪೂರು, ಬೆಳಗುಂದಿ, ಗೊಂದಡಗಿ, ಬಾಲಛೇಡ್ ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.